ಹುಣಸೂರು: ಅನಧಿಕೃತ ತಂಬಾಕು ಬೆಳೆಗಾರರಿಗೆ(ಕಾರ್ಡ್‌ದಾರರು) ಕೂಡಲೇ ತಂಬಾಕು ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ರಾಜ್ಯ ತಂಬಾಕು ಬೆಳೆಗಾರರ ಹಿತರಕ್ಷಣಾ ಹೋರಾಟ ಸಮಿತಿ ಸದಸ್ಯರು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಅಧಿಕಾರಿ ಎಚ್.ಎ.ಗೋಪಾಲ್ ಅವರಿಗೆ ಮೈಸೂರಿನಲ್ಲಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಬಸವರಾಜು ಕಲ್ಕುಣಿಕೆ, ತಂಬಾಕು ಬೆಳೆದು ಕಾರ್ಡ್ ಹೊಂದಿರುವ ರೈತನ ಗೋಳು ಹೇಳತೀರದಂತಾಗಿದೆ. ಪ್ರತಿ ವರ್ಷವೂ ತಂಬಾಕು ಮಾರಾಟ ಮಾಡಲು ಹೆಣಗಾಡಬೇಕಾದ ಪರಿಸ್ಥಿತಿ ಇದೆ. ಕೂಡಲೇ ಮಂಡಳಿಯ ಗಮನಕ್ಕೆ ತಂದು ಮಾರಾಟ ಮಾಡಲು ಅನುವು ಮಾಡಿಕೊಡಬೇಕು. ಮಂಡಳಿಯಿಂದ ಯಾವುದೇ ಸವಲತ್ತು ಪಡೆಯದೆ ಮನೆ ಜನರೆಲ್ಲ ಕಷ್ಟಪಟ್ಟು ದುಡಿದರೂ ಕಾರ್ಡ್ ಹೊಂದಿರುವ ರೈತನಿಗೆ ನ್ಯಾಯ ಸಿಗುತ್ತಿಲ್ಲ. ಸಮರ್ಪಕ ಬೆಲೆ ಇಲ್ಲದ ಕಾರಣ ಹಾಗೂ ಸಕಾಲದಲ್ಲಿ ಅನುಮತಿ ನೀಡದ ಕಾರಣ ಕಷ್ಟಪಟ್ಟು ಬೆಳೆದ ರೈತ ನಷ್ಟ ಅನುಭವಿಸುವ ಪರಿಸ್ಥಿತಿ ಇದೆ ಎಂದರು.
ಸಮಿತಿ ಅಧ್ಯಕ್ಷ ಗೋವಿದಂಯ್ಯ ಮಾತನಾಡಿ, ತಂಬಾಕು ಮಾರಾಟ ಮಾಡಲು ಹೋರಾಟ ಮಾಡಿಯೇ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಇದೆ. ಕಳೆದ 2004ರಿಂದ ಹೋರಾಟ ಮಾಡುತ್ತಿದ್ದರೂ ರೈತ ವಿರೋಧಿ ಧೋರಣೆಯನ್ನು ಸರ್ಕಾರಗಳು ಅನುಸರಿಸಿ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿವೆ ಎಂದು ದೂರಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆರ್‌ಎಂಒ ಗೋಪಾಲ್, ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದು ಶೀಘ್ರದಲ್ಲೆ ಪರವಾನಗಿ ಸಿಗಬಹುದು ಎಂದರು. ಸಮಿತಿ ಉಪಾಧ್ಯಕ್ಷ ಕಲ್ಲಹಳ್ಳಿ ಷಣ್ಮಖ, ಚಂದ್ರಶೇಖರ್, ಗೋವಿಂದಚಾರಿ, ಮೂಡಲಕೊಪ್ಪಲು ಚಂದ್ರೇಗೌಡ, ಮುಖಂಡರಾದ ಶೇಖರ್, ರಾಮಚಂದ್ರನಾಯ್ಕ, ನಿಂಗಮ್ಮ ಸಾವಿತ್ರಮ್ಮ ಇತರರಿದ್ದರು.