ಬೆಳಗಿನ ಜಾವ ಹಾಸನ ನಗರಕ್ಕೆ ನುಗ್ಗಿದ್ದ ಒಂಟಿ‌ ಸಲಗ, ಮರಳಿತು ಕಾಡಿಗೆ

ಹಾಸನ : ಬೆಳಗಿನ ಜಾವ ಹಾಸನ ನಗರದೊಳಗೆ ಬಂದು, ರಸ್ತೆಗಳಲ್ಲಿ ಓಡಾಡಿ ಆತಂಕ ಸೃಷ್ಟಿಸಿದ್ದ ಕಾಡಾನೆ ಮರಳಿ‌ ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮುಂಜಾನೆ ನಾಲ್ಕು ಗಂಟೆ ಸುಮಾರಿನಲ್ಲಿ ನಗರದ ಪಿ.ಎನ್.ಟಿ.‌ ಕಾಲನಿಗೆ ಬಂದಿದ್ದ ಕಾಡಾನೆ ಓಡಾಟದಿಂದ ಎಚ್ಚೆತ್ತ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಡಿಸಿಎಫ್ ಸಿವರಾಂಬಾಬು, ಎಸಿಎಫ್ ಹರೀಶ್, ಆರ್.ಎಫ್.ಓ. ಜಗದೀಶ್ ಅವರು ಬರುವಷ್ಟರಲ್ಲಿ ಆನೆ ನಾಪತ್ತೆಯಾಗಿತ್ತು. ಹಳೆ ಹಾಸನ ಭಾಗದಲ್ಲಿದ್ದ ಆನೆ ಜನರು ವಾಯು ವಿಹಾರ ನಡೆಸುವ ರಸ್ತೆಗಳಿಗೆ ನುಗ್ಗಿದರೆ ಅನಾಹುತವಾಗಬಹುದು ಎಂಬ ಆತಂಕದಿಂದಲೇ ಅಧಿಕಾರಿಗಳು ಆನೆಗಾಗಿ ಹುಡುಕಾಟ ಕಾರ್ಯಾಚರಣೆ ಆರಂಭಿಸಿದರು.

ಕೊನೆಗೂ ನಗರ ಹೊರ ವಲಯದಲ್ಲಿ ಪತ್ತೆಯಾದ ಆನೆ, ಹಾಸನ ತಾಲೂಕಿನ ಸೀಗೆಗುಡ್ಡ ಅರಣ್ಯಕ್ಕೆ ಓಡಿ ಹೋಯಿತು.

ಆನೆ ಬೆನ್ನಟ್ಟಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಬೆದರಿದ ಸಲಗ, ಉದ್ದೂರು, ಶಂಖ, ಅತ್ತಿಹಳ್ಳಿ, ಜಿನ್ನೇನಹಳ್ಳಿ, ಇಬ್ದಾಣೆ ಮೂಲಕ ಕಾಡು ಸೇರಿತು.

ಹದಿನೈದು ದಿನಗಳ ಅಂತರದಲ್ಲಿ ಎರಡನೆ ಬಾರಿಗೆ ನಗರಕ್ಕೆ ಕಾಡಾನೆ ನುಗ್ಗಿರುವುದರಿಂದ ಆತಂಕಗೊಂಡಿರುವ ಜನರು ಒಂಟಿ ಸಲಗ ಸೆರೆಗೆ ಜನರ ಒತ್ತಾಯಿಸುತ್ತಿದ್ದಾರೆ.

ಜೀವ ರಕ್ಷಿಸಿದ ಪತ್ರಕರ್ತ:
ಅರಣ್ಯ ಇಲಾಖೆಯವರು ಆನೆ ಸಂಚಾರದ ಬಗ್ಗೆ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಿದ್ದ ಇಬ್ದಾಣೆಯ ಹೈನುಗಾರರೊಬ್ಬರು ಆನೆ ದಾಳಿ ಅಪಾಯಕ್ಕೆ ಸಿಲುಕಿದ್ದರು. ಆದರೆ ಪತ್ರಕರ್ತರೊಬ್ಬರು ತೋರಿದ ಸಮಯ ಪ್ರಜ್ಞೆ ಆತನ ಜೀವ ಉಳಿಸಿತು.

ಇಬ್ದಾಣೆ ಕೆರೆ ಏರಿ ಮೇಲೆ ಡೇರಿಗೆ ಹಾಲು ಹಾಕಲೆಂದು ಸೈಕಲ್ ನಲ್ಲಿ‌ ಕ್ಯಾನ್ ಇರಿಸಿಕೊಂಡು ಹೋಗುತ್ತಿದ್ದ ಧರ್ಮಣ್ಣ ಅವರನ್ನು ಗಮನಿಸಿದ ಮುಂಜಾನೆಯಿಂದಲೂ ಸಲಗವನ್ನು ಹಿಂಬಾಲಿಸುತ್ತಿದ್ದ ರಾಜ್ ನ್ಯೂಸ್ ವರದಿಗಾರ ಬಿ.ಸಿ.ಶಶಿಧರ್, ಸ್ವಲ್ಪ ದೂರದಲ್ಲಿಯೇ ಆನೆ ಏರಿ ಮೇಲೆ ಬರುತ್ತಿರುವುದರಿಂದ ಅವರು ನೇರವಾಗಿ ಆನೆ ದಾಳಿಗೆ ಸಿಲುಕಿಕೊಳ್ಳುವ ಅಪಾಯವನ್ನು ಊಹಿಸಿದರು.
ತಕ್ಷಣವೇ ವೇಗವಾಗಿ ಓಡಿ ಹೋಗಿ ಸೈಕಲ್ ನಲ್ಲಿ ಹೋಗುತ್ತಿದ್ದ ಹೈನುಗಾರನನ್ನು ತಡೆದು, ಅಕ್ಷರಶಃ ಏರಿಯಿಂದ ಕೆಳಗೆ ಎಳೆದೊಯ್ದರು. ಅದಾದ ಕೆಲವೇ ಕ್ಷಣಗಳಲ್ಲಿ ಆನೆ ಅದೇ ಜಾಗದಲ್ಲಿ ಹಾದು ಹೋಯಿತು.
ತಾನೆಂತಹ ಅಪಾಯಕ್ಕೆ ಸಿಲುಕಿಕೊಳ್ಳಲಿದ್ದೆ ಎನ್ನುವುದನ್ನು ಗ್ರಹಿಸಿದ ಧರ್ಮಣ್ಣ, ಜೀವ ಉಳಿಸಿದ ಪತ್ರಕರ್ತನಿಗೆ ಧನ್ಯವಾದ ಹೇಳಿ ಮುಂದೆ ಸಾಗಿದರು.

Leave a Reply

Your email address will not be published. Required fields are marked *