ಬೆಳಗಾವಿ: ಢವಳೇಶ್ವರ ಜಾತ್ರೆಯಲ್ಲಿ ಗುಂಡೇಟಿನಿಂದ ವ್ಯಕ್ತಿ ಸಾವು

ಬೆಳಗಾವಿ: ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಬುಧವಾರ ನಡೆದ ರಂಗೇಶ್ವರ ದೇವರ ಜಾತ್ರೆಯಲ್ಲಿ ಆಕಸ್ಮಿಕ ಗುಂಡು ಹಾರಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ.

ಗ್ರಾಮದ ನಿಜಗುಣಿ ಮಹಾರುದ್ರಪ್ಪ ಅಂಗಡಿ (47) ಮೃತ ವ್ಯಕ್ತಿ. ಗ್ರಾಮದ ರಂಗೇಶ್ವರ ದೇವಸ್ಥಾನ ಬಳಿ ಬುಧವಾರ ಬೆಳಗ್ಗೆ ನಡೆಯುತ್ತಿದ್ದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಅದೇ ಗ್ರಾಮದ ಮಹಾದೇವ ಭೀಮಪ್ಪ ನಾಡಗೌಡ ಎನ್ನುವವರ ರಿವಾಲ್ವರ್‌ನಿಂದ ಗುಂಡು ಹಾರಿದೆ. ಗುಂಡು ತಗುಲಿದ ನಿಜಗುಣಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಪರವಾನಗಿ ಹೊಂದಿರುವ ರಿವಾಲ್ವರ್‌ನಿಂದ ಗುಂಡು ಹಾರಿದೆ. ಕುಲಗೋಡ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸುಧೀರಕುಮಾರ್ ರೆಡ್ಡಿ ತಿಳಿಸಿದ್ದಾರೆ.