ಬೆಳಕಿನೆಡೆಗೆ ಕರೆದೂಯ್ಯುವುದೇ ಧರ್ಮ

ಗುಬ್ಬಿ: ಮೌಲ್ಯಧಾರಿತ ಜೀವನ ಬದುಕಿಗೆ ನೆಲೆ ನೀಡುತ್ತದೆ. ಸಂಸ್ಕಾರಗಳು ಪುನರುತ್ಥಾನಗೊಳ್ಳಲು ಧರ್ಮ ಅವಶ್ಯಕವಾಗಿದೆ ಎಂದು ಬಾಳೆೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪ್ರತಿಪಾದಿಸಿದರು.

ನಿಟ್ಟೂರು ಹೋಬಳಿ ಎನ್.ಹೊಸಹಳ್ಳಿಯಲ್ಲಿ ಶುಕ್ರವಾರ ಶ್ರೀ ಚಂದ್ರಮೌಳೇಶ್ವರ ದೇಗುಲ ಗೋಪುರ ಕಳಸಾರೋಹಣ, ಶ್ರೀ ಬಾಳೆಹೂನ್ನೂರು ರಂಭಾಪುರಿ ಜಗದ್ಗುರುಗಳ ವರ್ಧಂತಿ ಮಹೋತ್ಸವ, ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಜನಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.

ಸದಾ ಬೆಳಕಿನೆಡೆಗೆ ಕರೆದೂಯ್ಯುವುದೇ ನಿಜ ಧರ್ಮ. ಸಮೃದ್ಧ ನಾಡು ಕಟ್ಟುವುದೇ ಪ್ರತಿಧರ್ಮ ಪೀಠಗಳ ಗುರಿಯಾಗಿದೆ ಎಂದು ತಿಳಿಸಿದರು.

ಭಾರತಕ್ಕೆ ತನ್ನದೇ ಆದ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರಗಳಿದ್ದು, ಪ್ರತಿಯೊಬ್ಬರೂ ಅವುಗಳನ್ನು ಉಳಿಸಿಕೊಂಡು ಹೋಗಬೇಕು. ವಿದ್ಯೆ, ವಿವೇಚನೆ, ಚಿಂತನೆ, ಆತ್ಮ ವಿಶ್ಲೇಷಣೆ, ಶುದ್ಧ ಧ್ಯೇಯಗಳೇ ಜೀವನದ ಶ್ರೇಯಸ್ಸಿಗೆ ಮೆಟ್ಟಿಲುಗಳು ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಎಲ್ಲ ಧರ್ಮದವರನ್ನು, ಜಾತಿಯವರನ್ನು ಭೇದವಿಲ್ಲದೆ, ಧರ್ಮ ಜಾಗೃತಿ ಮೂಡಿಸುತ್ತಿರುವ ಮಠವೆಂದರೆ ಅದು ರಂಭಾಪುರಿ ಮಠ ಎಂದು ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.

ಶಿವಗಂಗೆ ಮಠದ ಮಲಯ ಶಾಂತಮುನಿ ಸ್ವಾಮೀಜಿ ಮಾತನಾಡಿ, ಶ್ರೀಗಳು ಪೀಠಾಧ್ಯಕ್ಷರಾದಾಗ 7 ಅಂಶದ ಕಾರ್ಯಕ್ರಮ ಯೋಜನೆ ಹಾಕಿ ಅಭಿವೃದ್ಧಿಗೆ ಮುಂದಾದರು. ನಿರಂತರ 27 ವರ್ಷದಿಂದ ಧರ್ಮ ಬೆಳೆಸಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದರು.

ಯುವಜನತೆ ಧರ್ಮ ಗುರುಗಳ ವಿಚಾರ ಮನಗಂಡು ಹೆಜ್ಜೆ ಇಡಬೇಕು. ಸಮಾಜ ಸುಧಾರಕರ ಜೀವನ ನಮಗೆ ಆದರ್ಶವಾಗಬೇಕು ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಸಲಹೆ ನೀಡಿದರು.

ಹೊನ್ನವಳ್ಳಿ ಮಠದ ಶ್ರೀ ಶಿವಪ್ರಕಾಶ ಸ್ವಾಮೀಜಿ, ಅಂಬಲದೇವನಹಳ್ಳಿ ಮಠದ ಉಜ್ಜನೀಶ್ವರ ಸ್ವಾಮೀಜಿ, ಜಿಪಂ ಸದಸ್ಯೆ ಯಶೋದಮ್ಮ ಶಿವಣ್ಣ, ತಾಪಂ ಸದಸ್ಯ ಬಸವರಾಜು, ಗ್ರಾಪಂ ಅಧ್ಯಕ್ಷ ರೇಣುಕ ಪ್ರಸಾದ್, ವಿಎಸ್​ಎಸ್​ಎನ್ ಸದಸ್ಯ ಕಾರೆಕುರ್ಚಿ ಸತೀಶ್, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಜಿ.ಎನ್.ಬೆಟ್ಟಸ್ವಾಮಿ, ಪರಮಶೀವಯ್ಯ, ಬಸವರಾಜು ಸಚ್ಚಿದಾನಂದ ಮೂರ್ತಿ, ಗುರುರೇಣುಕಾರಾಧ್ಯ ಇತರರಿದ್ದರು.

ಅಡ್ಡಪಲ್ಲಕ್ಕಿ ಉತ್ಸವ : ವರ್ಧಂತಿ ಮಹೋತ್ಸವ ಪ್ರಯುಕ್ತ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಮಾಡಲಾಯಿತು. ಕುಂಭ ಹೊತ್ತ ಮಹಿಳೆಯರು, ಜಾನಪದ ಕಲಾತಂಡಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು.