ಬೆರಳಚ್ಚು-ಆಧಾರ್ ಜೋಡಣೆಗೆ ಪರದಾಟ

ರಾಮನಗರ: ಇ-ಕೆವೈಸಿ ತಂತ್ರಾಂಶದ ಮೂಲಕ ಪಡಿತರ ಚೀಟಿದಾರರು ಬೆರಳಚ್ಚು ಮತ್ತು ಆಧಾರ್ ನಂಬರ್ ಜೋಡಣೆ ಮಾಡಿಕೊಳ್ಳಲು ನಗರದ ಮಿನಿ ವಿಧಾನಸೌಧದಲ್ಲಿ ತೆರೆದಿದ್ದ ಕೌಂಟರ್​ಗಳಲ್ಲಿ ನೂಕುನುಗ್ಗಲು ಉಂಟಾಗಿ, ಸಾರ್ವಜನಿಕರು ಪರದಾಡುವಂತಾಗಿದೆ.

ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಕೈ ಬೆರಳಚ್ಚು ನೀಡುವ ಮೂಲಕ (ಇ-ಕೆವೈಸಿ) ಕಡ್ಡಾಯವಾಗಿ ನವೀಕರಣ ಮಾಡಿಸಬೇಕು. ಇಲ್ಲವಾದರೆ ಆಗಸ್ಟ್​ನಿಂದ ಪಡಿತರ ಆಹಾರ ಪದಾರ್ಥಗಳು ರದ್ದಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದರ ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬ ಸದಸ್ಯರು ಜಾತಿ ಮತ್ತು ಅದಾಯದ ಪ್ರಮಾಣ ಪತ್ರದ ನಕಲು ಪ್ರತಿಯನ್ನು ನ್ಯಾಯಬೆಲೆ ಅಂಗಡಿಗೆ ಸಲ್ಲಿಸಬೇಕೆಂದು ತಿಳಿಸಿದೆ. ಆದರೆ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡದ ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯಿಂದ ಜನರು ಪರದಾಡುವಂತಾಗಿದೆ.

ಕಚೇರಿಯಿಂದ ಕಚೇರಿಗೆ ಅಲೆದಾಟ: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರ ಬೆರಳಚ್ಚು ಬಾರದಿದ್ದರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಹೋಗುವಂತೆ ಸೂಚಿಸುತ್ತಾರೆ. ಆಹಾರ ಇಲಾಖೆಗೆ ಹೋದರೆ ಆಧಾರ್ ಕಾರ್ಡ್ ಕೇಂದ್ರಕ್ಕೆ ಹೋಗಿ ಅಲ್ಲಿ ಮತ್ತೊಮ್ಮೆ ಬೆರಳಚ್ಚು ನೀಡಿ ಎನ್ನುತ್ತಾರೆ. ಹೀಗೆ ಕಚೇರಿಯಿಂದ ಕಚೇರಿಗೆ ಅಲೆದಾಡಿಸಲಾಗುತ್ತಿದೆ. ಅದರಲ್ಲೂ ರಾಮನಗರದಲ್ಲಿ ಮಿನಿವಿಧಾನ ಸೌಧ ಸೇರಿ ಮೂರು ಬ್ಯಾಂಕ್​ಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಮಾಡಲಾಗುತ್ತಿದೆ. ಆಧಾರ್​ಗೆ ಮತ್ತೊಮ್ಮೆ ಬೆರಳಚ್ಚು ನೀಡಲು 2 ತಿಂಗಳು ಕಾಯಬೇಕಾಗಿದೆ. ಕೇಂದ್ರಗಳಲ್ಲಿ ಪ್ರತಿನಿತ್ಯ ನೂರಾರು ಜನ ಸರದಿಯಲ್ಲಿ ನಿಂತಿರುತ್ತಾರೆ. ಇಂಥ ಸ್ಥಿತಿಯಲ್ಲಿ ಕೇಂದ್ರದಲ್ಲಿ ಬೆರಳಚ್ಚು ನೀಡಲು ಸಾಧ್ಯವಾಗುತ್ತಿಲ್ಲ ಎಂದು ದೊಡ್ಡಗಂಗವಾಡಿಯ ರಾಜಶೇಖರಯ್ಯ ಬೇಸರಿಸಿದರು.

ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಪಡಿತರ ಚೀಟಿ ನೀಡುತ್ತಿಲ್ಲ. ಅರ್ಜಿ ಸಲ್ಲಿಸಿ ನಾಲ್ಕೈದು ತಿಂಗಳಾದರೂ ಚೀಟಿ ಕೈ ಸೇರಿಲ್ಲ. ಪಡಿತರ ಚೀಟಿಗೆ ಹೆಸರು ಸೇರಿಸಲು ಮತ್ತು ತಿದ್ದುಪಡಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಈ ಅವ್ಯವಸ್ಥೆ ಸರಿಪಡಿಸುವಂತೆ ತಹಸೀಲ್ದಾರ್​ಗೆ ಮನವಿ ಮಾಡಲು ಹೋದರೆ, ಕಚೇರಿ ಬಾಗಿಲು ಹಾಕಿರುತ್ತದೆ. ಆಹಾರ ಇಲಾಖೆ ಅಧಿಕಾರಿಗಳು ಪಡಿತರದಾರರ ಪ್ರಶ್ನೆಗಳಿಗೆ ಉಡಾಫೆ ಉತ್ತರ ನೀಡುತ್ತಾರೆ. ಶಾಸಕರು, ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸಿಕೊಡಬೇಕು ಎಂದು ಹೆಬ್ಬಕೋಡಿಯ ಹನುಮಂತಯ್ಯ, ಶಂಕರ್ ಇತರರು ಒತ್ತಾಯಿಸಿದರು.

ಜುಲೈ ಕೊನೆವರೆಗೆ ಅವಕಾಶ: ಕೆಲವರು ಎರಡೆರಡು ಕಡೆ ಪಡಿತರ ಚೀಟಿ ಹೊಂದಿದ್ದರಿಂದ ಈ ಅಕ್ರಮ ತಡೆಯಲು ಸರ್ಕಾರ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಸದಸ್ಯರ ಬೆರಳಚ್ಚು ಮತ್ತು ಆಧಾರ್ ಸಂಖ್ಯೆ ಜೋಡಣೆ ಮಾಡಲು ಮುಂದಾಗಿದೆ. ಜುಲೈ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ. ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರ ಬೆರಳಚ್ಚು ನೀಡಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.