ಬೆಳೆ ರಕ್ಷಣೆಗೆ ಬಿಯರ್ ಬಾಟಲ್

ನರೇಗಲ್ಲ: ಹೋಬಳಿ ವ್ಯಾಪ್ತಿಯ ಕೆಲ ಜಮೀನುಗಳ ಮರಗಳಲ್ಲಿ ಇತ್ತೀಚೆಗೆ ಬಿಯರ್ ಬಾಟಲಿಗಳು ನೇತಾಡುತ್ತಿವೆ. ಕೆಲ ಹೊಲಗಳಲ್ಲಿ ವಿವಿಧ ಪಕ್ಷಗಳ ಬಾವುಟಗಳು ಹಾರಾಡುತ್ತಿವೆ. ಜಿಂಕೆ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಕಂಡುಕೊಂಡ ತಂತ್ರವಿದು.

ಹೋಬಳಿ ಭಾಗದಲ್ಲಿ ಕೃಷಿ ಹೊಂಡಗಳು, ಹಳ್ಳಗಳು ಹೆಚ್ಚು ಇರುವುದರಿಂದ ಸದಾ ನೀರಿನ ಲಭ್ಯತೆ ಇರುತ್ತದೆ. ಹೀಗಾಗಿ ಈ ಭಾಗದಲ್ಲಿ ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹಿಂಡು ಹಿಂಡಾಗಿ ಹೊಲಕ್ಕೆ ನುಗ್ಗಿ ಬೆಳೆಯನ್ನು ತಿಂದು ತೇಗುತ್ತವೆ.

ಜಿಂಕೆ ಹಾವಳಿ ತಡೆಗೆ ಹಲವು ಪ್ರಯೋಗಗಳನ್ನು ನಡೆಸಿ ಬೇಸತ್ತ ರೈತರು ಈ ಬಾರಿ, ಕಡಿಮೆ ಖರ್ಚಿನ ಮಾಗೋಪಾಯ ಕಂಡುಕೊಂಡಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳು ಪ್ರಚಾರಕ್ಕೆ ಬಳಸಿದ್ದ ಪಕ್ಷದ ಬಾವುಟ, ಬ್ಯಾನರ್​ಗಳೇ ಅನ್ನದಾತರ ನೆರವಿಗೆ ಬಂದಿವೆ.

ಗಜೇಂದ್ರಗಡ ಮಾರ್ಗ ಮಧ್ಯೆ ಗಡ್ಡಿಹಳ್ಳ ದಾಟಿದರೆ, ನಿಡಗುಂದಿವರೆಗೂ ಹೊಲಗಳಲ್ಲಿ ರಾಜಕೀಯ ಪಕ್ಷಗಳ ಧ್ವಜಗಳೇ ಕಾಣಿಸುತ್ತಿವೆ. ಜಮೀನುಗಳಲ್ಲಿ 100 ಅಡಿಗೆ ಒಂದರಂತೆ ಧ್ವಜ ನೆಟ್ಟಿದ್ದಾರೆ. ಹಿಗಾಗಿ ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಧ್ವಜಗಳು ಬೆಳೆ ಕಾಯುತ್ತಿವೆ.

ಸೀಟಿ ಹೊಡೆಯುವ ಬಾಟಲಿ: ನಾಲ್ಕರಿಂದ ಐದು ಖಾಲಿ ಬಿಯರ್ ಬಾಟಲಿಗಳನ್ನು ದಾರದಿಂದ ಕಟ್ಟಿ ಅವುಗಳನ್ನು ಜಮೀನುಗಳ ಬದುವುಗಳಲ್ಲಿ ಇರುವ ಮರಗಳಿಗೆ ತೂಗು ಹಾಕಿದ್ದಾರೆ. ಕೆಲವರು ಜಮೀನಿನ ನಡುವೆ ಎರಡು ಕಂಬ ಅಳವಡಿಸಿ ಬಿಯರ್ ಬಾಟಲಿಗಳನ್ನು ತೂಗು ಹಾಕುತ್ತಿದ್ದಾರೆ. ಗಾಳಿ ಬೀಸಿದಾಗ, ಬಾಟಲಿಗಳಿಂದ ಶಬ್ದ ಬರುತ್ತದೆ. ಶಬ್ದಕ್ಕೆ ಬೆದರಿ ಜಿಂಕೆಗಳು ಹೊಲದತ್ತ ಸುಳಿಯುವುದಿಲ್ಲ ಎನ್ನುತ್ತಾರೆ ರೈತರು.

ಈ ಹಿಂದೆ ಟೇಪ್ ರೆಕಾರ್ಡರ್ ಕ್ಯಾಸೆಟ್ ರೀಲ್ ಕಟ್ಟಿ ಜಿಂಕೆಗಳನ್ನು ಬೆದರಿಸಲಾಗುತ್ತಿತ್ತು. ಆದರೆ, ಇದೀಗ ಕ್ಯಾಸೆಟ್ ಇಲ್ಲದಿರುವುದರಿಂದ, ವಿವಿಧ ಪಕ್ಷಗಳ ಧ್ವಜ ಹಾಗೂ ಬಿಯರ್ ಬಾಟಲಿಗಳನ್ನು ಕಟ್ಟಿ ಜಿಂಕೆಗಳನ್ನು ಬೆದರಿಸಲಾಗುತ್ತಿದೆ. ಸತತ ಬರಗಾಲದಿಂದ ಬಸವಳಿದಿರುವ ರೈತಾಪಿ ವರ್ಗಕ್ಕೆ ಪ್ರತಿ ವರ್ಷ ಜಿಂಕೆ ಹಾವಳಿ ಸಂಕಷ್ಟಕ್ಕೆ ಈಡು ಮಾಡುತ್ತದೆ. ಆದ್ದರಿಂದ ಈ ಭಾಗದಲ್ಲಿ ಜಿಂಕೆ ವನ ಸ್ಥಾಪಿಸುವ ಮೂಲಕ ಜಿಂಕೆ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕಿದೆ. | ನಿಂಗಪ್ಪ ತೊಂಡಿಹಾಳ ನಿಡಗುಂದಿ ರೈತ