ಕಲಬುರಗಿ: ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ಸರ್ವೆ ನಂ.91, 94, 95ರಲ್ಲಿ 58 ಎಕರೆ ಜಮೀನು ಹೊಂದಿದ್ದರೂ ದೌರ್ಜನ್ಯ ನಡೆಸಿ ಕಬಳಿಸಿದ್ದರಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವಂತಾಗಿದೆ. ಅವರ ದಬ್ಬಾಳಿಕೆಗೆ ಹೆದರಿ ಊರೇ ಬಿಟ್ಟು ಬೆಳಮಗಿಗೆ ಹೋಗಿ ಕೂಲಿ ಮಾಡಿಕೊಂಡು ಬದುಕುತ್ತಿದ್ದೇವೆ ಎಂದು ರೈತ ಮಲ್ಲಿಕಾರ್ಜುನ ಕಲಶೆಟ್ಟಿ ಹಾಗೂ ಆತನ ತಾಯಿ ಶಿವಕಾಂತಮ್ಮ ನೋವು ತೋಡಿಕೊಂಡಿದ್ದಾರೆ.
ಪ್ರಭಾವಿ ವ್ಯಕ್ತಿಯೊಬ್ಬರು ಆರು ಎಕರೆ ಜಮೀನು ಕಬಳಿಸಿ ಉಳುಮೆ ಮಾಡುತ್ತಿದ್ದಾರೆ. ಕೇಳಿದರೆ ನಮ್ಮ ಮೇಲೆ ಹಲವು ಸಲ ಹಲ್ಲೆ ಮಾಡಿಸಿದ್ದಾರೆ. ಜೈಲಿಗೂ ಹೋಗಿ ಬಂದಿದ್ದೇವೆ. ನ್ಯಾಯಾಲಯ ನಿರಪರಾಧಿಗಳು ಅಂತ ಹೇಳಿದೆ. ಅವರ ಹತ್ತಿರ ಜಮೀನಿನ ಯಾವುದೇ ದಾಖಲೆಗಳಿಲ್ಲ. ನಮ್ಮ ಹೊಲದ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದಾರೆ. ನಮ್ಮ ತಂದೆ ತೀರಿದ ಬಳಿಕ ನಮ್ಮನ್ನು ಆಸ್ತಿಯಿಂದ ವಂಚಿತರನ್ನಾಗಿ ಮಾಡಿದ್ದಾರೆ. ಹಲವು ಸಲ ತಹಸೀಲ್ದಾರ್ ಮತ್ತು ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ತಂದೆ ಗುರುಶಾಂತಪ್ಪ ಮೂಲತಃ ಸಾವಳಗಿಯವರು. ಕೋರಳ್ಳಿಯ ಚನ್ನಪ್ಪ ಮತ್ತು ನಾಗವ್ವ ದಂಪತಿಗೆ ದತ್ತು ಮಗನಾಗಿ ಬಂದರು. ತಂದೆ ಸಹೋದರರಾದ ರಾಣೋಜಿ ಶರಣಪ್ಪ, ಕುಪೇಂದ್ರ ಹಾಗೂ ಅವರ ಮಕ್ಕಳಾದ ಗಂಗಾಧರ, ನಾಗಪ್ಪ, ಮಲ್ಲಪ್ಪ ಇತರರು ಸೇರಿ ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಮಲ್ಲಿಕಾಜರ್ುನ ಆರೋಪಿಸಿದರು.
ದಬ್ಬಾಳಿಕೆ ಹಾಗೂ ಕಾಟ ತಡೆಯಲಾಗದೆ ಕೊರಳ್ಳಿ ಬಿಟ್ಟು ನಾನು ಮತ್ತು ಮಗ ಬೆಳಮಗಿಯಲ್ಲಿ ಕೂಲಿ ಮಾಡಿ ಬದುಕುತ್ತಿದ್ದೇವೆ. ಇನ್ನೊಬ್ಬ ಮಗ ರತನಚಂದ ಮುಂಬಯಿ ಕಡೆ ದುಡಿಯಲು ಹೋಗಿದ್ದಾನೆ. ಎರಡು ಎಕರೆ ಮಾತ್ರ ನಮ್ಮ ಬಳಿ ಇದೆ. ಉಳಿದಿದ್ದೆಲ್ಲ ಅವರೆಲ್ಲರೂ ಸೇರಿ ಕಬ್ಜಾ ಮಾಡಿದ್ದಾರೆ. ಎಸ್ಪಿ, ಡಿಸಿ, ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದೇವೆ. ನ್ಯಾಯ ಸಿಗದಿದ್ದರೆ ಡಿಸಿ ಇಲ್ಲವೇ ಎಸ್ಪಿ ಕಚೇರಿ ಮುಂದೆ ಉಪವಾಸ ಕುಳಿತುಕೊಳ್ಳುತ್ತೇವೆ.
| ಶಿವಕಾಂತಮ್ಮ ಕೊರಳ್ಳಿ