ಬೆಳೆ ರಕ್ಷಣೆಗೆ ವಿದೇಶಿ ತಂತ್ರಜ್ಞಾನ ಅಗತ್ಯ

ಕುಮಟಾ: ರೈತರ ಬೆಳೆಗೆ ಕಾಡು ಪ್ರಾಣಿ ಹಾವಳಿ ತಡೆಗಟ್ಟಲು ವಿದೇಶಿ ತಂತ್ರಜ್ಞಾನ ಬಳಸಿಕೊಳ್ಳುವ ಅವಶ್ಯಕತೆ ಇದೆ. ಕಾಡಿನಲ್ಲಿ ಹಣ್ಣು-ಹಂಪಲು ಗಿಡದ ಕೊರತೆ, ಗಿಡಗ ಸಂತತಿ ನಾಶ, ಕೋತಿಯ ಬಗೆಗಿನ ಧಾರ್ವಿುಕ ಭಾವನೆ ಇತ್ಯಾದಿಗಳಿಂದ ಸಮಸ್ಯೆ ನಿಯಂತ್ರಣ ಕಷ್ಟವಾಗಿದೆ ಎಂದು ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜು ಎಂ.ಜೆ., ತಿಳಿಸಿದರು.

ಅವರು ಫೆವಾರ್ಡ್ ಯುಕೆ ಉತ್ತರ ಕನ್ನಡ ಮತ್ತು ಎವಿಪಿ ಸೇವಾ ಸಂಸ್ಥೆ ಕುಮಟಾ ವತಿಯಿಂದ ಇಲ್ಲಿನ ಕೃಷಿ ಡಿಪ್ಲೊಮಾ ಕಾಲೇಜ್ ಆವಾರದಲ್ಲಿ ಇತ್ತೀಚೆಗೆ ನಡೆದ ‘ಕಾಡು ಪ್ರಾಣಿಯಿಂದ ರೈತನ ಬೆಳೆ ರಕ್ಷಣೆ’ ಕುರಿತು ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಆರ್. ಹೆಗಡೆ ಹೊನ್ನಾವರ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಸಣ್ಣ ರೈತರು ಹೆಚ್ಚಿನ ಪ್ರಮಾಣದಲ್ಲಿದ್ದು, ಕೃಷಿ ಕಾಯಕವೇ ನಷ್ಟದಂತಿದೆ. ಇಂತಹ ಸಂದರ್ಭದಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಒಂದು ಸವಾಲು. ಹೊಲದಲ್ಲಿ ಶೇ. 50ರಷ್ಟು ಫಸಲನ್ನು ಕಾಡು ಪ್ರಾಣಿ ತಿಂದು ರೈತರಿಗೆ ತೊಂದರೆ ನೀಡುತ್ತಿದೆ ಎಂದರು.

ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ವಿಜ್ಞಾನಿ ಡಾ. ಸತೀಶ ಆರ್. ಗುನಗ, ಸಿಂಡ್​ಆರ್​ಸೆಟಿ ನಿರ್ದೇಶಕ ನವೀನಕುಮಾರ್ ಎ.ಟಿ. ಇನ್ನಿತರರು ಇದ್ದರು. ರೈತ ಆಸಕ್ತ ಗುಂಪಿನ ಸದಸ್ಯರು ಬೆಳೆ ನಾಶದ ಕುರಿತು ಅನಿಸಿಕೆ ಹಂಚಿಕೊಂಡರು. ಮಹಾವಿಷ್ಣು, ಜಟಗೇಶ್ವರ, ವನದೇವತಾ, ಧಾರಾನಾಥ, ಕೃಷಿಕ ಸಂಜೀವಿನಿ ಎವಿಪಿ ರೈತ ಆಸಕ್ತ ಗುಂಪುಗಳ ಸದಸ್ಯರು ಇದ್ದರು.

ಹತೋಟಿಗೆ ಕ್ರಮವಾಗುತ್ತಿಲ್ಲ: ಫೇವಾರ್ಡ್ ಯು.ಕೆ. ಕಾರ್ಯದರ್ಶಿ ಗಣಪತಿ ಎಸ್. ನಾಯ್ಕ ಮಾತನಾಡಿ, ಕಾಡು ಪ್ರಾಣಿಯಿಂದಾಗುವ ರೈತನ ಬೆಳೆ ಹತೋಟಿಗೆ ಸಮರ್ಪಕ ಕ್ರಮವಾಗುತ್ತಿಲ್ಲ. ಈ ಬಗೆಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಉಪತೋಟಗಾರಿಕಾ ನಿರ್ದೇಶಕರು ಶಿರಸಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊನ್ನಾವರ ಅವರಿಗೆ ತಜ್ಞರ ಸಮಿತಿ ರಚಿಸಲು ಸಲಹೆ ನೀಡಿದ್ದರೂ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅರಣ್ಯ ನಾಶದಿಂದ ಮನುಕುಲಕ್ಕೆ ಉಳಿಗಾಲವಿಲ್ಲ: ಸಿದ್ದಾಪುರ: ಅರಣ್ಯ ನಾಶದಿಂದ ಮನುಕುಲಕ್ಕೆ ಉಳಿಗಾಲ ಇಲ್ಲ. ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದರ ಜತೆಗೆ ಅರಣ್ಯದ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂದು ಕಸ್ತೂರ- ಹಲಗಡಿಕೊಪ್ಪ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಶಿವಾನಂದ ಗೌಡರ್ ಹೇಳಿದರು.

ತಾಲೂಕಿನ ಕಸ್ತೂರಿನಲ್ಲಿ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ, ಆಧಾರ ಸಂಸ್ಥೆ ಹಾಗೂ ಸ್ಥಳೀಯರ ಸಹಕರದೊಂದಿಗೆ ನಡೆದ ಬೆಂಕಿಯಿಂದ ಅರಣ್ಯ ಹಾಗೂ ವನ್ಯ ಪ್ರಾಣಿಗಳ ರಕ್ಷಣೆ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಉಪವಲಯ ಅರಣ್ಯ ಅಧಿಕಾರಿ ಮಂಜುನಾಥ ಸ್ವಾಮಿ, ಬೆಂಕಿಯಿಂದ ಅರಣ್ಯ ರಕ್ಷಣೆ ಮಾಡಲು, ಮುಂದಿನ ಪೀಳಿಗೆಗೆ ಅರಣ್ಯ ಉಳಿಸಲು, ಉತ್ತಮ ಸ್ವಾಸ್ಥ್ಯ ಸಮಾಜದ ನಿರ್ವಣಕ್ಕೆ ಗ್ರಾಮಸ್ಥರ ಸಹಕಾರ ಅವಶ್ಯ ಎಂದರು.

ಆಧಾರ ಸಂಸ್ಥೆ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಇದ್ದರು. ಕಡಕೇರಿಯ ಈಶ್ವರ ಕಲಾ ಸಂಘದಿಂದ ಅರಣ್ಯ ಹಾಗೂ ವನ್ಯ ಪ್ರಾಣಿಗಳ ರಕ್ಷಣೆ, ನೆಲ-ಜಲ, ಪರಿಸರ ಸಂರಕ್ಷಣೆ ಕುರಿತು ಬೀದಿ ನಾಟಕ ಹಾಗೂ ಜಾಗೃತ ಗೀತೆ ನಡೆಯಿತು.