ಬೆಳಗೊಳದ ಬೆರಗು

ಶಾಂತಿಸಂದೇಶದ ಮೂಲಕ ಇಡೀ ವಿಶ್ವಕ್ಕೇ ಮಾದರಿಯಾದವನು ಭಗವಾನ್ ಬಾಹುಬಲಿ. ಬಾಹುಬಲಿಯ ಆದರ್ಶಗಳನ್ನು ಸ್ಮರಿಸಿಕೊಳ್ಳುತ್ತ; ಅವನ ದಿವ್ಯ-ಭವ್ಯ ಮೂರ್ತಿಯನ್ನು, ಅದಕ್ಕೆ ನಡೆಯುವ ಮಹಾಮಜ್ಜನವನ್ನು ಕಣ್ತುಂಬಿಸಿಕೊಳ್ಳುವ, ಹೃದಯಕ್ಕೆ ಇಳಿಸಿಕೊಳ್ಳುವ ಸಂಭ್ರಮದ ಪರ್ವ ಮತ್ತೆ ಬಂದಿದೆ. ಈ ಉತ್ಸವದ ಬಗೆಗಿನ ಪಕ್ಷಿನೋಟ ಪ್ರಸ್ತುತ ಸಂಚಿಕೆಯ ವಿಶೇಷ.

 

ಜೈನಧರ್ಮದ ವೈಶಿಷ್ಟ್ಯ

ಅಹಿಂಸೆಯೇ ಮೂಲಮಂತ್ರವಾದ (ಅಹಿಂಸಾ ಪರಮೋ ಧರ್ಮಃ) ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು – ಇವುಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು. ಜೈನಧರ್ಮ ತ್ಯಾಗಪ್ರಧಾನ ಎಂದಕೂಡಲೇ ಇಲ್ಲಿ ಗೃಹಸ್ಥರನ್ನು ಕಡೆಗಾಣಿಸಲಾಗಿದೆ ಎಂದರ್ಥವಲ್ಲ. ಗೃಹಸ್ಥರು ಈ ಧರ್ಮದ ಪ್ರಾಣಸ್ವರೂಪ; ಅವರು ನಿರ್ಗ್ರಂಥಿಗಳ (ಎಲ್ಲ ಬಂಧಗಳಿಂದ ಮುಕ್ತರ), ಮುನಿಗಳ, ಅರಹಂತರ (ದಾರಿ ತೋರುವ ಸದಾಚಾರಿಗಳ) ಪಾಲನೆ ಪೋಷಣೆ ಮಾಡುತ್ತಾರೆ ಮತ್ತು ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ.

ಬೊಪ್ಪಣ ಪಂಡಿತನ ಗೊಮ್ಮಟ ಸ್ತುತಿ

ಗೊಮ್ಮಟ ಸ್ತುತಿ ಎಂದು ಕರೆಯಲಾಗುವ ಒಂದು ಶಾಸನ ಶ್ರವಣಬೆಳಗೊಳದಲ್ಲಿದೆ. ಬೊಪ್ಪಣ ಪಂಡಿತ ಎಂಬಾತ ಈ ಶಾಸನದ ಕರ್ತೃ. ಇದರ ಕಾಲ ಕ್ರಿ.ಶ. ಸುಮಾರು 700. ಇದನ್ನು ಮೊದಲಿಗೆ ಓದಿದವರು ಬಿ.ಎಲ್. ರೈಸ್. ನಂದಿಸೇನ ಮುನಿಯು ಇಹಲೋಕದ ಸುಖ ವೈಭವಗಳು ಚಂಚಲ ಎಂಬುದನ್ನು ಮನಗಂಡು ವೈರಾಗ್ಯದಿಂದ ಸಂನ್ಯಾಸ ಹಿಡಿದು ದೇವಲೋಕವನ್ನು ಸೇರಿದನು ಎಂದು ಶಾಸನ ತಿಳಿಸುತ್ತದೆ. ಶಾಸನದ ಸಾಲುಗಳು ಹೀಗಿವೆ: ‘ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆರವೋಲ್ ಮಂಜುವೋಲ್ ತೋರಿ ಬೇಗಂ ಪಿರಿಗುಂ ಶ್ರೀರೂಪ ಲೀಲಾಧನವಿಭವಮಹಾರಾಶಿಗಳ್ ನಿಲ್ಲಮಾರ್ಗಂ ಪರಮಾರ್ಥಂ ಮೆಚ್ಚೆನಾನೀ ಧರನಿಯುಳಿರವಾನೆಂದು ಸಂನ್ಯಾಸನಂಗೆ ಯ್ದುರುಸತ್ವನ್ ನಂದಿಸೇನ ಪ್ರವರಮುನಿವರನ್ ದೇವಲೋಕಕ್ಕೆ ಸಂದಾನ್ ||.’

ತೀರ್ಥಂಕರರು ಯಾರು?

ತೀರ್ಥಂಕರ ಎನ್ನುವುದು ಜೈನಧರ್ಮದ ಒಂದು ಪಾರಿಭಾಷಿಕ ಶಬ್ದ. ಇವರನ್ನು ಜಿನ, ಕೇವಲಿಯೆಂದೂ ಕರೆಯುತ್ತಾರೆ. ಇದರ ಅರ್ಥವೆಂದರೆ ‘ಜಯಿಸಿದವನು’ (ಆಸೆ, ಅಭಿಮಾನ, ಕ್ರೋಧ ಮುಂತಾದವು). ತೀರ್ಥಂಕರರು ಧರ್ಮತೀರ್ಥವನ್ನು ಮುನ್ನೆಡೆಸುವವರು ಅಥವಾ ಧರ್ಮಪ್ರವರ್ತಕರು. ತೀರ್ಥಂಕರರು ಕೇವಲಜ್ಞಾನವನ್ನು ಪಡೆದ ಮೇಲೆ ಇತರರಿಗೆ ಮೋಕ್ಷಮಾರ್ಗವನ್ನು ಉಪದೇಶಿಸುತ್ತಾರೆ. ಇವರು ಜೀವನ್ಮುಕ್ತಾವಸ್ಥೆಯಲ್ಲಿರುವ, ಜೈನಧರ್ಮದ ಬೋಧಕರು. ಇವರ ಉಪದೇಶಗಳು ಜೈನಧರ್ಮದ ಮೂಲ ತಳಹದಿಯಾಗಿದೆ. ಅರಹಂತಾವಸ್ಥೆಯಲ್ಲಿರುವ ಇವರಿಗೆ ಇದೇ ಕೊನೆಯ ಭವವಾಗಿರುತ್ತದೆ. ಮುಂದೆ ಇವರಿಗೆ ಪುನರ್ಜನ್ಮವಿಲ್ಲ. ಇವರಿಗೆ ಗರ್ಭಾವತರಣ, ಜನ್ಮಾಭಿಷೇಕ, ದೀಕ್ಷಾಕಲ್ಯಾಣ, ಕೇವಲಜ್ಞಾನ ಕಲ್ಯಾಣ, ನಿರ್ವಾಣ ಕಲ್ಯಾಣಗಳೆಂದು ಪಂಚಕಲ್ಯಾಣಗಳು ಉಂಟಾಗುತ್ತವೆ. ಮಾನವಜನ್ಮವು ಪೂರ್ಣವಾದ ನಂತರ ಇವರು ಮೋಕ್ಷವನ್ನು ಹೊಂದುತ್ತಾರೆ.

ಇಪ್ಪತ್ನಾಲ್ಕು ತೀರ್ಥಂಕರರು

ಜೈನಧರ್ಮದಲ್ಲಿ 24 ತೀರ್ಥಂಕರರಿದ್ದಾರೆ. ಅವರೆಂದರೆ ಕ್ರಮವಾಗಿ, ಋಷಭನಾಥ (ಆದಿನಾಥ), ಅಜಿತನಾಥ, ಸಂಭವನಾಥ, ಅಭಿನಂದನ, ಸುಮತಿನಾಥ, ಪದ್ಮಪ್ರಭ, ಸುಪಾರ್ಶ್ವನಾಥ, ಚಂದ್ರಪ್ರಭ, ಪುಷ್ಪದಂತನಾಥ (ಸುವಿಧಿನಾಥ), ಶೀತಲನಾಥ, ಶ್ರೇಯಾಂಸನಾಥ, ವಾಸುಪೂಜ್ಯ, ವಿಮಲನಾಥನಾಥ, ಅನಂತನಾಥ, ಧರ್ಮನಾಥ, ಶಾಂತಿನಾಥ, ಕುಂಥುನಾಥ, ಅರನಾಥ, ಮಲ್ಲಿನಾಥ, ಮುನಿಸುವ್ರತ, ನಮಿನಾಥ, ನೇಮಿನಾಥ, ಪಾರ್ಶ್ವನಾಥ, ಮಹಾವೀರ (ವರ್ಧಮಾನ)

ಭರತೇಶ ವೈಭವ

‘ಭರತೇಶ ವೈಭವ’ ಕವಿ ರತ್ನಾಕರವರ್ಣಿಯ ಮೇರು ಕೃತಿ. ಆದಿತೀರ್ಥಂಕರ ವೃಷಭನಾಥನ ಮಗ ಭರತ ಈ ಕಾವ್ಯದ ನಾಯಕ. ಈ ಕಾವ್ಯದಲ್ಲಿ ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ,ಮೋಕ್ಷವಿಜಯ ಎನ್ನುವ ಐದು ಸಂಧಿಗಳಿದ್ದು ಒಟ್ಟು ಹತ್ತು ಸಾವಿರ ಪದ್ಯಗಳಿವೆ.

ಮೌನಭಾರದಿ ಮಾತು ಮೂರ್ಛೆ ಹೋಗಿಹುದಿಲ್ಲಿ

ದೈತ್ಯ ಕಲೆಯಿದು; ದಿವ್ಯ ದೈತ್ಯಕಲೆ! ಕಲ್ಲಿನಲಿ,

ನಿರ್ಜೀವ ಜಡತೆಯಲಿ, ನಗೆಗೆಡೆಯ ನಗ್ನತೆಗೆ,

ಇಂಥ ಭೀಮಾಕೃತಿಗೆ, ಚಿರಜೀವ ಗಾಂಭೀರ್ಯ

ಭವ್ಯತಾ ಮುದ್ರೆಯನ್ನೊತ್ತಿದೀ ದಿವ್ಯಕಲೆ

ದೈತ್ಯಕಲೆ! ಎದೆಯಿದ್ದರಿಲ್ಲಿ ನಗು ನೋಡುವಂ,

ಬತ್ತಲೆಗೆ ಕಿಲಕಿಲನೆ ನಗುವ ಓ ಲಘುಹೃದಯಿ!

ಎಳ್ಳುನೀರಹುದಿಲ್ಲಿ ಹೀನತೆಗೆ, ನೀಚತೆಗೆ;

ಬೆಳೆನೀರು ಭವ್ಯತೆಗೆ, ದಿವ್ಯತೆಗೆ. ಶಿಶುಮುಖದ

ಮುಗ್ಧತೆ, ಸಮಾಧಿಸ್ಥನಾನಂದ ಗಾಂಭೀರ್ಯ,

ವಜ್ರದ ಕಠೋರತೆ, ಕುಸುಮ ಕೋಮಲತೆ, ಮೇಣ್

ಸತ್ಯದ ರಹಸ್ಯ, ಬ್ರಹ್ಮದ ಅನಿರ್ವಚನೀಯತೆ

ಎಲ್ಲ ಮೈವೆತ್ತಿರುವುವೀ ದಿಗಂಬರ ಮಹಾ

ನಿರ್ವಾಣ ಮೂರ್ತಿಯಲಿ: ಇಲ್ಲಿ ಬಾಯಿಗೆ ಬೀಗ!

ನುಡಿಗೆ ಮೌನದ ಸಿಡಿಲು ಹೊಡೆದಂತಿರುವುದೀಗ!

| ಕುವೆಂಪು

(‘ಅಗ್ನಿಹಂಸ’ ಕವನ ಸಂಕಲನದ ‘ಶ್ರವಣಬೆಳ್ಗೊಳದ ಗೋಮಟೇಶ್ವರನ ಸಾನ್ನಿಧ್ಯದಲ್ಲಿ’ ಕವಿತೆಯ ಆಯ್ದ ಸಾಲುಗಳು)

 

 

Leave a Reply

Your email address will not be published. Required fields are marked *