ಬೆಳೆ ವಿಮೆ ಪರಿಹಾರ ವಿತರಿಸಿ

ಮುಂಡಗೋಡ: ಫಸಲ್ ಬಿಮಾ ಬೆಳೆ ವಿಮೆ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಮುಂಡಗೋಡ ತಾಲೂಕು ಘಟಕದವರು ಗುರುವಾರ ತಾಲೂಕಿನ ಮಳಗಿ ಗ್ರಾಮದ ಶಿರಸಿ-ಹುಬ್ಬಳ್ಳಿ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆ ನಡೆಸಿದರು.

ಸಹಸ್ರಾರು ರೈತರು ಶಿವಗಣೇಶ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಸರ್ಕಾರದ ವ್ಯವಸ್ಥೆಯ ವಿರುದ್ಧ ಘೊಷಣೆ ಕೂಗಿದರು. ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಲೋಪದೋಷದಿಂದಾಗಿ ತಾಲೂಕಿನ ಬಹುತೇಕ ಗ್ರಾಪಂ ವ್ಯಾಪ್ತಿಯ ರೈತರಿಗೆ ಸಮರ್ಪಕ ಬೆಳೆ ವಿಮೆ ಸಿಗದೇ ತೀವ್ರ ಅನ್ಯಾಯವಾಗಿದೆ. ಈಗ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಟೆಂಡರ್ ಖಾಸಗಿ ಕಂಪನಿಗೆ ನೀಡಲಾಗಿದೆ. ಇದರಿಂದಾಗಿ ಹಣ ಉಳಿತಾಯದ ಉದ್ದೇಶದಿಂದ ಕಂಪನಿಯವರು ಸರಿಯಾಗಿ ಆಣೆವಾರಿ ನಡೆಸದೆ ರೈತರಿಗೆ ಸಮರ್ಪಕ ಬೆಳೆ ವಿಮೆ ಸಿಗದಂತೆ ಮೋಸ ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳ ಪಾತ್ರ ಕೂಡ ಇದೆ ಎಂದು ಆರೋಪಿಸಿದರು.

ಪಾಳಾ ಉಪ ತಹಸೀಲ್ದಾರ್ ಬಿ.ಎನ್. ಶೆಟ್ಟಿ ಸ್ಥಳಕ್ಕೆ ಆಗಮಿಸಿ, ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿ ಅಥವಾ ತಹಸೀಲ್ದಾರ್ ಸ್ಥಳಕ್ಕಾಗಮಿಸಿ ಸಂಪೂರ್ಣ ಮಾಹಿತಿ ಹಾಗೂ ಲಿಖಿತ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು. ಮಧ್ಯೆ ಪ್ರವೇಶಿಸಿದ ಮುಂಡಗೋಡ ಸಿಪಿಐ ಕಿರಣಕುಮಾರ ಮೇಲಧಿಕಾರಿಗಳು ಬರುವವರೆಗೆ ರಸ್ತೆ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು.

ಬಳಿಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ಸ್ಥಳಕ್ಕಾಗಮಿಸಿ 15 ದಿನದೊಳಗಾಗಿ ಫಸಲ್ ಬೀಮಾ ಯೋಜನೆ ಕಂಪನಿ ಅಧಿಕಾರಿಗಳನ್ನು ಕರೆಸಲಾಗುವುದು. ಅಲ್ಲದೆ, ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಶಂಕ್ರಪ್ಪ ಗಾಣಿಗೇರ, ಶಂಭಣ್ಣ ಕೋಳೂರ, ಹನುಮಂತಪ್ಪ ಗುಡ್ಡಣ್ಣವರ, ರಾಘವೇಂದ್ರ ಕಿರವತ್ತಿ, ರಮೇಶ ಜಿಗಳೇರ, ಲೋಹಿತ ಮಟ್ಟಿಮನಿ, ರಮೇಶ ಜಿಗಳೇರ, ಮಕ್ತುಮ್ಾಬ್ ತರ್ಲಗಟ್ಟಿ, ಆನಂದ ಪೂಜಾರ, ಪ್ರಮೋದ ಜಕ್ಕಣ್ಣವರ, ಪ್ರಕಾಶ ಪಾಲೇಕೊಪ್ಪ, ಚೇತನ ನಾಯಕ, ಶ್ರೀಕಾಂತ ಕೊಳಗಿ, ಹನುಮಂತ ಬೆಳವತ್ತಿ, ನಾಟನಾರ ಹನುಮ, ಇತರರು ಉಪಸ್ಥಿತರಿದ್ದರು.