ಬೆಂಗಳೂರು: ಕತ್ತಲನ್ನು ಹೋಗಲಾಡಿಸಿ ಬೆಳಕಿನ ಭರವಸೆ ಮೂಡಿಸುವ ದೀಪಾವಳಿ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ಮನೆಗಳಲ್ಲಿ ಹಣತೆ ಹಚ್ಚಿ, ಸಿಹಿ ತಿಂದು, ಪಟಾಕಿ ಸಿಡಿಸಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಇದಕ್ಕೆ ಸ್ಯಾಂಡಲ್‌ವುಡ್ ನಟಿಯರೂ ಹೊರತಾಗಿಲ್ಲ. ತಮ್ಮ ಬಿಜಿಯ ನಡುವೆಯೂ ಹಬ್ಬವನ್ನು ಸಂಭ್ರಮಿಸುತ್ತಾರೆ. ನಟಿಯರಾದ ಐಶಾನಿ ಶೆಟ್ಟಿ, ರೇಖಾಶ್ರೀ ಹಾಗೂ ಅಶ್ವಿತಾ ಗೌಡ ಹಬ್ಬದ ಆಚರಣೆಯ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
ವರ್ಷದ ಅತಿ ದೊಡ್ಡ ಹಬ್ಬ
‘ವಾಸ್ತು ಪ್ರಕಾರ’, ‘ರಾಕೆಟ್’, ‘ಧರಣಿ ಮಂಡಲ ಮಧ್ಯದೊಳಗೆ’, ‘ಹೊಂದಿಸಿ ಬರೆಯಿರಿ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಐಶಾನಿ ಶೆಟ್ಟಿ ಸದ್ಯ ಆ್ಯಕ್ಷನ್-ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲೇ ಕಥೆಯ ಕೆಲಸ ಪೂರ್ಣಗೊಳಿಸಿರುವ ಖುಷಿಯಲ್ಲಿರುವ ಅವರು, ‘ನಮ್ಮನೆಯಲ್ಲಿ ಆಚರಿಸುವ ವರ್ಷದ ಅತಿ ದೊಡ್ಡ ಹಬ್ಬ ದೀಪಾವಳಿ. ಸಣ್ಣ ವಯಸ್ಸಿನಿಂದಲೂ ಜೋರಾಗಿ ಆಚರಿಸುತ್ತೇವೆ. ಚಿಕ್ಕವಳಿದ್ದಾಗ ಪಟಾಕಿ ಸಿಡಿಸುವುದು ಖುಷಿ ನೀಡುತ್ತಿತ್ತು. ಅಪ್ಪ ಹೊಸೂರಿಗೆ ಹೋಗಿ ಪಟಾಕಿ ತರುತ್ತಿದ್ದರು. ಈಗ ಪಟಾಕಿ ಸಿಡಿಸುವುದಕ್ಕಿಂತ ಮನೆಯನ್ನು ಹೂವು, ದೀಪಗಳಿಂದ ಅಲಂಕಾರ ಮಾಡುವುದೇ ಸಂಭ್ರಮ. ಪ್ರತಿ ವರ್ಷ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಎಲ್ಲರೂ ನಮ್ಮ ಮನೆಯಲ್ಲಿ ಸೇರಿ ಹಬ್ಬ ಆಚರಿಸುತ್ತೇವೆ. ಈ ಬಾರಿ ನಾನೇ ಅಡುಗೆ ಮಾಡುತ್ತಿದ್ದೇನೆ. ಬಳಿಕ ಗೇಮ್ಸ್ ಆಡುತ್ತೇವೆ. ದೀಪಾವಳಿ ನನ್ನ ೇವರೇಟ್ ಹಬ್ಬ ಕೂಡ. ಕತ್ತಲಿನಿಂದ ಬೆಳಕಿನೆಡೆಗೆ ಕರೆತರುವ ಹಬ್ಬ. ನನಗೆ ಈ ಬಾರಿಯ ದೀಪಾವಳಿ ತುಂಬ ಸ್ಪೆಷಲ್. ನನ್ನ ಜೀವನ, ಸಿನಿಮಾ ಕರಿಯರ್ ಮತ್ತೊಂದು ಮಜಲು ಮುಟ್ಟಲಿದೆ. ನಾನು ನಟಿಸಿ, ಚಿತ್ರದ ಕಥೆ ೈನಲ್ ಆಗಿದೆ. ಡಿಸೆಂಬರ್ ಅಥವಾ ಜನವರಿ ಹೊತ್ತಿಗೆ ಪ್ರಿ-ಪ್ರೊಡಕ್ಷನ್ ಶುರು ಮಾಡಲಿದ್ದೇವೆ. ಇದು ನನ್ನ ಕನಸಿನ ಪ್ರಾಜೆಕ್ಟ್’ ಎಂದು ಮೊದಲ ಬಾರಿಗೆ ನಿರ್ದೇಶಿಸಲಿರುವ ಚಿತ್ರದ ಸಿದ್ಧತೆಯ ಬಗ್ಗೆ ಸಂಭ್ರಮದಿಂದ ಹೇಳಿಕೊಳ್ಳುತ್ತಾರೆ ಐಶಾನಿ ಶೆಟ್ಟಿ.
ಗೆಳತಿ ಮನೆಯಲ್ಲಿ ಹಬ್ಬ ಆಚರಣೆ
‘ಮಂಡ್ಯದ ಹುಡುಗ್ರು’ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ನಟಿ ರೇಖಾಶ್ರೀ ಬಳಿಕ ‘ಗರ್ನಲ್’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ನಟನೆಯ ಜತೆಗೆ ಸಹ ನಿರ್ಮಾಪಕಿಯಾಗಿಯೂ ಮೂರು ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ‘ಈ ಬಾರಿಯ ದೀಪಾವಳಿ ತುಂಬ ಸ್ಪೆಷಲ್’ ಎನ್ನುವ ರೇಖಾಶ್ರೀ, ‘ಕಳೆದ ದೀಪಾವಳಿ ಸಮಯದಲ್ಲಿ ‘ಗರ್ನಲ್’ ತೆರೆಕಂಡ ಖುಷಿ ಇತ್ತು. ಈ ಬಾರಿ ನನ್ನ ಕೈಯಲ್ಲಿ ಮೂರು ಚಿತ್ರಗಳಿವೆ. ಹೀಗಾಗಿ ಈ ಬಾರಿಯ ಹಬ್ಬ ಮತ್ತಷ್ಟು ಖುಷಿ ಹೆಚ್ಚಿಸಿದೆ. ಸದ್ಯ ನಾನು ಕನ್ನಡದ ‘ಕಲ್ಯಾಣಿ ಸ್ಟ್ರೀಟ್’, ‘ಲ್ಗುಣಿ’ ಹಾಗೂ ತೆಲುಗು- ತಮಿಳಿನಲ್ಲಿ ಮೂಡಿಬರುತ್ತಿರುವ ನೈಜ ಘಟನೆ ಆಧಾರಿತ ‘ಮರ್ಯಾದೆ ಹತ್ಯೆಂ’ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಈ ಬಾರಿ ಹಬ್ಬವನ್ನು ನೆಲಮಂಗಲದ ನನ್ನ ಗೆಳತಿಯ ಮನೆಯಲ್ಲಿ ಆಚರಿಸುತ್ತಿದ್ದೇನೆ. ತುಂಬಾ ದಿನಗಳ ಬಳಿಕ ಗೆಳತಿ ಸಿಗುತ್ತಿದ್ದಾಳೆ. ಬಳಿಕ ಇಬ್ಬರು ಮಂತ್ರಾಲಯಕ್ಕೆ ತೆರಳಲಿದ್ದೇವೆ. ಬೆಳಕಿನ ಹಬ್ಬ ನಮ್ಮ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ಆಚರಣೆಯಾಗಿದೆ. ಹಾಗಾಗಿ ಅರ್ಥಪೂರ್ಣವಾಗಿ ಸೆಲೆಬ್ರೇಟ್ ಮಾಡಬೇಕು. ಪಟಾಕಿ ಸಿಡಿಸುವಾಗ ಎಚ್ಚರ ವಹಿಸಬೇಕು. ಇದರಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು’ ಎಂದು ಹೇಳಿಕೊಳ್ಳುತ್ತಾರೆ.
ಹಬ್ಬದಂದೇ ಹೊಸ ಸಿನಿಮಾ
‘ಆಲ್ ಇಂಡಿಯಾ ರೇಡಿಯೋ’ ಎಂಬ ಕಲಾತ್ಮಕ ಚಿತ್ರದಲ್ಲಿ ನಟಿಸಿದ್ದ ಅಶ್ವಿತಾ ಗೌಡಗೆ ಈ ಬಾರಿ ಬೆಳಕಿನ ಹಬ್ಬವು ಮತ್ತಷ್ಟು ಬಿಜಿ ಮಾಡಿದೆ. ಹಬ್ಬದ ದಿನದಂದೇ ಅವರ ಮತ್ತೊಂದು ಸಿನಿಮಾ ಸೆಟ್ಟೇರುತ್ತಿರುವುದು ದೀಪಾವಳಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಈ ಬಗ್ಗೆ, ‘ಗುರುವಾರ ಹಾಸನಾಂಬಾ ದೇವಿಯ ದರ್ಶನ ಪಡೆಯುವ ಮೂಲಕ ದೀಪಾವಳಿ ಆರಂಭಿಸಿದ್ದೇನೆ. ಹಬ್ಬದ ಮೊದಲ ದಿನ ಮಾತ್ರ ನಾನು ಮನೆಯಲ್ಲಿರುತ್ತೇನೆ. ಶುಕ್ರವಾರದಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದೇನೆ. ವಿಶೇಷ ಎಂದರೆ, ನನ್ನ ಮುಂದಿನ ಸಿನಿಮಾ ಕೂಡ ಹಬ್ಬದ ದಿನದಂದು ಮಂಗಳೂರಿನಲ್ಲಿ ಸೆಟ್ಟೇರುತ್ತಿದೆ. ಹಬ್ಬದಲ್ಲಿ ಮತ್ತಷ್ಟು ಬಿಜಿಯಾಗುತ್ತಿದ್ದೇನೆ. ಇನ್ನು,‘ಕಸ್ಟಡಿ’ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದೇನೆ. ಅದರ ಶೂಟಿಂಗ್ ನಡೆಯುತ್ತಿದೆ. ದೀಪಾವಳಿಯು ದೈವೀಕತೆಯ ಹಬ್ಬ. ಹೊಸ ಭರವಸೆ ಮೂಡಿಸುವ ಹಬ್ಬ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.