ಬೆನ್ನುನೋವು ಶಮನಕ್ಕೆ ಭಾರದ್ವಾಜಾಸನ

  •  ನನಗೆ ಕೆಳ ಬೆನ್ನುನೋವು ಕಾಡುತ್ತಿದೆ. ಥೆರಪಿ ತಜ್ಞರೊಬ್ಬರು ಭಾರದ್ವಾಜಾಸನ ಮಾಡಿ ಎಂದರು. ಆದರೆ ನಡು ವಯಸ್ಸಿನಲ್ಲಿ ಇದನ್ನು ಮಾಡುವುದು ಹೇಗೆ? ಏನಾದರೂ ಸರಳೋಪಾಯ ಇದ್ದರೆ ವಿವರಿಸಿ.

                                                                                   | ಸುರೇಶ ಕುಲಕರ್ಣಿ ಮುದ್ದೇಬಿಹಾಳ

ಬಹುತೇಕ ಜನರಿಗೆ ನಡುವಯಸ್ಸಿನಲ್ಲಿ ಭಾರದ್ವಾಜಾಸನ ಮಾಡುವುದು ಸ್ವಲ್ಪ ತ್ರಾಸವೇ. ನಿಮ್ಮ ಅಭಿಮತ ಸತ್ಯ. ಆದರೆ ಚಿಂತೆ ಬೇಡ. ಸಮಸ್ಯೆ ಪರಿಹಾರ ಸುಲಭಸಾಧ್ಯ. ನಿಮ್ಮ ಮನೆಯಲ್ಲೇ ಇರುವ ಕುರ್ಚಿಯ ಸಹಾಯದಿಂದ ಸರಳವಾಗಿ ನೀವು ಭಾರದ್ವಾಜಾಸನ ಮಾಡಿ ಕೆಳ ಬೆನ್ನುನೋವು ಕಳೆದುಕೊಳ್ಳಬಹುದು.

ವಿಧಾನ: ಸ್ಟೀಲ್ ಕುರ್ಚಿಯ ಮೇಲೆ ಬಲಕ್ಕೆ ತಿರುಗಿ ಕುಳಿತುಕೊಳ್ಳಿ. ಚಿತ್ರದಲ್ಲಿರುವಂತೆ ಕುರ್ಚಿಯ ಒರಗುವ (ಹಿಂಭಾಗ) ಭಾಗವನ್ನು ಎರಡೂ ಕೈಗಳಿಂದ ಹಿಡಿದುಕೊಳ್ಳಿ. ಬೆನ್ನು ನೇರವಾಗಿರಲಿ, ಎದೆಯ ಭಾಗ ಎತ್ತಿರಲಿ. ಒಮ್ಮೆ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಉಸಿರು ಬಿಡುತ್ತಾ ಮುಂಡಭಾಗವನ್ನು ಬಲಕ್ಕೆ ತಿರುಗಿಸಬೇಕು. ಉಸಿರಾಟ ಸಹಜವಾಗಿರಲಿ. 1 ನಿಮಿಷ ಈ ಸ್ಥಿತಿಯಲ್ಲಿರಿ. ನಿಧಾನವಾಗಿ ಕ್ರಮಾಂಕ 1ರ ಸ್ಥಿತಿಗೆ ಬನ್ನಿ. ಎಡಪಾರ್ಶ್ವಕ್ಕೂ ಈ ಆಸನವನ್ನು ಪುನರಾವರ್ತಿಸಿ. ಎರಡು ಬಾರಿಯಾದರೂ ಅಭ್ಯಾಸ ಮಾಡಿದರೆ ನೋವು ದೂರಾಗುತ್ತದೆ. ಮಾತ್ರವಲ್ಲ, ಆರ್ಥರೈಟಿಸ್ ಶಮನಕ್ಕೂ ಭಾರದ್ವಾಜಾಸನ ಉತ್ತಮ ವಿಧಾನ. ನೀವು ಕೆಳ ಬೆನ್ನುನೋವು ಎಂದು ಹೇಳಿದ್ದೀರಿ. ಇದಕ್ಕೆ ಯೋಗದಲ್ಲಿ ಇನ್ನೊಂದು ಸರಳ ಉಪಾಯವೂ ಇದೆ. ಅದನ್ನೂ ನೀವು ಮನೆಯಲ್ಲೇ ಬೆಂಚ್ ಸಹಾಯದಿಂದ ಮಾಡಬಹುದು. ಅದೇ ಪಾರ್ಶ್ವ ಪವನಮುಕ್ತಾಸನ.

ವಿಧಾನ: ಒಂದು ಬೆಂಚ್ ಅಥವಾ ದಿವಾನದ ಮೇಲೆ ಕುಳಿತುಕೊಳ್ಳಿ. ಕಾಲುಗಳು ನೆಲದ ಮೇಲಿರಲಿ. ಒಂದೆರಡು ದಿಂಬು, ಜಮಖಾನಗಳನ್ನು ಬಲ ಪಕ್ಕದಲ್ಲಿ ಇರಿಸಿಕೊಳ್ಳಿ. ಚಿತ್ರದಲ್ಲಿರುವಂತೆ ನಿಧಾನವಾಗಿ ಬಲ ಪಕ್ಕಕ್ಕೆ ತಿರುಗಿ. ಎರಡೂ ಕೈಗಳನ್ನು ದಿಂಬುಗಳ ಎರಡೂ ಪಾರ್ಶ್ವದಲ್ಲಿರಿಸಿ. ನಿಧಾನವಾಗಿ ಮುಂಡಭಾಗವನ್ನು ಹಿಗ್ಗಿಸಿ ಬಲಕ್ಕೆ ತಿರುಗಿಸುತ್ತಾ ದಿಂಬುಗಳ ಮೇಲೆ ಎದೆ, ತಲೆಯನ್ನಿರಿಸಿ. ವಿಶ್ರಮಿಸಿ. 2-3 ನಿಮಿಷಗಳ ಕಾಲ ಸ್ಥಿತಿಯಲ್ಲಿರಿ. ನಂತರ 4ನೇ ಸ್ಥಿತಿ, 1ನೇ ಸ್ಥಿತಿಗೆ ಬನ್ನಿ. ಇದೇ ರೀತಿ ಎಡಪಾರ್ಶ್ವದಲ್ಲೂ ಪುನರಾವರ್ತಿಸಿ. 1ನೇ ಸ್ಥಿತಿಗೆ ಬಂದು ವಿರಮಿಸಿ.

  • ನನಗೆ 40 ವರ್ಷ. ಆಗಾಗ್ಗೆ ಕೀಲುಗಳಲ್ಲಿ ನೋವು ಕಾಡುತ್ತದೆ. ಕಾರಣ ಏನು? ಯಾವ ಆಸನ ಮಾಡಿದರೆ ಇದು ಶಮನವಾಗುತ್ತದೆ? 

                                                                                                     | ವೈಷ್ಣವಿ ಶಿವಮೊಗ್ಗ

ಈ ಸಮಸ್ಯೆಗೆ ಯೋಗಪದ್ಧತಿಯಲ್ಲಿ ಹಲವಾರು ಆಸನಗಳಿವೆ. ನಿಂತು ಮಾಡುವ ಎಲ್ಲಾ ಆಸನಗಳು ಮುಖ್ಯ ಕೀಲುಗಳಲ್ಲಿನ ಶೇಖರಣೆಗಳನ್ನು ತೊಲಗಿಸಿ ಕೀಲುಗಳನ್ನು ಹುರಿಗೊಳಿಸುತ್ತದೆ. ಇವುಗಳ ಪೈಕಿ ತಿರುಗುವ ಆಸನ, ಹಿಂದಕ್ಕೆ ಬಾಗುವ ಮತ್ತು ತಲೆ ಕೆಳಗಾಗಿ ಮಾಡುವ ಆಸನಗಳು ಅಂಗಾಂಗ ವೈಫಲ್ಯ ತಡೆಯುತ್ತವೆ. ನಿರಂತರ ಅಭ್ಯಾಸವು ಆಂತರಿಕವಾದ ಹಾಗೂ ಕೀಲುಗಳಲ್ಲಿ ನೆಲೆಯೂರುವ ಕಾಯಿಲೆ ದೂರ ಮಾಡುತ್ತದೆ. ನುರಿತ ಯೋಗ ಶಿಕ್ಷಕರ ಬಳಿ ಆಸನಾಭ್ಯಾಸ ಮಾಡಿ.

Leave a Reply

Your email address will not be published. Required fields are marked *