ಬೆಳೆ ಹಾನಿ ಪರಿಶೀಲಿಸಿದ ಶಾಸಕ ಉದಾಸಿ

ಹಾನಗಲ್ಲ;ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ತಾಲೂಕಿನಾದ್ಯಂತ ನೆಲ ಕಚ್ಚಿರುವ ಬಾಳೆ, ಮಾವು, ಅಡಕೆ ಮುಂತಾದ ತೋಟಗಳಿಗೆ ಶಾಸಕ ಸಿ.ಎಂ. ಉದಾಸಿ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿ ಫಸಲು ಹಾನಿಯ ಕುರಿತು ರೈತರೊಂದಿಗೆ ಸಮಾಲೋಚನೆ ನಡೆಸಿದರು.

ಬುಧವಾರ ಬೆಳಗ್ಗೆ ತಾಲೂಕಿನ ಚಿಕ್ಕಾಂಶಿ, ಹೊಸೂರ, ಅಕ್ಕಿಆಲೂರ, ಸುರಳೇಶ್ವರ ಮೊದಲಾದ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಸಿ.ಎಂ. ಉದಾಸಿ ಅವರು, ಬಾಳೆ, ಮಾವು, ಅಡಕೆ, ಗೋವಿನಜೋಳ, ಭತ್ತದ ಫಸಲು ಹಾಳಾಗಿರುವುದನ್ನು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕಾಲಿಕ ಮಳೆ-ಗಾಳಿಗೆ ಕೃಷಿ, ತೋಟಗಾರಿಕೆ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿವೆ. ಹಿಂದೆಂದೂ ಇಷ್ಟು ಹಾನಿಯಾಗಿರಲಿಲ್ಲ. ತಾಲೂಕಿನಾದ್ಯಂತ ಮನೆಗಳೂ ಭಾಗಶಃ ಹಾನಿಯಾಗಿವೆ. ತಾಲೂಕಾಡಳಿತ, ಜಿಲ್ಲಾಡಳಿತ ಈ ಕುರಿತು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದರು.

ಜಿಲ್ಲಾಧಿಕಾರಿಯೊಂದಿಗೆ ರ್ಚಚಿಸಿದ್ದು, ತಾಲೂಕಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವಂತೆ ಮನವಿ ಮಾಡಿದ್ದೇನೆ. ತಾಲೂಕಿನಲ್ಲಿ ಒಟ್ಟು 19 ಮನೆಗಳು ಮಳೆ-ಗಾಳಿಗೆ ಜಖಂಗೊಂಡಿವೆ. ಇದಕ್ಕಾಗಿ 98,800 ರೂ. ಹಾನಿ ಅಂದಾಜಿಸಲಾಗಿದೆ. 3 ಗ್ರಾಮಗಳಲ್ಲಿ 41 ರೈತರ 48 ಹೆಕ್ಟೇರ್ ಭತ್ತ ನಾಶವಾಗಿದ್ದು, 6.55 ಲಕ್ಷ ರೂ. ಹಾನಿ ಅಂದಾಜು ಮಾಡಲಾಗಿದೆ. ತಾಲೂಕಿನ 169 ರೈತರು ಬೆಳೆದಿದ್ದ ತೋಟಗಾರಿಕೆ ಬೆಳೆಯಾದ ಬಾಳೆ 80 ಹೆಕ್ಟೇರ್​ನಷ್ಟು ಹಾನಿಯಾಗಿದೆ. ಮಾವು, ಅಡಕೆ ಸೇರಿ 3.34 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. ಸದ್ಯ ತಾತ್ಕಾಲಿಕ ಸಮೀಕ್ಷೆಯಿಂದ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಉದಾಸಿ ವಿವರಿಸಿದರು.

ಭತ್ತ ಮಾರಿದ ರೈತರಿಗೆ ಹಣ ಬಂದಿಲ್ಲ:ಹಾನಗಲ್ಲ ತಾಲೂಕಿನಲ್ಲಿ ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ 2018ರ ಡಿಸೆಂಬರ್ ಕೊನೆಯಲ್ಲಿ ಪ್ರಾರಂಭಗೊಂಡು ಖರೀದಿಸಿದ್ದರೂ, ಮೂರು ತಿಂಗಳಿನಿಂದ ರೈತರಿಗೆ ಹಣ ನೀಡಿಲ್ಲ. ಪ್ರತಿ ಕ್ವಿಂಟಾಲ್​ಗೆ 1750 ರೂ. ನಂತೆ ತಾಲೂಕಿನ 448 ರೈತರಿಂದ, 16,975 ಕ್ವಿಂಟಾಲ್ ಭತ್ತ ಖರೀದಿಸಲಾಗಿದೆ. ಈ ಕುರಿತು ರೈತರಿಗೆ 2.97 ಕೋಟಿ ರೂ. ಬರಬೇಕಾದ ಬಾಕಿಯಿದೆ. 3 ತಿಂಗಳ ಬಡ್ಡಿ ಹಣದೊಂದಿಗೆ ಭತ್ತದ ಹಣ ಪಾವತಿಸಬೇಕು. ರಾಜ್ಯ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಖರೀದಿಸಿದ 30 ದಿನದೊಳಗೆ ಹಣ ಪಾವತಿಸುವಂತಾಗಬೇಕು ಎಂದು ಒತ್ತಾಯಿಸಿದರು.

ರೈತರಾದ ಬಿ.ಆರ್. ಪಾಟೀಲ, ರಾಜಣ್ಣ ಪಟ್ಟಣದ, ಸಿದ್ದನಗೌಡ ಪಾಟೀಲ, ವಸಂತ ಸುಣಗಾರ, ವಾಸುದೇವ ಮೂಡಿ, ಶಿವಪ್ಪ ಕಾಡಣ್ಣನವರ, ನಿಂಗಪ್ಪ ಕರಬುಳ್ಳೇರ, ಮಂಜಣ್ಣ ನರೇಗಲ್, ನಾಗೇಶ ಹರವಿ, ಮೂಕಣ್ಣ ಕುಮಶಿ, ಚಂದ್ರಶೇಖರ ಬ್ಯಾಡಗಿ, ದೇವರಾಜ ಸುಣಗಾರ, ಬಸಯ್ಯ ಮರಡೂರಮಠ, ರಾಜಣ್ಣ ಗೌಳಿ, ಮೆಹಬೂಬಲಿ ಬ್ಯಾಡಗಿ, ಉದಯ ವಿರುಪಣ್ಣನವರ, ಬಸಣ್ಣ ಸೂರಗೊಂಡರ ಇತರರಿದ್ದರು.

ಹಾನಗಲ್ಲ ತಾಲೂಕಿನ ಬೆಂಬಲ ಬೆಲೆ ಕೇಂದ್ರಕ್ಕೆ ಭತ್ತ ನೀಡಿದ 448 ರೈತರಿಗೆ ಬರಬೇಕಾದ ಬಾಕಿ ಹಣ ಸುಮಾರು 3 ಕೋಟಿ ರೂ. ತಕ್ಷಣ ನೀಡುವಂತೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಆಯುಕ್ತ ಕುಮಾರ ಅವರೊಂದಿಗೆ ರ್ಚಚಿಸಿದ್ದೇನೆ. ಇನ್ನು 2-3 ದಿನಗಳಲ್ಲಿ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ.

| ಸಿ.ಎಂ. ಉದಾಸಿ, ಶಾಸಕ, ಹಾನಗಲ್ಲ