ಬೆಣಚಿಗೆರೆಯಲ್ಲಿ ಹಬ್ಬದ ವಾತಾವರಣ

ಗುಬ್ಬಿ: ನಿಟ್ಟೂರು ಹೋಬಳಿಯ ಬೆಣಚಿಗೆರೆಯಲ್ಲಿ ಜ.14, 15ರಂದು ನಡೆಯಲಿರುವ ಶ್ರೀ ಗುರುಸಿದ್ಧರಾಮ ಶಿವಯೋಗಿಗಳ ಜಯಂತಿಗೆ ಗ್ರಾಮವೇ ಸಜ್ಜಾಗಿದೆ. 2 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ವಾರದಿಂದ ಹಗಲಿರುಳು ಶ್ರಮಿಸುತ್ತಿದ್ದು, ನಾಡಿನೆಲ್ಲೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.

ಅಲ್ಲಮ ಪ್ರಭುದೇವರ ವೇದಿಕೆಯಲ್ಲಿ ಶ್ರೀ ಗುರು ಸಿದ್ಧರಾಮ ಶಿವಯೋಗಿಗಳ ಜಯಂತಿಗೆ 14ರಂದು ಬೆಳಗ್ಗೆ 7ಕ್ಕೆ ಬೆಟ್ಟದಹಳ್ಳಿ ಗವಿಮಠಾಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಷಟ್​ಸ್ಥಲ ಧ್ವಜಾರೋಹಣ ಹಾಗೂ ನೊಳಂಬ ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ.ನಾಗರಾಜು ನಂದಿ ಧಜ್ವಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡುವರು.

8 ದೇವರ ಉತ್ಸವ: ಬೆಳಗ್ಗೆ 8ಕ್ಕೆ ನಿಟ್ಟೂರಿನ ವೀರಭದ್ರಸ್ವಾಮಿ ದೇವಾಲಯದಿಂದ ಅನುಭವ ಮಂಟಪದವರೆಗೆ 8 ದೇವರ ಉತ್ಸವ ನಡೆಯಲಿದೆ. ಇದೇ ವೇಳೆ ಗುಬ್ಬಿ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ 101 ಟ್ರ್ಯಾಕ್ಟರ್​ಗಳಲ್ಲಿ ರೈತ ಮೆರವಣಿಗೆ ಸಾಗಲಿದೆ.

ಉದ್ಘಾಟನೆಗೆ ಮಾಜಿ ಸಿಎಂ ಬಿಎಸ್​ವೈ: ಬೆಳಗ್ಗೆ 10.30ಕ್ಕೆ ಸುತ್ತೂರು ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೆರೆಗೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸಮಾರಂಭ ಉದ್ಘಾಟಿಸುವರು. ಮಾಜಿ ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸುವರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಿದ್ಧರಾಮ ಸಂಪುಟ ಸಂಚಿಕೆ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಜಂಗಮಜ್ಯೋತಿ ಗ್ರಂಥ ಬಿಡುಗಡೆಗೊಳಿಸುವರು.

ಸಿದ್ಧರಾಮ ಸಾಹಿತ್ಯಗೋಷ್ಠಿಗೆ ಡಿಸಿಎಂ: ಮಧ್ಯಾಹ್ನ 2.30ಕ್ಕೆ ಸಿದ್ಧರಾಮ ಸಾಹಿತ್ಯ ಗೋಷ್ಠಿಯನ್ನು ಚಿತ್ರದುರ್ಗ ಡಾ.ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಉದ್ಘಾಟಿಸುವರು. ಮಾಜಿ ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆ ವಹಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ದಾರ್ಶನಿಕರ ಸಾವಿರದ ನುಡಿಗಳು ಗ್ರಂಥವನ್ನು ಹಾಗೂ ಕಾರ್ವಿುಕ ಸಚಿವ ವೆಂಕಟರವಣಪ್ಪ ನೊಳಂಬರ ಶಾಸನಗಳು ಗ್ರಂಥ ಬಿಡುಗಡೆಗೊಳಿಸುವರು. ಅಲ್ಲಮಪ್ರಭುಪೀಠದ ಶ್ರೀ ವಿಜಯಮಹಾಂತ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡುವರು.

ಸಂಜೆ 5ಕ್ಕೆ ಹಳೇಬೀಡು ಪುಷ್ಪಗಿರಿ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಯುವಗೋಷ್ಠಿಯನ್ನು ಬಿಜೆಪಿ ಯುವ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಉದ್ಘಾಟಿಸುವರು. ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು. ಯುವ ಮುಖಂಡ ಡಾ.ಅರುಣ್ ಸೋಮಣ್ಣ, ಕೈಗಾರಿಕೋದ್ಯಮಿ ಜಿ.ಆರ್.ಮಹೇಶ್ ಉಪಸ್ಥಿತರಿರುವರು.

8 ಕಡೆ ಬೃಹತ್ ಎಲ್​ಇಡಿ ಪರದೆಗಳು: 20 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲಮ ಪ್ರಭುದೇವರ ಬೃಹತ್ ವೇದಿಕೆಯಲ್ಲಿ ಉದ್ಘಾಟನೆ, ಸಮಾರೋಪದ ಜತೆಗೆ 4 ಗೋಷ್ಠಿಗಳು ನಡೆಯಲಿವೆ. 8 ಕಡೆ ಬೃಹತ್ ಎಲ್​ಇಡಿ ಪರದೆ ಅಳವಡಿಸಿದ್ದು, ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

300 ಪೊಲೀಸರ ನಿಯೋಜನೆ: 2 ದಿನಗಳ ಸಿದ್ಧರಾಮ ಜಯಂತಿಗೆ ಲಕ್ಷಾಂತರ ಭಕ್ತರು ಹರಿದು ಬರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಸ್ತುವಾರಿಯಲ್ಲಿ 2 ಡಿಎಸ್ಪಿ, 6 ಸಿಪಿಐ, 18 ಪಿಎಸ್ಸೈ ಸೇರಿ 300 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪೆಂಡಾಲ್ ಹೊರಭಾಗದಲ್ಲಿ ಜನಸಂದಣಿ ಇರುವ ಕಡೆ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಇರಲಿದೆ.

ದಾಸೋಹಕ್ಕೆ 40 ಸಿಸಿಟಿವಿ ಕ್ಯಾಮರಾ: 10 ಸಾವಿರ ಮಂದಿ ಒಟ್ಟಿಗೆ ಪ್ರಸಾದ ಸೇವಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ತಯಾರಿಸುವ ಹಾಗೂ 80ಕ್ಕೂ ಹೆಚ್ಚು ಪ್ರಸಾದ ನೀಡುವ ಕೌಂಟರ್ ತೆರೆಯಲಾಗಿದೆ. ಇದರ ನಿಗಾಕ್ಕೆ 40 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. 200ಕ್ಕೂ ಹೆಚ್ಚು ಬಾಣಸಿಗರು 2 ದಿನ ಉಪಹಾರ, ಮಧ್ಯಾಹ್ನ, ರಾತ್ರಿ ಊಟದಲ್ಲಿ ತಯಾರಿ ನಡೆಸಿದ್ದಾರೆ.

ಭಾರಿ ವಾಹನಗಳ ಮಾರ್ಗ ಬದಲಾವಣೆ: ತುಮಕೂರು-ತಿಪಟೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಭಾರಿ ವಾಹನಗಳ ಮಾರ್ಗವನ್ನು ತುಮಕೂರು ಕಡೆಯಿಂದ ಭೀಮಸಂದ್ರ-ಬೆಳ್ಳಾವಿ-ನಿಟ್ಟೂರು ಮಾರ್ಗಕ್ಕೆ ತಿಪಟೂರು ಕಡೆಯಿಂದ ಬರುವ ಲಾರಿ, ಟ್ರಕ್​ಗಳನ್ನು ನಿಟ್ಟೂರು-ಬೆಳ್ಳಾವಿ-ಭೀಮಸಂದ್ರದಿಂದ ತುಮಕೂರು ಕಡೆ ಬದಲಿಸಲಾಗಿದೆ. ಎನ್​ಎಚ್-206ರಲ್ಲಿ ಖಾಸಗಿ ವಾಹನ, ಸಾರಿಗೆ ಬಸ್​ಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ. ಸಿದ್ಧರಾಮ ಜಯಂತಿಗೆ ಖಾಸಗಿ ವಾಹನಗಳಲ್ಲಿ ಬರುವ ಭಕ್ತರಿಗೆ 4 ಕಡೆ ರ್ಪಾಂಗ್ ವ್ಯವಸ್ಥೆ ಮಾಡಲಾಗಿದೆ. ತುಮಕೂರು ಕಡೆಯಿಂದ ಬರುವವರಿಗೆ ಗ್ರೀನ್ ವುಡ್ ಶಾಲೆ ಬಳಿ, ತಿಪಟೂರು ಕಡೆಯಿಂದ ಬರುವರಿಗೆ ಬಾಗೂರು ಗೇಟ್ ಬಳಿಯ ಗದ್ದೆ ಬಯಲಿನಲ್ಲಿ ವಾಹನ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.