ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ?

blank

ಬೆಳಗಾವಿ: ಇಲ್ಲಿನ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದಿಂದ ಮೂಲೆ ನಿವೇಶನಗಳ ಹಂಚಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಖೋತಾ ಆಗಿದೆ.
ಕೋಟ್ಯಂತರ ರೂ. ಬೆಲೆಬಾಳುವ 90 ಮೂಲೆ ನಿವೇಶನ (ಕಾರ್ನರ್ ಸೈಟ್)ಗಳನ್ನು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಮಾರಾಟ ಮಾಡಲಾಗಿದೆ.

ಮೇಲಧಿಕಾರಿಗಳು, ಕೆಳ ಅಧಿಕಾರಿಗಳ ಸಂಬಂಧಿಕರಿಗೆ ಹಾಗೂ ಪ್ರಭಾವಿಗಳಿಗೆ ನಿವೇಶನಗಳು ಹಂಚಿಕೆಯಾದ ದಾಖಲೆಗಳು ಲಭಿಸಿದ್ದು, ಅಧಿಕಾರಿಗಳ ಕರಾಮತ್ತು ಬಯಲಾಗಿದೆ. ನಗರದ ರಾಮತೀರ್ಥ ನಗರ, ಸಹ್ಯಾದ್ರಿ ನಗರ, ದೇವರಾಜ ಅರಸು ಬಡಾವಣೆ ಹಾಗೂ ಎಚ್.ಡಿ. ಕುಮಾಸ್ವಾಮಿ ಲೇಔಟ್ ಬಡಾವಣೆಗಳಲ್ಲಿನ 90 ಕಾರ್ನರ್ ಸೈಟ್‌ಗಳ ಮಾರಾಟದ ಹರಾಜು ಪ್ರಕ್ರಿಯೆಗೆ ಯಾವುದೇ ರೀತಿಯ ಪತ್ರಿಕಾ ಪ್ರಕಟಣೆಯಾಗಲಿ ಅಥವಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡದೆ ತಮಗೆ ಬೇಕಾದ ವ್ಯಕ್ತಿಗಳನ್ನು ಇಟ್ಟುಕೊಂಡು 2022ರ ಮಾರ್ಚ್ 18ರಂದು ತರಾತುರಿಯಲ್ಲಿ ಹರಾಜು ಮಾಡಿ ಮುಗಿಸಿದ್ದಾರೆ.

ಆಶ್ಚರ್ಯದ ಸಂಗತಿ ಎಂದರೆ ಮಾರ್ಚ್ 18ರಂದು ಹೋಳಿ ಹಬ್ಬದ ಸಾರ್ವತ್ರಿಕ ರಜೆ ಇದೆ. ಆದರೂ ಮ್ಯಾನುವಲ್ ಆಗಿ ಈ ಪ್ರಕ್ರಿಯೆ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ಎಷ್ಟು ನಿವೇಶನಗಳಿವೆ ಎಂದು ಪಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿತ್ತರಿಸಿ, ಪತ್ರಿಕಾ ಪ್ರಕಟಣೆ ನೀಡಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಬೇಕು. ಹರಾಜಿನಲ್ಲಿ ಯಾರೂ ಭಾಗವಹಿಸದಿದ್ದರೆ ಮತ್ತೆ ಮೂರು ಬಾರಿ ಹರಾಜು ಮಾಡಬೇಕು. ಈ ವೇಳೆ ಯಾರೂ ನಿವೇಶನಗಳ ಖರೀದಿಗೆ ಮುಂದೆ ಬಾರದಿದ್ದ ಪಕ್ಷದಲ್ಲಿ ಮ್ಯಾನುವಲ್ ಆಗಿ ಹರಾಜು ಮಾಡಬೇಕೆಂಬ ನಿಯಮವಿದೆ. ಮ್ಯಾನುವಲ್ ಆಗಿ ಹರಾಜು ಮಾಡುವುದಕ್ಕೂ 15 ದಿನ ಮೊದಲೇ ಸಾರ್ವಜನಿಕವಾಗಿ ಪ್ರಕಟಣೆ ನೀಡಬೇಕು. ಇವ್ಯಾವ ಪ್ರಕ್ರಿಯೆ ನಡೆಸದೆ ತರಾತುರಿಯಲ್ಲಿ ಬೇಕಾದವರಿಗೆ ಬೇಕಾಬಿಟ್ಟಿಯಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ.

ಹಣ ತುಂಬದೆ ಬಿಡ್‌ನಲ್ಲಿ ಭಾಗಿ: ಮೂಲೆ ನಿವೇಶನಗಳ ಖರೀದಿಯ ಹರಾಜಿನಲ್ಲಿ ಭಾಗಿಯಾಗ ಬಯಸುವವರು 50 ಸಾವಿರ ರೂ. ಮುಂಗಡ ಹಣ ಕಟ್ಟಿ ಟೋಕನ್ ಪಡೆದು ಬಿಡ್‌ನಲ್ಲಿ ಭಾಗವಹಿಸಬೇಕು ಎಂಬ ನಿಯಮವೂ ಪಾಲನೆಯಾಗಿಲ್ಲ. ಬಹುತೇಕರು ಮುಂಗಡವಾಗಿ ಹಣ ತುಂಬದೆ ಬಿಡ್‌ನಲ್ಲಿ ಪಾಲ್ಗೊಂಡಿರುವುದು ದಾಖಲೆಯಲ್ಲಿದೆ. ಇನ್ನೊಂದು ಮಹತ್ವದ ಸಂಗತಿ ಎಂದರೆ ಈ ಹರಾಜು ಪ್ರಕ್ರಿಯೆಯಲ್ಲಿ ಪ್ರತಿಸ್ಪರ್ಧಿಗಳೇ ಇಲ್ಲ ಎನ್ನುವ ಸಂಗತಿಯೇ ನಾಗರಿಕರನ್ನು ದಂಗುಬಡಿಸಿದೆ. ಹರಾಜು ಪ್ರಕ್ರಿಯೆ ನಡೆದಾಗ ಪ್ರತಿಸ್ಪರ್ಧಿಗಳು ಇದ್ದರೆ ಮಾತ್ರ ಹರಾಜು ಮಾಡಬೇಕು. ಆದರೆ, ಹರಾಜಿನಲ್ಲಿ ಪ್ರತಿಸ್ಪರ್ಧಿಗಳು ಇಲ್ಲದೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಅದ್ಹೇಗೆ ಸಹಿ ಮಾಡಿದರು ಎಂಬ ಪ್ರಶ್ನೆ ಉದ್ಭವವಾಗಿದೆ. 2022ರ ಮಾರ್ಚ್ 16, 17ರಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆದ ಇ-ಹರಾಜು ಪ್ರಕ್ರಿಯೆ ದೋಷಗಳು ಕಾಣದಂತೆ ನಡೆದಿವೆ. ಆದರೆ, ಮರುದಿನ 18ರಂದು ಮ್ಯಾನುವಲ್ ಆಗಿ ನಡೆದ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವಾಗಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗೆ ವರದಿ ನೀಡುವಂತೆ ತಾಕೀತು ಮಾಡಿದ್ದಾರೆ. ಇತ್ತ ಬುಡಾ ಅಧಿಕಾರಿಗಳು ದಾಖಲೆಗಳನ್ನು ಸೃಷ್ಟಿಸುವ ತರಾತುರಿ ಕಾರ್ಯದಲ್ಲಿ ತೊಡಗಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಖರೀದಿಸಿ, ಬುಡಾ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದಾರೆ. ಸರ್ಕಾರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಮಾರ್ಚ್ 18ರಂದು ನಡೆದ ಮೂಲೆ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಪುನಃ ಆನ್‌ಲೈನ್ ಮೂಲಕ ಹರಾಜು ಪ್ರಕ್ರಿಯೆ ನಡೆಸಬೇಕು.
| ಜಯಶ್ರೀ ಗುರಣ್ಣವರ ರಾಜ್ಯ ರೈತ ಕಾರ್ಮಿಕ ಹಾಗೂ ಮಹಿಳಾ ಸಂಘದ ಅಧ್ಯಕ್ಷೆ

ಸರ್ಕಾರದ ಮಾರ್ಗಸೂಚಿಗಳನ್ವಯ ನಾವು ನಿವೇಶನಗಳನ್ನು ಹಂಚಿಕೆ ಮಾಡಿದ್ದೇವೆ. ನಮ್ಮ ಬಳಿ ನಿಯಮಾನುಸಾರ ನಿವೇಶನ ಹಂಚಿಕೆ ಮಾಡಿರುವ ದಾಖಲೆಗಳಿವೆ. ಮೇಲಧಿಕಾರಿಗಳು ಕೇಳಿದರೆ ನೀಡುತ್ತೇವೆ.
| ಪ್ರೀತಂ ನಸಲಾಪುರೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ

| ಜಗದೀಶ ಹೊಂಬಳಿ ಬೆಳಗಾವಿ

Share This Article

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…

ಊಟದ ಬಳಿಕ ಹೊಟ್ಟೆಯು ಬಲೂನ್‌ನಂತೆ ಊದಿಕೊಳ್ಳುತ್ತದೆಯೇ?; ಸಮಸ್ಯೆಗೆ ಇಲ್ಲಿದೆ ಪರಿಹಾರ | Health Tips

ಇತ್ತೀಚೆಗೆ ಜೀವನಶೈಲಿ ಮತ್ತು ಊಟದಿಂದಾಗಿ ಗ್ಯಾಸ್​​ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು.…

ಕೂದಲು ಉದುರುವ ಸಮಸ್ಯೆ ಪರಿಹಾರಕ್ಕೆ ರಾಮಬಾಣ ಹರಳೆಣ್ಣೆ ಹೇರ್​​ ವಾಶ್​​​; ನಿಮಗಾಗಿ ಹೆಲ್ತಿ ಮಾಹಿತಿ | Health Tips

ನಮ್ಮ ಕೂದಲನ್ನು ಸ್ವಚ್ಛವಾಗಿಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಏನೆನೋ ಮಾಡುತ್ತೇವೆ. ನಮ್ಮ ಕೂದಲಿನ ಬೆಳವಣಿಗೆಯ…