ಹಾವೇರಿ: ಜಿಲ್ಲೆಯಲ್ಲಿ ಬೆಳೆ ದರ್ಶಕ ಆಪ್ ಮೂಲಕ ಸಂಗ್ರಹಿಸಿರುವ ಬೆಳೆ ಸಮೀಕ್ಷೆಗೆ ಆಕ್ಷೇಪಣೆ ಸಲ್ಲಿಸಲು ಕೃಷಿ ಇಲಾಖೆ ನೀಡಿದ್ದ ಗಡುವು ಮುಗಿದಿದ್ದು, ರೈತರಿಂದ ಸೂಕ್ತ ಸ್ಪಂದನೆ ದೊರಕಿಲ್ಲ. ಇದರಿಂದ ಬೆಳೆ ವಿಮೆ ಹಾಗೂ ಬೆಂಬಲ ಬೆಲೆಯಡಿ ಕೃಷಿ ಉತ್ಪನ್ನ ಖರೀದಿ ಸಮಯದಲ್ಲಿ ಗೊಂದಲವಾಗುವ ಸಂಶಯ ರೈತರಲ್ಲಿ ಮೂಡಿದೆ.
ಜಿಲ್ಲೆಯಲ್ಲಿ 4 ಲಕ್ಷಕ್ಕೂ ಅಧಿಕ ರೈತರಿದ್ದು, ಬೆಳೆ ದರ್ಶಕ ಆಪ್ನಲ್ಲಿ ನಮೂದಿಸಿರುವ ಬೆಳೆಯ ಮಾಹಿತಿಯ ಸಮೀಕ್ಷೆಯ ಪರಿಶೀಲನೆಯನ್ನು ಬಹುಪಾಲು ರೈತರು ನಡೆಸಲು ಸಾಧ್ಯವಾಗಿಲ್ಲ. ಕಳೆದ ವರ್ಷ ಜಿಲ್ಲೆಯಲ್ಲಿ ಕೇವಲ ಬೆಳೆ ವಿಮೆ ತುಂಬಿದ 75,347 ರೈತರಲ್ಲಿ 5,269 ರೈತರ ಬೆಳೆಯು ಬೆಳೆ ದರ್ಶಕ ಆಪ್ನಲ್ಲಿ ಮಿಸ್ವ್ಯಾಚ್ ಕಾರಣಕ್ಕೆ ವಿಮೆ ಹಣ ಇನ್ನೂವರೆಗೂ ತಲುಪಿಲ್ಲ. ಇನ್ನೂ 4 ಲಕ್ಷಕ್ಕೂ ಅಧಿಕ ರೈತರ ಬೆಳೆ ಸಮೀಕ್ಷೆಯ ಮಾಹಿತಿಯನ್ನು ಬೆಳೆ ದರ್ಶಕ ಆಪ್ನಲ್ಲಿ ಅಳವಡಿಸಿ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಜ. 30ರ ಗಡುವು ನೀಡಲಾಗಿತ್ತು. ಆದರೆ, ಕೃಷಿ ಇಲಾಖೆಯ ಈ ಸೂಚನೆಗೆ ಬಹುಪಾಲು ರೈತರಿಂದ ಸ್ಪಂದನೆಯೇ ಸಿಕ್ಕಿಲ್ಲ. ಕೇವಲ 1,536 ರೈತರು ಮಾತ್ರ ಆಕ್ಷೇಪಣೆ ಸಲ್ಲಿಸಿದ್ದಾರೆ.
ಬಹಳಷ್ಟು ರೈತರಿಗೆ ಮಾಹಿತಿಯೇ ಇಲ್ಲ: ಬೆಳೆ ದರ್ಶಕ ಆಪ್ನಲ್ಲಿರುವ ಬೆಳೆ ಮಾಹಿತಿ ತಪ್ಪಾಗಿದ್ದರೆ ಆಪ್ನಲ್ಲಿ ಹಾಗೂ ವೆಬ್ಸೈಟ್ನಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿತ್ತು. ಅದರಲ್ಲಿ ಮೊಬೈಲ್ನಲ್ಲಿ ಬೆಳೆ ದರ್ಶಕ ಆಪ್ ಅಳವಡಿಸಿಕೊಂಡ 1,290 ರೈತರು, ವೆಬ್ಸೈಟ್ನಲ್ಲಿ 246 ರೈತರು ಸೇರಿ ಒಟ್ಟು 1,536 ರೈತರು ಮಾತ್ರ ಆಕ್ಷೇಪಣೆ ಸಲ್ಲಿಸಿದ್ದಾರೆ. ಕಳೆದ ವರ್ಷದ ಬೆಳೆ ವಿಮೆಯ ಮಿಸ್ವ್ಯಾಚ್ ಪ್ರಕರಣಕ್ಕೆ ಹೋಲಿಸಿದರೆ ಈ ಸಂಖ್ಯೆ ತೀರಾ ಕಮ್ಮಿಯಾಗಿದೆ. ಬಹುಪಾಲು ರೈತರಿಗೆ ಬೆಳೆ ದರ್ಶಕ ಆಪ್ನ ಮಾಹಿತಿಯೇ ಇಲ್ಲ. ಹೀಗಾಗಿ ರೈತರಿಗೆ ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗಿಲ್ಲ. ಅದರಲ್ಲಿಯೂ ಕೊನೆ ದಿನವಾದ ಜ. 30ರಂದು ಆಪ್ ಸರ್ವರ್ ಸಮಸ್ಯೆಯಿಂದ ಓಪನ್ ಆಗಿಲ್ಲ ಎಂದು ಕೆಲ ರೈತರು ತಿಳಿಸಿದ್ದಾರೆ.
ಜಿಲ್ಲೆಯ ಬಹುಪಾಲು ರೈತರ ಬಳಿ ಅಂಡ್ರಾಯ್್ಡ ಮೊಬೈಲ್ ಇಲ್ಲ. ಇದ್ದರೂ ಅದರಲ್ಲಿ ಬೆಳೆ ದರ್ಶಕ ಆಪ್ನ್ನು ಡೌನ್ಲೋಡ್ ಮಾಡಿಕೊಂಡು ಆಕ್ಷೇಪಣೆ ಸಲ್ಲಿಸುವುದು ಕಷ್ಟದ ಕೆಲಸವಾಗಿದೆ. ಉತ್ತಿ, ಬಿತ್ತಿ ಬೆಳೆ ಬೆಳೆಯಲು ತಿಳಿಸಿದರೆ ಸುಲಭವಾಗಿ ಮಾಡುತ್ತೇವೆ. ಸರ್ಕಾರ ಕೃಷಿ ಇಲಾಖೆಯ ಮೂಲಕವೇ ಸರಿಪಡಿಸಬೇಕು. ಅದು ಬಿಟ್ಟು ರೈತರಿಗೆ ಆಪ್ ಮೂಲಕ ಸರಿಪಡಿಸಲು ತಿಳಿಸಿರುವುದು ಸರಿಯಲ್ಲ. ಬೆಳದರ್ಶಕ ಆಪ್ನ್ನು ಇನ್ನೂ ಕೆಲ ವರ್ಷಗಳ ಕಾಲ ಪ್ರಾಯೋಗಿಕವಾಗಿ ಮುಂದುವರಿಸಬೇಕು. ಎಲ್ಲವೂ ಸರಿಯಾದ ನಂತರ ಜಾರಿಗೊಳಿಸಬೇಕು. ಈ ಕುರಿತು ಪ್ರತಿಭಟನೆ ನಡೆಸಿ ಕೃಷಿ ಇಲಾಖೆಯವರಿಗೂ ತಿಳಿಸಲಾಗಿದೆ. ಕೃಷಿ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಮುಂದೆ ರೈತರಿಗೆ ಸಾಕಷ್ಟು ತೊಂದರೆಯಾಗಲಿದೆ. ಈಗಾಗಲೇ 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ತುಂಬಿದ 5,267 ರೈತರಿಗೆ 10.65 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರ ಬಿಡುಗಡೆಗೊಂಡಿದ್ದರೂ ವಿಮೆ ಕಂಪನಿಯವರು ತಡೆ ಹಿಡಿದಿದ್ದಾರೆ. ಹೀಗಾಗಿ ಮುಂದೆ ಎಲ್ಲ ಸೌಲಭ್ಯ ಪಡೆಯಲು ರೈತರು ಬೀದಿಗಿಳಿಯುವುದು ಅನಿವಾರ್ಯವಾಗಲಿದೆ.
ಬೆಳೆ ದರ್ಶಕ ಆಪ್ನಲ್ಲಿ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದ್ದ ಜ. 30ರಂದು ಆಪ್ ಓಪನ್ ಆಗಿಲ್ಲ. ಹೀಗಾಗಿ ಆಕ್ಷೇಪಣೆ ಸಲ್ಲಿಸಲು ಆಗಿಲ್ಲ. ಇದನ್ನು ಕೃಷಿ ಇಲಾಖೆ ಗಮನಕ್ಕೆ ತಂದಾಗ ಅವರು ಪ್ರಯತ್ನ ಮಾಡಿದರೂ ಸರ್ವರ್ ಸಮಸ್ಯೆ ಕಾಡಿದೆ. ಇದನ್ನು ತಹಸೀಲ್ದಾರ್ ಗಮನಕ್ಕೂ ತರಲಾಗಿದೆ. ರೈತರ ಬದಲು ಅಧಿಕಾರಿಗಳೇ ಸಮರ್ಪಕ ಸಮೀಕ್ಷೆ ನಡೆಸಬೇಕು. ಮುಂದೆ ರೈತರಿಗೆ ತೊಂದರೆ ಕೊಟ್ಟರೇ ಹೋರಾಟ ಅನಿವಾರ್ಯವಾಗಲಿದೆ.
| ಮಲ್ಲಿಕಾರ್ಜುನ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ, ರೈತ ಸಂಘ, ಹಸಿರುಸೇನೆ
ಬೆಳೆ ದರ್ಶಕ ಮೊಬೈಲ್ಆಪ್ನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದೆ. ಜ. 30ರೊಳಗೆ ಜಿಲ್ಲೆಯಲ್ಲಿ 1,536 ರೈತರು ಆಕ್ಷೇಪಣೆ ಸಲ್ಲಿಸಿದ್ದು, ಅವುಗಳನ್ನು ಪುನಃ ಸಮೀಕ್ಷೆ ನಡೆಸಿ ತಪ್ಪು ಸರಿಪಡಿಸಲಾಗುತ್ತಿದೆ. ಈಗಾಗಲೇ ಬಹುತೇಕ ಆಕ್ಷೇಪಣೆಗಳನ್ನು ಇತ್ಯರ್ಥಗೊಳಿಸಲಾಗಿದೆ.
| ಬಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ಹಾವೇರಿ