ಬೆಳೆಗೆ ತಕ್ಕ ಬೆಲೆ ನೀಡಿದರೆ ರೈತರ ಅಭಿವೃದ್ಧಿ

ಸವಣೂರ: ಬಿತ್ತನೆ ಪೂರ್ವದಲ್ಲಿ ಸರ್ಕಾರ ಬೆಳೆಗಳಿಗೆ ತಕ್ಕ ಬೆಂಬಲ ಬೆಲೆ ಘೊಷಣೆ ಮಾಡಿದಲ್ಲಿ ಮಾತ್ರ ಕೃಷಿಕರ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ಅನ್ನದಾತ ಕೃಷಿಕ ಸಮಾಜ ರಾಜ್ಯ ಹಾಗೂ ತಾಲೂಕು ಘಟಕದ ವತಿಯಿಂದ ಪಟ್ಟಣದ ಡಾ.ವಿ.ಕೃ.ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜರುಗಿದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೈಗಾರಿಕಾ ಕ್ಷೇತ್ರಗಳಿಗೆ ಸರ್ಕಾರ ಮೂಲ ಬಂಡವಾಳವನ್ನು ನೀಡುವಂತೆ ಕೃಷಿ ಕ್ಷೇತ್ರಕ್ಕೆ ಬಂಡವಾಳವನ್ನು ನೀಡಿದಲ್ಲಿ ಸಾಲಸೌಲಭ್ಯಕ್ಕಾಗಿ ರೈತರ ಪರದಾಟವನ್ನು ತಪ್ಪಿಸಬಹುದಾಗಿದೆ. ಆದ್ದರಿಂದ, ಕೃಷಿ ಕ್ಷೇತ್ರಕ್ಕೆ ಮೂಲ ಬಂಡವಾಳ ನೀಡುವಂತಾಗಬೇಕು. ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಆರ್ಥಿಕತೆಯನ್ನು ಕಾಣದೆ ವ್ಯಾಪಾರ ಆರ್ಥಿಕತೆ ಕಂಡಿದೆ. ಕೃಷಿ ಆರ್ಥಿಕತೆಯಿಂದ ಅಭಿವೃದ್ಧಿ ಹೊಂದುವಂತ ವ್ಯವಸ್ಥೆಯಾಗಬೇಕು ಎಂದರು.

ರೈತರ ಕಷ್ಟಕಾರ್ಪಣ್ಯಗಳನ್ನು ಅವಲೋಕಿಸಿ ರೈತಪರ ಯೋಜನೆಗಳನ್ನು ನಿರ್ಮಾಣ ಮಾಡಿ ರೈತರ ಸಬಲಿಕರಣಕ್ಕೆ ಸರ್ಕಾರ ಮುಂದಾಗಬೇಕು. ಕೃಷಿ ಕುಟುಂಬಗಳು ಸಮರ್ಪಕವಾಗಿ ಪ್ರಗತಿಯನ್ನು ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿಹೊಂದಲು ಸಾಧ್ಯ.

ಆಹಾರ ಕೊರತೆ ಹೊಂದದೆ ಸ್ವಾವಲಂಬನೆ ಬದುಕು ಸಾಗಿಸಲು ರಾಷ್ಟ್ರದ ರೈತನನ್ನು ಅಭಿವೃದ್ಧಿ ಪಥದತ್ತ ಸಾಗಿಸಬೇಕು. ರೈತರಿಗೆ ಬೆಳೆ ವಿಮೆ ಜೊತೆಗೆ ಅವರಿಗೆ ಆರೋಗ್ಯ ವಿಮೆ, ಜೀವ ವಿಮೆ, ಮಕ್ಕಳಿಗೆ ವಿದ್ಯಾಭ್ಯಾಸದ ವಿಮೆಯನ್ನು ಸರ್ಕಾರ ಜಾರಿ ಮಾಡಬೇಕು ಎಂದರು.

ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕರ್ನಾಟಕ ಅನ್ನದಾತ ಕೃಷಿಕ ಸಮಾಜ ರಾಜ್ಯ ಅಧ್ಯಕ್ಷ ಶಿವಾನಂದ ಯಲಿಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಪಂ ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಸೊಪ್ಪಿನ, ಕರ್ನಾಟಕ ಅನ್ನದಾತ ಕೃಷಿಕ ಸಮಾಜದ ಉಪಾಧ್ಯಕ್ಷ ಹನಮಂತಪ್ಪ ದೊಡ್ಡಮನಿ, ಸಿದ್ದನಗೌಡ ಪಾಟೀಲ, ತಾಲೂಕಾಧ್ಯಕ್ಷ ಶಿವಯ್ಯ ಹುಚ್ಚಯ್ಯನವರಮಠ, ವೀರೇಶ ದೊಡ್ಡಮನಿ, ಮಲ್ಲನಗೌಡ ದೊಡ್ಡಗೌಡ್ರ, ಗುರುಶಾಂತಪ್ಪ ಕಳ್ಳಿಮನಿ, ರಂಗನಗೌಡ ಪಾಟೀಲ ಹಾಗೂ ಇತರರು ಪಾಲ್ಗೊಂಡಿದ್ದರು. ಶಿಕ್ಷಕರಾದ ವಿದ್ಯಾಧರ ಕುತನಿ, ಡಿ.ಎಫ್.ಬಿಂದಲಗಿ ಕಾರ್ಯಕ್ರಮ ನಿರ್ವಹಿಸಿದರು.

ಎತ್ತಿನ ಬಂಡಿ ಮೆರವಣಿಗೆ: ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಪಟ್ಟಣದ ಹುರಳೀಕುಪ್ಪಿ ವೃತ್ತದಿಂದ ಆರಂಭಗೊಂಡ ಎತ್ತನ ಬಂಡಿ ಮೆರವಣಿಗೆ ಭರಮಲಿಂಗೇಶ್ವರ ವೃತ್ತ, ಶುಕ್ರವಾರ ಪೇಟೆ, ಬಂಕಾಪುರ ವೃತ್ತ, ಬಸ್​ನಿಲ್ದಾಣ, ಎಪಿಎಂಸಿ, ಅಂಬೇಡ್ಕರ್ ವೃತ್ತ, ಸಾರ್ವಜನಿಕ ಆಸ್ಪತ್ರೆ ವೃತ್ತ, ಸಿಂಪಿಗಲ್ಲಿ ಸೇರಿ ಪ್ರಮುಖ ಬೀದಿಯಲ್ಲಿ ಹಾಯ್ದು ಡಾ. ವಿ.ಕೃ.ಗೋಕಾಕ ಭವನ ತಲುಪಿತು.