ಬೆಳೆಹಾನಿ ಮಾಹಿತಿ ಸಂಗ್ರಹಕ್ಕೆ ಸೂಚನೆ

ಲಕ್ಷ್ಮೇಶ್ವರ: ಈಗಾಗಲೇ ಬರಗಾಲ ಘೊಷಣೆಯಾಗಿದ್ದು ಅಧಿಕಾರಿಗಳು ಬೆಳೆಹಾನಿ ಪ್ರಮಾಣದ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಬೇಕು. ಆತ್ಮಹತ್ಯೆಗೀಡಾದ ರೈತರ ಕುಟುಂಬಕ್ಕೆ ಆದಷ್ಟು ಬೇಗ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ, ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕೆಲದ ನಿರ್ವಹಿಸಬೇಕು. ಹಿಂಗಾರಿಗೆ ಬೇಕಾದ ಅಗತ್ಯ ಬೀಜಗಳನ್ನು ಸಂಗ್ರಹಿಸಬೇಕು. ಇದರಲ್ಲಿ ಏನಾದರೂ ನಿರ್ಲಕ್ಷ್ಯಾದರೆ ಆಯಾ ಇಲಾಖೆಯ ಮುಖ್ಯಸ್ಥರನ್ನೇ ಹೊಣೆ ಮಾಡುವುದಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಸಿದರು.

ಮಂಗಳವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಮಟ್ಟದ ಇಲಾಖೆಗಳ ಪರಿಶೀಲನೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಬೆಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ತೋಟಗಾರಿಕಾ ಇಲಾಖೆ ಮತ್ತು ಕೃಷಿ ಇಲಾಖೆಯವರು ರೈತರ ಸಮಗ್ರ ಮಾಹಿತಿ ಕಲೆಹಾಕುವಂತೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮಾತನಾಡಿ, ತಾಲೂಕಿನಲ್ಲಿ ಯಾವ ಯಾವ ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತಿವೆ ಎಂಬುದನ್ನ ಪಟ್ಟಿ ಮಾಡಿ, ಮುಂಜಾಗೃತ ಕ್ರಮವಾಗಿ ಕೈಗೊಳ್ಳಬೇಕಾದ ಕಾರ್ಯ-ಕ್ರಿಯಾಯೋಜನೆ ಸಿದ್ಧಪಡಿಸಿಕೊಳ್ಳಬೇಕು. ದುರಸ್ತಿಗಾಗಿ ಕಾದಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯವರಿಗೆ ಸೂಚಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರುದ್ರೇಶ ಪಿ.ಎಸ್, ನಗರ ಯೋಜನಾಧಿಕಾರಿ ಪಿ.ರುದ್ರೇಶ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ, ಪ್ರದೀಪ್, ತಹಸೀಲ್ದಾರ್ ಎ.ಡಿ. ಅಮರವಾದಗಿ, ಡಾ.ವೆಂಕಟೇಶ ನಾಯ್ಕ, ಇಓ ಆರ್.ವೈ. ಗುರಿಕಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

28 ಅರ್ಜಿ ಸಲ್ಲಿಕೆ: ಸಾರ್ವಜನಿಕರಿಂದ ಒಟ್ಟು 28 ಅರ್ಜಿಗಳು ಸಲ್ಲಿಕೆಯಾದವು. ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಮತ್ತು ವೈದ್ಯರ ಕೊರತೆ, ಎಗ್ ರೈಸ್ ಅಂಗಡಿಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಟೇಸ್ಟಿಂಗ್ ಪೌಡರ್ ಬಳಕೆ ನಿಯಂತ್ರಿಸುವುದು, ಇಟ್ಟಿಕೆರೆ ಅಭಿವೃದ್ಧಿಯಲ್ಲಿ ಆದ ಅವ್ಯವಹಾರದ ತನಿಖೆ, ರೈತರಿಗೆ ಹಗಲಿನಲ್ಲಿ ಸತತ 7 ಗಂಟೆಗಳ ತ್ರಿಪೇಸ್ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಜನರು ಮನವಿ ಸಲ್ಲಿಸಿದರು. ಆಧಾರ್ ಕಾರ್ಡ್, ರೇಶನ್ ಕಾರ್ಡ್ ಇಲ್ಲದವರು ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತಿರುವುದು, ನಿಧಾನಗತಿಯ ಒಳಚರಂಡಿ ಯೋಜನೆ ಕಾಮಗಾರಿಯಿಂದ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಮಾಡಿಸುವಂತೆಯೂ ಮನವಿಗಳು ಸಲ್ಲಿಕೆಯಾದವು.

ಕೂಡಲೇ ರಸ್ತೆ ಗುಂಡಿ ಮುಚ್ಚಿ: ಟೆಂಡರ್​ಗಾಗಿ ಕಾಯದೇ ಕೂಡಲೇ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೂಚಿಸಿದರು. ಫಲಿತಾಂಶ ಸುಧಾರಣೆ ಮತ್ತು ಶಾಲಾ ದುರಸ್ತಿ ಬಗ್ಗೆ ಶಿಕ್ಷಣಾಧಿಕಾರಿಗಳು ನಿಗಾವಹಿಸಬೇಕು ಎಂದರು. ಪಟ್ಟಣದಲ್ಲಿನ ಆಶ್ರಯ ಯೋಜನೆ, ಇಟ್ಟಿಕೆರೆ ಅಭಿವೃದ್ಧಿ, ಗೂಡಂಗಡಿಗಳ ಮೇಲೆ ನಿಗಾ, ಸ್ವಚ್ಛತೆ ಕುರಿತು ಕಾರ್ಯೋನ್ಮುಖವಾಗುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಹೊಸ ತಾಲೂಕಿಗೆ ಅಗತ್ಯವಾಗಿ ಬೇಕಾದ 14 ಇಲಾಖೆಗಳ ಕಟ್ಟಡ ನಿರ್ವಣಕ್ಕೆ ನಿವೇಶನ ಗುರುತಿಸಿ ಪಿಡಬ್ಲೂಡಿಗೆ ನಕ್ಷೆ-ಕ್ರಿಯಾಯೋಜನೆ ಸಿದ್ಧಪಡಿಸಲು ಕೊಡಬೇಕು ಎಂದು ಸೂಚಿಸಿದರು. ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ಕಳುಹಿಸಲಾಗುತ್ತದೆ ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿಸಿ, ಆಗದಿದ್ದರೆ ಹಿಂಬರಹ ಬರೆದು ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಸೂಚಿಸಿದರು.