ಬೆಳೆನಷ್ಟ ಪರಿಹಾರ 5.16 ಕೋಟಿ

ಕೋಲಾರ: ಜಿಲ್ಲೆಯಲ್ಲಿ ಎರಡು ಬಾರಿ ಬಿದ್ದ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆ ಹಾನಿಗೀಡಾಗಿದ್ದು, ರೈತರಿಗೆ ಪರಿಹಾರವಾಗಿ ನೀಡಬೇಕಿರುವ 5.16 ಕೋಟಿ ರೂ. ಎರಡ್ಮೂರು ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಡಿಸಿ ಜೆ.ಮಂಜುನಾಥ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಎರಡು ಬಾರಿ ಬಿದ್ದ ಆಲಿಕಲ್ಲು ಮಳೆಯಿಂದ 2800 ಹೆಕ್ಟೇರ್​ನಲ್ಲಿ 18 ಕೋಟಿ ರೂ. ಅಧಿಕ ಮೌಲ್ಯದ ಬೆಳೆ ಹಾನಿಯಾಗಿದೆ. ಕೇಂದ್ರದ ನಿಯಮಾವಳಿಯಂತೆ ಶೇ.33ಕ್ಕಿಂತ ಹೆಚ್ಚು ಬೆಳೆಹಾನಿಯಾದ ರೈತರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಸಲ್ಲಿಸಿರುವ 5.16 ಕೋಟಿ ರೂ.ಗಳ ಪ್ರಸ್ತಾವನೆ ಕಂದಾಯ ಸಚಿವರ ಮೂಲಕ ಅನುಮೋದನೆಗೆ ಹೋಗಿರುವುದರಿಂದ ಎರಡ್ಮೂರು ದಿನಗಳಲ್ಲಿ ಮಂಜೂರಾತಿ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಿಎಂ ಜತೆಗಿನ ವಿಡಿಯೋ ಕಾನ್ಪರೆನ್ಸ್​ನಲ್ಲಿ ಮಾಹಿತಿ ನೀಡಿದ್ದಾರೆ ಎಂದರು.

ಕೆಸಿ ವ್ಯಾಲಿ ನೀರನ್ನು 126 ಕೆರೆಗಳಿಗೂ ಹರಿಸಬೇಕಿರುವುದರಿಂದ ಶೇ. 50 ಪ್ರಮಾಣದಲ್ಲಿ ಕೆರೆಗೆ ನೀರು ತುಂಬಿಸಿ ಮುಂದಿನ ಕೆರೆಗೆ ಹರಿಸಲಾಗುತ್ತಿದೆ. ನೀರು ಹರಿಯುವ ಕಾಲುವೆಯಿಂದ ಜಮೀನಿನ ಅಕ್ಕಪಕ್ಕದ ರೈತರು ನೇರವಾಗಿ ನೀರನ್ನು ಜಮೀನುಗಳಿಗೆ ವ್ಯವಸಾಯಕ್ಕೆ ಹರಿಸಬಾರದು. ಈಗಾಗಲೆ ನೀರು ಹರಿಸಿಕೊಳ್ಳುತ್ತಿದ್ದ ರೈತರಿಗೆ ತಹಸೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮುಂದುವರಿಸಿದರೆ ದೂರು ದಾಖಲಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಕೆಸಿ ವ್ಯಾಲಿ ಯೋಜನೆ ಅಂತರ್ಜಲಮಟ್ಟ ವೃದ್ಧಿಗಾಗಿ ಮಾತ್ರ. ಯೋಜನೆ ವ್ಯಾಪ್ತಿಯ ಅಂತಿಮ ಘಟ್ಟದವರೆಗೆ ಹರಿಯಬೇಕೆಂಬುದು ಉದ್ದೇಶ. ಒಂದು ವರ್ಷ ಕಾದರೆ ಅಂತರ್ಜಲ ವೃದ್ಧಿಯಾಗಿ ಎಲ್ಲ ಕಡೆ ನೀರು ಇರುತ್ತದೆ. ಆಗ ನೀರಿನ ಬಳಕೆ ಕುರಿತು ಬೇರೆ ನಿರ್ಣಯ ತೆಗೆದುಕೊಳ್ಳಬಹುದು. ಪ್ರಾರಂಭಿಕ ಹಂತದಲ್ಲಿ ಕೆರೆಗಳಿಗೆ ನೀರು ಹರಿಯಲು ಬಿಡಿ ಎಂದು ಮನವಿ ಮಾಡಿದರು.

ನರಸಾಪುರ ಬಳಿ ರಾಜಕಾಲುವೆ ಸಮೀಪವೇ ಬೃಹತ್ ಕಟ್ಟಡ ನಿರ್ಮಾಣ ಸದರಿ ಕಟ್ಟಡ ಮಾಲೀಕರಲ್ಲಿನ ದಾಖಲೆಗಳ ಪ್ರಕಾರ ಸರಿಯಾಗಿದೆ. ಇಷ್ಟು ದಿನ ಮಳೆ ಬಂದಾಗ ಕೆರೆ ಕೋಡಿ ಹರಿಯುತ್ತಿತ್ತು. ಕೆಸಿ ವ್ಯಾಲಿ ನೀರಿನ ಜತೆಗೆ ಮಳೆ ನೀರು ಬಂದು ಈ ಭಾಗದಲ್ಲಿನ 9 ಕೆರೆ ಒಟ್ಟಿಗೆ ಕೋಡಿ ಹರಿದಾಗ ಜೀವಹಾನಿ, ಬೆಳೆಹಾನಿ ಆಗದಂತೆ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯುವಂತಾಗಲು ಕಾಲುವೆ ವಿಸ್ತರಣೆ, ಸುರಕ್ಷತಾ ದೃಷ್ಟಿಯಿಂದ ತಡೆಗೋಡೆ ನಿರ್ವಣಕ್ಕೆ ಸಣ್ಣ ನೀರಾವರಿ ಹಾಗೂ ಯೋಜನೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಈಗಾಗಲೇ ಗುರುತಿಸಿರುವ ಬ್ಲಾಕ್ ಸ್ಪಾಟ್​ಗಳಿಗೆ ಏನು ಪರಿಹಾರ, ಯಾವ ದಿನದ ಒಳಗಾಗಿ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿಖರವಾಗಿ ಕಾಲಮಿತಿ ನಿಗದಿಪಡಿಸಲಾಗಿದೆ. ಕೆಲವೆಡೆ ವೇಗ ನಿಯಂತ್ರಕ, ಸಿಗ್ನಲ್ ಇನ್ನಿತರ ಪರಿಹಾರ ಕ್ರಮ ಅಳವಡಿಸಲು ಸೂಚಿಸಲಾಗಿದೆ ಎಂದರು.

ಅನುಮೋದನೆ ಹಂತದಲ್ಲಿದೆ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪೊಲೀಸ್ ಇಲಾಖೆ ಗುರುತಿಸಿರುವ 20 ಬ್ಲಾಕ್ ಸ್ಪಾಟ್​ಗಳಲ್ಲಿ ಕ್ರಮ ಕೈಗೊಳ್ಳುವ ಸಂಬಂಧ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿ ಸೂಚನೆ ನೀಡಲಾಗಿತ್ತು. ಡಿಸಿ ಕಚೇರಿ ಬಳಿ ಸೇವಾ ರಸ್ತೆ, ಪಾದಚಾರಿ ಮೇಲ್ಸೇತುವೆ ನಿರ್ಮಾಣ ಸೇರಿ ಎರಡ್ಮೂರು ಕಡೆ ಶೀಘ್ರ ಕಾಮಗಾರಿ ಆರಂಭಿಸುವುದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೆಲ ಪ್ರಸ್ತಾವನೆಗೆ ಕ್ರಿಯಾಯೋಜನೆ ರೂಪಿಸಿ ಅನುಮೋದನೆಗೆ ಕೇಂದ್ರ ಕಚೇರಿ ದೆಹಲಿಗೆ ಕಳುಹಿಸಬೇಕು. ಇನ್ನು ಕೆಲ ಕಾಮಗಾರಿಗಳು ಅನುಮೋದನೆ ಹಂತದಲ್ಲಿದೆ ಎಂದು ಡಿಸಿ ತಿಳಿಸಿದರು.