ಬೆಳೆ ವಿಮೆಯಲ್ಲಿ ಲೋಪವಾದರೆ ಹುಷಾರ್

ಶಿವಮೊಗ್ಗ: ಬೆಳೆವಿಮೆ ನೋಂದಣಿಯಲ್ಲಿ ಉದಾಸೀನ ತೋರುವ ಅಧಿಕಾರಿಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ನೋಂದಣಿ ಕುಂಠಿತಕ್ಕೆ ಕಾರಣವಾಗುವ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೊಸನಗರದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆ ನಡೆಸಿದ ಅವರು, ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಫಲಾನುಭವಿಗಳನ್ನು ಕಾಲಮಿತಿಯಲ್ಲಿ ಆಯ್ಕೆ ಮಾಡಿ ಎಂದು ಸೂಚನೆ ನೀಡಿದರು.

ಕೃಷಿ ಸಮ್ಮಾನ್ ಯೋಜನೆಯ ಅರ್ಜಿಗಳನ್ನು ಆನ್​ಲೈನ್​ಗೆ ಜೋಡಣೆ ಮಾಡಬೇಕು. ಈಗಾಗಲೆ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕರಿಸಿ ಎಂದು ಸೂಚಿಸಿದರು.

ನಗರ ಆಶ್ರಯ ಯೋಜನೆ ಕುರಿತು ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಯೋಜನಾ ನಿರ್ದೇಶಕ ಪ್ರಮೋದ್, ಕಂದಾಯ ಹಾಗೂ ಅರಣ್ಯ ಇಲಾಖೆ ನಡುವಿನ ಸಮನ್ವಯತೆಯಿಂದ ಆಶ್ರಯ ನಿವೇಶನಕ್ಕೆ ಸ್ಥಳ ಗುರುತಿಸುವುದು ಸಮಸ್ಯೆಯಾಗಿದೆ ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಅದು ಸ್ವೀಕೃತವೇ ಎಂಬುದನ್ನು ತಿಳಿಸಬೇಕು. ವಿಳಂಬ ಧೋರಣೆ ಸಹಿಸುವುದಿಲ್ಲ ಎಂದು ಹೇಳಿದರು.

ಗ್ರಾಮಗಳಲ್ಲಿ ಅರಣ್ಯಹಕ್ಕು ಕಾಯ್ದೆಯಡಿ ಸಾಮುದಾಯಿಕ ಅರ್ಜಿಗಳನ್ನು ಪರಿಗಣಿಸಿ ಸ್ಮಶಾನ ಹಾಗೂ ಅಶ್ರಯ ಯೋಜನೆ ಕುರಿತು ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಯೋಜನಾ ನಿರ್ದೇಶಕ ಪ್ರಮೋದ್, ಕಂದಾಯ ಹಾಗೂ ಅರಣ್ಯ ಇಲಾಖೆ ನಡುವಿನ ಸಮನ್ವಯತೆಯಿಂದ ಆಶ್ರಯ ನಿವೇಶನಕ್ಕೆ ಸ್ಥಳ ಗುರುತಿಸುವುದು ಸಮಸ್ಯೆಯಾಗಿದೆ ಎಂದರು.

ಕಂದಾಯ ಹಾಗೂ ಅರಣ್ಯ ಇಲಾಖೆ ನಡುವಿನ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುತ್ತದೆ. ಸಮಸ್ಯೆ ಇರುವ ಸರ್ವೆ ನಂಬರ್​ಗಳಲ್ಲಿ ಶೀಘ್ರವೆ ಜಂಟಿಸರ್ವೆ ನಡೆಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.

ಗ್ರಾಮಗಳಲ್ಲಿ ಅರಣ್ಯಹಕ್ಕು ಕಾಯ್ದೆಯಡಿ ಸಾಮುದಾಯಿಕ ಅರ್ಜಿಗಳನ್ನು ಪರಿಗಣಿಸಿ ಸ್ಮಶಾನ ಹಾಗೂ ಆಶ್ರಯ ನಿವೇಶನಕ್ಕೆ ಪ್ರತ್ಯೇಕವಾಗಿ ಭೂಮಿ ಗುರುತಿಸಬೇಕು. ಮುಂದಿನ ತಿಂಗಳು ಕಂದಾಯ ಅದಾಲತ್ ನಡೆಯುವ ಹಿನ್ನೆಲೆಯಲ್ಲಿ ಕೂಡಲೆ ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪರಿಹರಿಸಬೇಕು ಎಂದು ಸೂಚಿಸಿದರು. ಈ ಹಿಂದಿನ ಜನಸ್ಪಂದನ ಸಭೆಯಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿ ಬಗ್ಗೆ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದರು. ಅಪರ ಜಿಲ್ಲಾಧಿಕಾರಿ ಶಿವರಾಮೇಗೌಡ ಉಪಸ್ಥಿತರಿದ್ದರು.

ಬರಿಗೈಲಿ ಬಂದವರಿಗೆ ತರಾಟೆ: ಜಿಲ್ಲಾ ಮಟ್ಟದ ಸಭೆಗೆ ಸಿದ್ಧತೆ ಮಾಡಿಕೊಳ್ಳದೆ ಆಗಮಿಸಿದ್ದ, ಮಾಹಿತಿ ಕೊಡಲು ತಡವರಿಸಿದ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆ ತೆಗೆದುಕೊಂಡರು. ಕೆಲ ಅಧಿಕಾರಿಗಳೂ ಸಭೆಗೆ ಹಾಜರಾಗುವ ಬದಲಿಗೆ ಕೆಳ ಹಂತದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕಳಿಸಿದ್ದು ಡಿಸಿ ಆಕ್ರೋಶಕ್ಕೆ ಕಾರಣವಾಯಿತು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.

ಸಭೆಯಲ್ಲಿ ಬೈಸಿಕೊಳ್ಳಲು ನಿಮಗೆ ನಾಚಿಕೆಯಾಗಬೇಕು. ಯಾವುದೆ ಮಾಹಿತಿ ಇಲ್ಲದ ಮೇಲೆ ಸಭೆಗೆ ಬರುವ ಔಚಿತ್ಯವಾದರೂ ಏನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆ ಕರೆದಿರುವಾಗ ಕಡೆಪಕ್ಷ ಯಾವ ಮಾಹಿತಿಯನ್ನು ಸಭೆಗೆ ಕೊಂಡೊಯ್ಯಬೇಕು ಎಂಬ ಕನಿಷ್ಠ ಅರಿವು ಇರಬೇಕು. ಅಷ್ಟೂ ಆಸಕ್ತಿ ಇಲ್ಲದ ಮೇಲೆ ನೀವು ಯಾವ ರೀತಿ ಕೆಲಸಮಾಡುತ್ತಿರಬಹುದು ಎಂದು ಕೆಲವರ ವಿರುದ್ಧ ಹರಿಹಾಯ್ದರು.

ಛೀಮಾರಿ ಹಾಕಬಹುದು, ಎಚ್ಚರವಿರಲಿ:ಶಿಷ್ಟಾಚಾರ ಉಲ್ಲಂಘನೆ ಮಾಡಿದರೆ ವಿಧಾನಸಭೆಗೆ ಕರೆಸಿ ಛೀಮಾರಿ ಹಾಕಬಹುದು. ಈ ಪರಿಸ್ಥಿತಿ ನಿಮಗೂ ಬಾರದಂತೆ ಎಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿ ದಯಾನಂದ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಯ ಹಲವು ದೂರುಗಳು ಬರುತ್ತಿವೆ. ವಿಧಾನಪರಿಷತ್ ಹಕ್ಕುಬಾಧ್ಯತಾ ಸಮಿತಿ ಕೂಡ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಶಿಷ್ಟಾಚಾರ ಉಲ್ಲಂಘಿಸಿಸುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಸಭೆಗೆ ಯಾರನ್ನು ಆಹ್ವಾನಿಸಬೇಕು ಎಂಬ ಕನಿಷ್ಠ ಜ್ಞಾನ ಅಧಿಕಾರಿಗಳಲ್ಲಿ ಇರಬೇಕು ಎಂದರು.

ಈ ಹಿಂದೆ ಶಿಷ್ಟಾಚಾರ ಉಲ್ಲಂಘನೆ ಆರೋಪದಲ್ಲಿ ಚಿಕ್ಕಮಗಳೂರಿನ ಅಧಿಕಾರಿಯೊಬ್ಬರನ್ನು ವಿಧಾನಸಭೆಗೆ ಕರೆಸಿ ಛೀಮಾರಿ ಹಾಕಲಾಗಿತ್ತು. ಆ ಪರಿಸ್ಥಿತಿ ನಿಮಗೂ ಬರಬಹುದು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಈಗಾಗಲೆ ಕೆಲ ಇಲಾಖೆ ಅಧಿಕಾರಿಗಳ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪದಲ್ಲಿ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಹಕ್ಕುಬಾಧ್ಯತಾ ಸಮಿತಿ ಸದಸ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ ಎಂದರು. ಯಾವುದೆ ಸರ್ಕಾರಿ ಕಾರ್ಯಕ್ರಮದ ಉದ್ಘಾನೆಗೆ ಮುನ್ನ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಸಂರ್ಪಸಿ ಕಾರ್ಯಕ್ರಮದ ದಿನಾಂಕವನ್ನು ಅವರಿಗೆ ತಿಳಿಸಿ. ಕಾರ್ಯಕ್ರಮದ ಏಳು ದಿನ ಮುನ್ನ ಅವರಿಗೆ ಮಾಹಿತಿ ನೀಡಬೇಕು ಎಂದರು.

Leave a Reply

Your email address will not be published. Required fields are marked *