ಬೆಳಗಾವಿ: ಚಿಂತಾಮಣಿ ಪ್ರಕರಣದ ತನಿಖೆಗೆ ಆದೇಶ

ಬೆಳಗಾವಿ: ಚಿಂತಾಮಣಿಯಲ್ಲಿ ಹರಕೆಯ ಪ್ರಸಾದ ಸೇವಿಸಿ ಮಹಿಳೆಯರಿಬ್ಬರು ಬಲಿಯಾಗಿರುವ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದ್ದು, ತಪ್ಪಿತಸ್ಥ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಪರಮೇಶ್ವರ ನಾಯ್ಕ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಮಾಸುವ ಮುನ್ನ ಚಿಂತಾಮಣಿಯ ನರಸಿಂಹಪೇಟೆಯ ಅಮ್ಮ ಗಂಗಾಭವಾನಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಅವಘಡ ನಡೆದಿರುವುದು ವಿಷಾದನೀಯ ಎಂದರು.

ಮನೆಯಲ್ಲಿ ಪ್ರಸಾದ ತಯಾರಿಸಿ, ಬಳಿಕ ಮನೆ-ಮನೆಗೆ ತೆರಳಿ ಹಂಚುವ ಸಂಪ್ರದಾಯವಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಮಹಿಳೆಯೊಬ್ಬರು ಕೇಸರಿ ಬಾತ್ ತಯಾರಿಸಿಕೊಂಡು ಬಂದು ಒತ್ತಾಯಪೂರ್ವಕ ವಾಗಿ ಭಕ್ತರಿಗೆ ತಿನ್ನಲು ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. ತಪ್ಪಿತಸ್ಥರ ವಿರುದ್ಧ ಮುಲ್ಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ದುರಂತಕ್ಕೆ ಕಾರಣವಾದ ಆಹಾರದ ಸ್ಯಾಂಪಲ್‌ಗಳನ್ನು ತಪಾಸಣೆಗೆ ಕಳುಹಿಸಿಕೊಡಲಾಗಿದೆ ಎಂದು ಸಚಿವರು ಹೇಳಿದರು.

ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೆಚ್ಚಿನ ಅನುದಾನ

ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಮುಂಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಮುಜರಾಯಿ ಸಚಿವರು ಹೇಳಿದರು. ಈ ಹಿಂದೆ ಆದಾಯ ಬರುವ ದೇವಸ್ಥಾನಗಳನ್ನು ‘ಎ’ ಕೆಟಗರಿಗೆ, ಕಡಿಮೆ ಆದಾಯ ಬರುವ ದೇವಸ್ಥಾನಗಳನ್ನು ‘ಬಿ’ ಕೆಟಗರಿಗೆ ಮತ್ತು ಆದಾಯವಿಲ್ಲದ ದೇವಸ್ಥಾನಗಳನ್ನು ‘ಸಿ’ಕೆಟಗರಿಗೆ ಸೇರಿಸಲಾಗಿದೆ. ಈ ಕೆಟಗರಿವಾರು ಅನುದಾನ ನೀಡುವುದಕ್ಕಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಮುಜರಾಯಿ ಇಲಾಖೆ ಉಪವಿಭಾಗಾಧಿಕಾರಿ ರವಿ ಕೋಟಾರಗಸ್ತಿ ಇದ್ದರು.