More

  ಬೆಳಗಾವಿಯ ಪರಂಪರಾಗತ ಫೌಂಡ್ರಿ ಉದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ

  ಬೆಳಗಾವಿ: ಕುಂದಾನಗರಿಯ ಫೌಂಡ್ರಿ ಉದ್ಯಮ ವಿಶ್ವದಲ್ಲೇ ಖ್ಯಾತಿ ಗಳಿಸಿದೆ. ಉದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದರು.

  ನಗರದ ಉದ್ಯಮಬಾಗದಲ್ಲಿರುವ ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ‘ವ್ಯಾಪಾರ ಮತ್ತು ವಾಣಿಜ್ಯ’ ವಿಷಯಗಳ ಪ್ರಣಾಳಿಕೆ ಸಲಹೆ ಸಂಗ್ರಹ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು. ಬೆಳಗಾವಿಯಲ್ಲಿ 3 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಇಷ್ಟು ಕೈಗಾರಿಕೆಗಳನ್ನು ಸರಿಗಟ್ಟಲು ವಿಶ್ವದ ಯಾವ ದೇಶಕ್ಕೂ ಸಾಧ್ಯವಿಲ್ಲ. ಹೀಗಾಗಿ ಇಲ್ಲಿಯ ಕೈಗಾರಿಕೆಗಳನ್ನು ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

  ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆತ್ಮನಿರ್ಭರ, ಮೇಕ್ ಇನ್ ಇಂಡಿಯಾ ಸೇರಿ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಭಾರತದಲ್ಲಿ ಕೈಗಾರಿಕಾಭಿವೃದ್ಧಿ ವೇಗವಾಗುತ್ತಿದೆ, ಉದ್ಯಮಬಾಗದಲ್ಲಿ ಜಾಗ ಗುರುತಿಸಿದರೆ ಇಎಸ್‌ಐ ಆಸ್ಪತ್ರೆ ನಿರ್ಮಿಸುತ್ತೇವೆ. ಜತೆಗೆ ಬೆಳಗಾವಿಯಲ್ಲಿ ಪಿಎಫ್ ಕಚೇರಿಯನ್ನೂ ತೆರೆಯುತ್ತೇವೆ. ಬೆಳಗಾವಿಯಲ್ಲಿ ಫೌಂಡ್ರಿ ಉದ್ಯಮದ ಜಿಲ್ಲಾ ರಪ್ತು ಕೇಂದ್ರ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದರು. ಕೇಂದ್ರ ಸರ್ಕಾರದ ಖರೀದಿ ಮತ್ತು ಗುತ್ತಿಗೆ ನಿರ್ವಹಣೆಗೆ ಸಂಬಂಧಿಸಿದ ವೆಬ್‌ಸೈಟ್ ಕುರಿತು ಬೆಳಗಾವಿಯ ಎಲ್ಲ ಕೈಗಾರಿಕೋದ್ಯಮಿಗಳಿಗೆ ಶೀಘ್ರದಲ್ಲಿ ತರಬೇತಿ ಶಿಬಿರ ಮಾಡಲಾಗುವುದು ಎಂದು ಗೋಯಲ್ ತಿಳಿಸಿದರು.

  ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿಯಲ್ಲಿರುವ ರಕ್ಷಣಾ ಇಲಾಖೆಯ 750 ಎಕರೆ ಜಮೀನನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದರೆ, ಇಲ್ಲಿ ರಾಜ್ಯ ಸರ್ಕಾರದಿಂದ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಅನುಕೂಲವಾಗುತ್ತದೆ ಎಂದು ಸಚಿವರಿಗೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಇದು ದೇಶದ ಭದ್ರತೆ ಸಂಬಂಧಿಸಿದ ಸೂಕ್ಷ್ಮ ವಿಷಯವಾಗಿದೆ. ಜಾಗ ಹಸ್ತಾಂತರವಾಗುತ್ತದೆ ಎಂದು ಕಾಯುವುದು ಬೇಡ. ಅದರ ಬದಲು ಕೇಂದ್ರ ರಕ್ಷಣಾ ಸಚಿವರಿಗೆ ಮನವಿ ಮಾಡಿ ಆ 750 ಎಕರೆ ಜಾಗದಲ್ಲಿ ರಕ್ಷಣಾ ಕ್ಷೇತ್ರದ ಸಾಮಗ್ರಿಗಳ ಉತ್ಪಾದನಾ ಹಬ್ ಮಾಡುವಂತೆ ತಿಳಿಸಿ. ಇದರಿಂದ ಬೆಳಗಾವಿಯ ಕೈಗಾರಿಕಾ ವಲಯವು ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು.

  ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಹೇಮೆಂದ್ರ ಪೋರವಾಲ್, ಉಪಾಧ್ಯಕ್ಷ ರಾಜೇಂದ್ರ ಮುತಗೆಕರ, ಕಾರ್ಯದರ್ಶಿ ಸೊಪನಿಸ್ ಶಾ, ಜಂಟಿ ಕಾರ್ಯದರ್ಶಿ ಆನಂದ ದೇಸಾಯಿ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts