ಬೆಳೆಗೆ ಜೀವಕಳೆ ತಂದ ಮಳೆ

ರೋಣ: ತಾಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಪುನರ್ವಸು ತುಂತುರು ಮಳೆ ಬೆಳೆಗಳಿಗೆ ಜೀವ ಕಳೆ ತಂದಿದೆ. ಬೆಳೆಗಳು ರೈತನ ಕೈ ಹಿಡಿಯುವ ಲಕ್ಷಣ ಕಂಡು ಬಂದಿದ್ದು, ಅನ್ನದಾತರ ಮೊಗದಲ್ಲಿ ಹರ್ಷ ಮೂಡಿದೆ.

ಸತತ ನಾಲ್ಕು ವರ್ಷಗಳಿಂದ ತಾಲೂಕಿನಾದ್ಯಂತ ಆವರಿಸಿದ್ದ ಬರಗಾಲದ ಕಾಮೋಡ ಮೆಲ್ಲನೆ ಜಾರುವಂತೆ ಕಾಣಿಸುತ್ತಿದೆ. ಈ ಬಾರಿ ಮುಂಗಾರು ಹಂಗಾಮಿನ ಆರಂಭದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಿತು. ಇದರಿಂದ ಸಂತಸಗೊಂಡ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ನಂತರದ ದಿನಗಳಲ್ಲಿ ಮುಂಗಾರಿನ ಮೃಗಶಿರ, ಆರಿದ್ರಾ ಮಳೆ ಸುರಿಯಲಿಲ್ಲ. ಬೆಳೆ ಒಣಗುವ ಆತಂಕದಲ್ಲಿದ್ದ ರೈತರಿಗೆ ಜುಲೈ ಮೊದಲ ವಾರದಿಂದ ವರುಣ ದೇವ ಕೃಪೆ ತೋರುತ್ತಿದ್ದಾನೆ. ಸತತವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಬೆಳೆಗಳು ನಳನಳಿಸುತ್ತಿವೆ. ಇದರಿಂದ ರೈತ ಸಮೂಹದಲ್ಲಿ ಉತ್ತಮ ಇಳುವರಿಯ ಆಸೆ ಚಿಗುರಿದೆ.

ಪ್ರಸ್ತುತ ಮುಂಗಾರಿನಲ್ಲಿ ಕೃಷಿ ಇಲಾಖೆ ತಾಲೂಕಿನಾದ್ಯಂತ ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶ ಸೇರಿ 68,000 ಹೆಕ್ಟೇರ್ (51,400 ಹೆಕ್ಟೇರ್ ಮಳೆಯಾಶ್ರಿತ ಮತ್ತು 10,600 ಹೆಕ್ಟೇರ್ ನೀರಾವರಿ) ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿತ್ತು. ಜೂನ್ ಅಂತ್ಯಕ್ಕೆ 55,199 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಇದರಲ್ಲಿ 51,781 ಹೆಕ್ಟೇರ್ ಮಳೆಯಾಶ್ರಿತ ಮತ್ತು 3,418 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಪ್ರಸ್ತುತ ಮುಂಗಾರು ಆರಂಭದ ಮಳೆ ವಾಡಿಕೆಯಂತೆ 273 ಮಿ.ಮೀ. ಸುರಿಯಬೇಕಿತ್ತು. ಆದರೆ, 185 ಮಿ.ಮೀ. ಸುರಿದು, ತಾಲೂಕಿನಲ್ಲಿ ಕೃಷಿ ಹೊಂಡಗಳು, ಹಳ್ಳ, ಕೊಳ್ಳ, ಕೆರೆ ತುಂಬಿ ತುಳುಕಿದವು. ನಂತರ ಬಹುದಿನಗಳ ವರೆಗೆ ಮಳೆಯಾಗಲಿಲ್ಲ. ಆದ್ದರಿಂದ ಬೆಳೆಗಳು ಒಣಗುವ ಹಂತದಲ್ಲಿದ್ದವು. ಆದರೆ, ಮತ್ತೆ ವರುಣಾಗಮನವಾಗಿದ್ದು ಜಿಟಿ ಜಿಟಿ ಮಳೆಗೆ ಬೆಳೆಗಳು ಮರು ಜೀವ ಪಡೆದುಕೊಂಡಿವೆ.

ಇಳುವರಿ ಕಡಿಮೆ ಸಾಧ್ಯತೆ

ಒಂದು ವಾರದಿಂದ ತುಂತುರು ಮಳೆಯಾಗುತ್ತಿದ್ದು, ಬೆಳೆಗಳು ನಳನಳಿಸುತ್ತಿವೆ. ಆದರೆ, ಇಳುವರಿ ಪ್ರಮಾಣ ಕಡಿಮೆಯಾಗುವ ಸಂಭವವಿದೆ. ಜಿಟಿ ಜಿಟಿ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗುವುದಿಲ್ಲ. ಈ ಮೆಳೆ ನಿಂತ ಬಳಿಕ ಭೂಮಿಯ ತೇವಾಂಶ ಕಡಿಮೆಯಾಗುತ್ತದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಸಿದ್ದೇಶ ಕೊಡಿಹಳ್ಳಿ.

ರೋಣ ತಾಲೂಕಿನಾದ್ಯಂತ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರು. ಹೆಸರು, ಶೇಂಗಾ, ಈರುಳ್ಳಿ, ಮೆಣಸಿನಗಿಡ, ಬಿಟಿ ಹತ್ತಿ ಬೆಳೆ ಮಳೆ ಇಲ್ಲದೆ ಸೊರಗಿದ್ದವು. ವಾರದಿಂದ ಜಿಟಿ ಜಿಟಿಯಾಗಿ ಸುರಿಯುತ್ತಿರುವ ಮಳೆ ರೈತರಿಗೆ ಪುನರ್ಜನ್ಮ ನೀಡುತ್ತಿದೆ.

|ಲೋಕನಗೌಡ ಗೌಡರ, ರೈತ ಮುಖಂಡ