ಬೆಲವಂತನಕೊಪ್ಪದಲ್ಲಿ ನೀರಿಗೆ ಬಲು ಫಜೀತಿ

ಸೊರಬ: ಏಪ್ರಿಲ್ ಆರಂಭವಾಗುತ್ತಿದ್ದಂತೆ ತಾಲೂಕಿನಲ್ಲಿ ಬಿಸಿಲಿನ ತಾಪದ ಹೆಚ್ಚಳ ಒಂದೆಡೆಯಾದರೆ, ಕೆರೆಕಟ್ಟೆಗಳು ಬತ್ತಿ ಅಂತರ್ಜಲಮಟ್ಟ ಕುಸಿದು ಕೊಳವೆ ಹಾಗೂ ತೆರೆದ ಬಾವಿಗಳ ನೀರು ಪಾತಾಳ ಕಂಡು ಹಲವು ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ.

ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಲವಂತನಕೊಪ್ಪದಲ್ಲಿ ನೀರಿಲ್ಲದೆ ಜನ, ಜಾನವಾರುಗಳು ಪರದಾಡುತ್ತಿದ್ದು ಎರಡು ದಿನಕೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಗ್ರಾಮದಲ್ಲಿ 125 ಮನೆಗಳು ಇದ್ದು 450ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಎರಡು ದಿನಕ್ಕೆ ಒಂದು ಟ್ಯಾಂಕರ್ ನೀರು ನೀಡಿದರೆ ಕುಡಿಯಲೂ ಸಾಕಾಗುತ್ತಿಲ್ಲ. ಇನ್ನು ಬಳಕೆಗೆ ಹಾಗೂ ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಜನ ನಾ ಮುಂದೆ ತಾ ಮುಂದೆ ಎಂಬಂತೆ ಖಾಲಿ ಕೊಡವನ್ನು ಸಾಲಿನಲ್ಲಿ ಇಡುತ್ತಾರೆ. ಆದರೂ ಸಿಗುವುದು 10 ಕೊಡ ನೀರು ಮಾತ್ರ.

ಪ್ರತಿವರ್ಷ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡರೂ ಶಾಶ್ವತ ಪರಿಹಾರ ದೊರಕಿಲ್ಲ. ಊರಿನಲ್ಲಿ ಐದು ಕೊಳವೆಬಾವಿಗಳನ್ನು ಕೊರೆದರೂ ಅವುಗಳು ಬತ್ತಿಹೋಗಿವೆ. ಇದರಿಂದಾಗಿ ಗ್ರಾಮದ ಜನರು ರೋಸಿ ಹೋಗಿದ್ದಾರೆ. ಇದ್ದಕ್ಕೆ ಶಾಶ್ವತ ಪರಿಹಾರ ಸಿಗಬೇಕೆಂದರೆ ನೀರಾವರಿ ಯೋಜನೆ ಆಗಬೇಕು ಎನ್ನುತ್ತಾರೆ ಈ ಭಾಗದ ಜನ. ಬೇಸಿಗೆ ಬಂತು ಎಂದರೆ ಬೆಳೆ ಉಳಿಸಿಕೊಳ್ಳಲು ಹಾಗೂ ಕುಡಿಯುವ ನೀರಿಗಾಗಿ ಪರದಾಟ ತಪ್ಪುತ್ತಿಲ್ಲ ಎಂದು ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿ್ತ್ದಾರೆ.

ಆನವಟ್ಟಿ ಹೋಬಳಿಯ ಯಲವಾಳ, ಬೆಣ್ಣೆಗೇರಿ ಇನ್ನೂ ಹಲವು ಗ್ರಾಮಗಳಲ್ಲಿನ ರೈತರು ತೋಟಗಳನ್ನು ಉಳಸಿಕೊಳ್ಳಲು ಕಚವಿ, ನಿಟ್ಟೂರು ಬಳಿಯಿಂದ ಟ್ಯಾಂಕರ್ ಮೂಲಕ ನೀರು ತಂದು ತೋಟಗಳನ್ನು ಬದುಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಚಂದ್ರಗುತ್ತಿ, ಉಳವಿ, ಜಡೆ. ಕಸಬ ಹೋಬಳಿಯ ಹಲವು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದ ಹಿನ್ನೆಲೆಯಲ್ಲಿ ಕೊಡಕಣಿ, ಹೆಗ್ಗೋಡು, ಕಪ್ಪಗಳಲೆ, ತಳೆಬೈಲು, ಚಂದ್ರಗುತ್ತಿ ಸೇರಿ ಹಲವು ಗ್ರಾಮಗಳಲ್ಲಿ ನಾಲ್ಕೈದು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು ದಿನೇದಿನೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.

ಬೆಲವಂತನಕೊಪ್ಪದಲ್ಲಿ ಪ್ರತಿ ವರ್ಷ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೂ ತಾಲೂಕು ಆಡಳಿತ ಎಚ್ಚೆತ್ತುಕೊಂಡಿಲ್ಲ. ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಬೇಕು. ಒಂದು ವಾರದಿಂದ ಟ್ಯಾಂಕರ್​ನಲ್ಲಿ ನೀರು ಪಡೆಯುತ್ತಿದ್ದೇವೆ. ಅದು ಸಾಕಾಗುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

Leave a Reply

Your email address will not be published. Required fields are marked *