More

  ಬೆಳೆಗಾರ ಕುಟುಂಬದ ಮೇಲೆ ಹಲ್ಲೆ

  ವಿಜಯಪುರ: ಟೊಮ್ಯಾಟೊ ಕಳ್ಳತನಕ್ಕೆ ಬಂದಿದ್ದ ಕಳ್ಳನಿಗೆ ಕೆನ್ನೆಗೆ ಹೊಡೆದು ಬುದ್ಧಿವಾದ ಹೇಳಿದ್ದ ರೈತನ ಸಂಬಂಧಿಕರ ಮೇಲೆ ಕಳ್ಳರು ಹಲ್ಲೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

  ವಿಜಯಪುರ ತಾಲೂಕಿನ ಅಲಿಯಾಬಾದ ತಾಂಡಾ ನಂ. 2ರಲ್ಲಿ ಭಾನುವಾರ ರಾತ್ರಿ ಈ ಪ್ರಕರಣ ನಡೆದಿದೆ. ಅಲಿಯಾಬಾದ್ ತಾಂಡಾ 2ರ ನಿವಾಸಿ ಭೀಮು ಲಮಾಣಿ 4 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ. ಟೊಮ್ಯಾಟೊ ಬೆಲೆ ಗಗನಕ್ಕೆ ಏರಿದ್ದರಿಂದ ಬೆಳೆಯಿಂದ ಈಗಾಗಲೇ ಅಂದಾಜು 50ಲಕ್ಷ ರೂ. ಲಾಭ ಗಳಿಸಿದ್ದಾರೆ. ಜಮೀನಿನಲ್ಲಿ ಉಳಿದ ಟೊಮ್ಯಾಟೊ ಕದಿಯಲು ಗ್ರಾಮದ ಯುವಕರ ಗುಂಪೊಂದು ರಾತ್ರಿ ಹೊಲಕ್ಕೆ ನುಗ್ಗಿದೆ. ಇದನ್ನು ಗಮನಿಸಿದ ರೈತ ಭೀಮು ಲಮಾಣಿ ಹಾಗೂ ಅವರ ಸಹೋದರ ಸಂಬಂಧಿ ರಾಜು ರಾಠೋಡ ಅವರು ಗುಂಪಿನಲ್ಲಿಯ ಸಂಜು ರಾಠೋಡ ಎಂಬಾತನನ್ನು ಹಿಡಿದು ಧರ್ಮದೇಟು ನೀಡಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಇದೇ ದ್ವೇಷ ಇಟ್ಟುಕೊಂಡ ಕಿಡಿಗೇಡಿ ಯುವಕ ಕೆಲವರನ್ನು ಕರೆದುಕೊಂಡು ಬಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರಾಜು ರಾಠೋಡ ಜತೆ ಜಗಳ ತೆಗೆದು ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಜಗಳ ಬಿಡಿಸಲು ಬಂದ ವಿನೋದ ರಾಠೋಡ, ಅನಸೂಯಾಬಾಯಿ ಮೇಲೆ ಬಡಿಗೆ ಹಾಗೂ ರಾಡ್‌ನಿಂದ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಮೂವರನ್ನು ಸೋಮವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

  ಹಲ್ಲೆ ನಡೆಸಿದ ಸಂಜು ರಾಠೋಡ ಹಾಗೂ 20 ಜನರ ಮೇಲೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಲಿಖಿತ ದೂರು ಪಡೆದಿರುವ ಪೊಲೀಸರು ಇನ್ನೂ ಎಫ್‌ಐಆರ್ ಮಾಡಿಲ್ಲ. ಪ್ರಾಥಮಿಕ ತನಿಖೆ ನಡೆಸಿ ದೂರು ದಾಖಲಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

  ಜಮೀನಿನಲ್ಲಿ ಸಿಸಿಟಿವಿ

  ಟೊಮ್ಯಾಟೊ ಕಾವಲಿಗೆ ಹೊಲದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಭಾನುವಾರ ರಾತ್ರಿ ಕಳ್ಳತನಕ್ಕೆ ಬಂದಿದ್ದ ಯುವಕರ ಗುಂಪು ಮೊದಲು ಸಿಸಿ ಕ್ಯಾಮರಾ ಹಾಗೂ ಹಾರ್ಡ್ ಡಿಸ್ಕ್ ಕಿತ್ತಿದ್ದಾರೆ. ನಂತರ ಟೊಮ್ಯಾಟೊ ಕಳ್ಳತನ ಮಾಡಲು ಮುಂದಾದಾಗ ಯುವಕನೊಬ್ಬ ಮಾಲೀಕನ ಕೈಗೆ ಸಿಕ್ಕು ಧರ್ಮದೇಟು ತಿಂದಿದ್ದಾನೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts