Thursday, 13th December 2018  

Vijayavani

Breaking News

ಬೆಟ್ಟದ ಮೇಲೆ ಅಕ್ಷರಗಳ ಮೆರವಣಿಗೆ ಹೊರಟಾಗ….

Wednesday, 20.12.2017, 3:02 AM       No Comments

| ರವೀಂದ್ರ ಎಸ್​. ದೇಶಮುಖ್​

 ಶಿಕ್ಷಣ ರಂಗಕ್ಕೆ ಮೂಲಭೂತ ಸೌಲಭ್ಯಗಳೇ ದಕ್ಕದಿದ್ದಲ್ಲಿ ಭವಿಷ್ಯದ ಪೀಳಿಗೆಯನ್ನು ನಿರ್ವಿುಸುವ ಕನಸು ನನಸಾಗುವುದೆಂತು? ತೀರಾ ದುರ್ಗಮ ಪ್ರದೇಶಗಳಲ್ಲಿ ಇಂದಿಗೂ ಶಾಲೆಗಳ ಸ್ಥಿತಿ ದಯನೀಯವಾಗಿದ್ದು, ಶಿಕ್ಷಕರ ಕೊರತೆಯೂ ಇದೆ. ಆದರೆ, ಇದಕ್ಕೆಲ್ಲ ಪರಿಹಾರವಾಗಿ ಸುಜಾತಾ ಸಾಹು ಕಂಡುಕೊಂಡಿರುವ ದಾರಿ ಆಶಾವಾದ ಹುಟ್ಟಿಸುವಂಥದ್ದು, ಶಿಕ್ಷಣ ರಂಗದ ಸಕಾರಾತ್ಮಕ ಬೆಳವಣಿಗೆಗೆ ಪ್ರೇರಣೆ ಕಲ್ಪಿಸುವಂಥದ್ದು.

ಎಷ್ಟೋ ಸಾರಿ ಭಾರತದ ವೈಶಿಷ್ಟ್ಯಗಳ ಬಗ್ಗೆ ಮಾತಾಡುತ್ತೇವೆ ಒಳ್ಳೆಯದೇ. ಆದರೆ, ಭೌಗೋಳಿಕವಾಗಿ ತುಂಬ ಕ್ಲಿಷ್ಟವಾಗಿರುವಂಥ ಪ್ರದೇಶಗಳಲ್ಲಿ ಜನ ಹೇಗೆ ವಾಸಿಸುತ್ತಿರಬಹುದು? ಅಲ್ಲಿ ಮೂಲಸೌಕರ್ಯಗಳೂ ತಲುಪದಂಥ ಸ್ಥಿತಿಯಲ್ಲಿ ಹೇಗೆ ದಿನದೂಡುತ್ತಿರಬಹುದು… ಒಮ್ಮೆ ಯೋಚಿಸಿ. ಕಾಫಿಪುಡಿ, ಸಾಂಬಾರ್​ಪುಡಿ ಕೊಳ್ಳಲೂ ಸಾವಿರಾರು ಅಡಿ ಕೆಳಗಿಳಿದು ಬರಬೇಕು! ಮಕ್ಕಳು ಶಾಲೆಗೆ ಹೋಗಬೇಕು ಎಂದರೆ ಸೇತುವೆಗಳನ್ನು ದಾಟಬೇಕು, ಕಿಲೋಮೀಟರ್​ಗಟ್ಟಲೆ ನಡೆಯಬೇಕು. ಇಂಥ ಅದೆಷ್ಟೋ ಗ್ರಾಮಗಳು ಬೆಟ್ಟದ ಮಡಿಲಲ್ಲಿ ಸದ್ದುಮಾಡದೆ ಜೀವನ ನಡೆಸುತ್ತಿವೆ. ಆದರೆ, ಇವರಿಗೂ ಇತರರಂತೆ ಕನಸುಗಳು ಉಂಟಲ್ವಾ? ಬೇರೆಲ್ಲ ಬದಿಗಿಡೋಣ, ಎಲ್ಲ ಮಕ್ಕಳಂತೆ ತಾವೂ ಬೂಟು, ಸಮವಸ್ತ್ರ ತೊಟ್ಟು ಠಾಕುಠೀಕಾಗಿ ಶಾಲೆಗೆ ಹೆಜ್ಜೆಹಾಕುತ್ತ, ಅಕ್ಷರಗಳ ಮೆರವಣಿಗೆಯಲ್ಲಿ ಸಂಭ್ರಮಿಸಬೇಕು ಎಂಬ ಸಣ್ಣಕನಸು ಮಕ್ಕಳ ಕಂಗಳಲ್ಲಿ ಕುಣಿಯೋದು ತಪು್ಪ ಅಂತೀರಾ?…

ಈ ಪೀಠಿಕೆ ಹಾಕಲು ಕಾರಣವಿದೆ. ಮಹಿಳೆಯೊಬ್ಬಳು ಬೆಟ್ಟದ ಮೇಲಿನ ನಿಸರ್ಗ ಸೊಬಗನ್ನು ಸವಿಯುತ್ತ ಮತ್ತೆ ಮತ್ತೆ ಬೆಟ್ಟಹತ್ತುವ ಸಂಭ್ರಮದಲ್ಲಿ ತೊಡಗಿಸಿಕೊಂಡಾಗ ಹೋಗಿ ತಲುಪಿದ್ದು ಬರೋಬ್ಬರಿ 17,000 ಅಡಿ ಎತ್ತರಕ್ಕೆ!! ಆ ಎತ್ತರ ನಿಸರ್ಗದ ಸೊಬಗನ್ನು ಮಾತ್ರವಲ್ಲ ಅಲ್ಲಿನ ಜೀವನದ ಕಡುಕಷ್ಟಗಳನ್ನು ತೆರೆದಿಟ್ಟಿತು. ಶಿಕ್ಷಣದ ಯಾವ ಸೌಲಭ್ಯಗಳೂ ಆ ಬೆಟ್ಟ ಪ್ರದೇಶಕ್ಕೆ ಬಾರದ್ದರಿಂದ ಇಲ್ಲೇ ಅಕ್ಷರದ ಬೆಳಕು ಪ್ರಜ್ವಲಿಸುವಂತೆ ಮಾಡಬೇಕು ಎಂದು ಸಂಕಲ್ಪಿಸಿದ ಆ ಸಾಹಸಿ ಮಹಿಳೆ ಸಕಾರಾತ್ಮಕ ಪರಿವರ್ತನೆಯ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ. ಶಿಕ್ಷಣರಂಗ ವಿಸ್ತರಣೆ ಮತ್ತು ಅದರ ಕಾಯಕಲ್ಪ ಹೇಗೆ ನಡೆಯಬೇಕು ಎಂಬುದಕ್ಕೆ ಸಾರ್ಥಕ ಮಾದರಿ ಹಾಕಿಕೊಟ್ಟಿದ್ದಾರೆ.

ಸುಜಾತಾ ಸಾಹು ಆ ಮಹಿಳೆಯ ಹೆಸರು. ಸುಜಾತಾ ತಂದೆ ವಾಯುಸೇನೆಯಲ್ಲಿ ಇದ್ದಿದ್ದರಿಂದ ಅವರಿಗೆ ವರ್ಗವಾದಲ್ಲೆಲ್ಲ ಹೋಗಿ ನೆಲೆಸಬೇಕಾಗುತ್ತಿತ್ತು. ಬಾಲ್ಯದಿಂದಲೂ ನಿಸರ್ಗರಮ್ಯ ತಾಣಗಳಲ್ಲಿ ಸುತ್ತಾಡುವುದು, ಜೀವನವನ್ನು ಸುಂದರವಾಗಿ ಅನುಭವಿಸುವ ಮನೋಭಾವ ಇದ್ದಿದ್ದರಿಂದ ದೇಶದ ಯಾವುದೇ ಭಾಗಕ್ಕೆ ಹೋದರೂ ಬಿಂದಾಸ್ ಆಗಿ ಬದುಕುತ್ತ ಗೆಳತಿಯರ ಪಡೆಯನ್ನೇ ಕಟ್ಟಿಕೊಳ್ಳುತ್ತಿದ್ದರು. ಓದಿನಲ್ಲೂ ಜಾಣೆ. ಕಂಪ್ಯೂಟರ್ ಮತ್ತು ಗಣಿತ ಇಷ್ಟದ ಮತ್ತು ಕುತೂಹಲದ ಸಂಗತಿಗಳಾಗಿದ್ದವು. ಹೀಗಾಗಿ, ಕಂಪ್ಯೂಟರ್ ವಿಜ್ಞಾನದಲ್ಲೇ ಪದವಿ ಶಿಕ್ಷಣ ಪಡೆದ ಸುಜಾತಾಗೆ ಅಮೆರಿಕದ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ 1991ರಲ್ಲಿ ಉದ್ಯೋಗ ಪ್ರಾಪ್ತವಾಯಿತು. 9 ವರ್ಷ ಅಮೆರಿಕದಲ್ಲೇ ಉದ್ಯೋಗ ನಿರ್ವಹಿಸಿದ ಇವರು ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಭಾರತಕ್ಕೆ ಬಂದು ಬಂಧುಬಳಗ-ಸ್ನೇಹಿತರನ್ನೆಲ್ಲ ಭೇಟಿಯಾಗುತ್ತಿದ್ದರು. ಆಗೆಲ್ಲ ‘ಎಲ್ಲ ಬಿಟ್ಟು ಬಂದು ನನ್ನವರ ಮಧ್ಯೆ ಇದ್ದುಬಿಡಲೇ?’ ಎಂದು ಮನಸ್ಸು ಪ್ರಶ್ನಿಸುತ್ತಿತ್ತಾದರೂ ಉದ್ಯೋಗದ ನಿಮಿತ್ತ ಅನಿವಾರ್ಯವಾಗಿ ಮರಳುತ್ತಿದ್ದರು. ದೆಹಲಿ ಮೂಲದ ಸಂದೀಪ್ ಸಾಹು ಅವರೊಡನೆ ಮದುವೆಯಾದ ಮೇಲೆ ‘ನಾನು ನನ್ನ ದೇಶದಲ್ಲೇ ಇದ್ದು ನನ್ನ ಜನರಿಗಾಗಿ ಏನಾದರೂ ಮಾಡಲು ಬಯಸಿದ್ದೇನೆ’ ಎಂದರು. ಗಂಡ ಖುಷಿಯಿಂದ ಒಪ್ಪಿದರು. ಅಮೆರಿಕದಿಂದ ಮರಳಿ ಬಂದವರೇ ಕೆಲವರ್ಷ ವಾಸ್ತವ್ಯ ಹೂಡಿದ್ದು ಮುಂಬೈನಲ್ಲಿ. ಆಗ ಅಲ್ಲಿ ಭೀಕರ ನೆರೆ. ಹಾಗಾಗಿ, ಕೆಲ ಎನ್​ಜಿಒಗಳ ಜತೆಗೂಡಿ ನೆರೆಸಂತ್ರಸ್ತರ ನೆರವಿಗೆ ಧಾವಿಸಿದರು. ಬಳಿಕ ದೆಹಲಿ ವಾಸಸ್ಥಳವಾಯಿತು. ಐಟಿ ರಂಗದಲ್ಲಿ ಕೆಲಸ ನಿರ್ವಹಿಸುವುದಕ್ಕಿಂತ ಸ್ವಂತ ಖುಷಿಗಾಗಿ ಏನಾದರೂ ಮಾಡಬೇಕು ಎಂದುಕೊಂಡು ಗುರುಗ್ರಾಮದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇರಿಕೊಂಡರು. ಆ ಕೆಲಸ ಭಾರಿ ಖುಷಿ ನೀಡಿತು.

ಪತಿ ಸಂದೀಪ್ ಸಾಹಸಿ ಚಾರಣಿಗ. ಆಗಾಗ ದೂರದ ಲಡಾಖ್​ಗೆ ಹೋಗಿ ಚಾರಣ ಮಾಡುತ್ತಿದ್ದರೆ ಸುಜಾತಾ ಕೂಡ ಅವರಿಗೆ ಸಾಥ್ ನೀಡುತ್ತಿದ್ದರು. ಹೀಗೆ ಹಲವು ಬಾರಿ ಲಡಾಖ್ ಪ್ರವಾಸ ಮಾಡಿದ್ದ ಇವರಿಗೆ ಅಲ್ಲಿ ಆವರಿಸಿಕೊಂಡು, ಮುದನೀಡುವ ಹಿಮ, ಆಳೆತ್ತರದ ಬೆಟ್ಟಗಳು ಸಿಕ್ಕಾಪಟ್ಟೆ ಇಷ್ಟವಾಗಿದ್ದವು. ಈ ಪ್ರವಾಸದಲ್ಲಿ ಅಲ್ಲಿನ ಜನಜೀವನ, ಸಂಸ್ಕೃತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು ಈ ದಂಪತಿ.

ಅದು 2010ರ ಹೊತ್ತು. ಈ ಬಾರಿ ಸುಜಾತಾ ಒಬ್ಬರೇ ಲಡಾಖ್​ಗೆ ಹೊರಟು ನಿಂತು, ಅಲ್ಲಿನ ದುರ್ಗಮ ಗ್ರಾಮಗಳ ಕಡೆಗೆ ಪ್ರಯಾಣ ಬೆಳೆಸಿದರು. ಹೀಗೆ ಸಾಗುವಾಗ ಅವರಿಗೆ ಎದುರಾದ ಇಬ್ಬರು ಶಿಕ್ಷಕಿಯರು ಮತ್ತು ಅವರು ಪಡುತ್ತಿದ್ದ ಪಡಿಪಾಟಲು ಕಂಡು ಮರುಗಿದರು. ಶಾಲೆಯೊಂದಕ್ಕೆ ಭೇಟಿ ನೀಡಿದರೆ ಅವರಿಗೆ ಅಚ್ಚರಿ ಕಾದಿತ್ತು. ಅಲ್ಲಿ ವಿದ್ಯುತ್ ಬಿಡಿ, ಕುಳಿತುಕೊಳ್ಳಲು ಬೆಂಚು, ಬರೆಯಲು ನೋಟ್​ಪುಸ್ತಕ ಯಾವುದೂ ಇರಲಿಲ್ಲ. ಮತ್ತೊಂದು ಶಾಲೆಗೆ ಹೋದರೂ ಅದೇ ಅವಸ್ಥೆ, ಅಷ್ಟೇ ಅಲ್ಲ ಅಲ್ಲಿದ್ದುದೇ ಇಬ್ಬರು ಮಕ್ಕಳು ಮತ್ತು ಒಬ್ಬ ಅಧ್ಯಾಪಕ! ಗ್ರಾಮಗಳ ಮಕ್ಕಳನ್ನು ಮಾತನಾಡಿಸಿದಾಗ ಅವರಲ್ಲಿ ವಿದ್ಯಾಭ್ಯಾಸ ಪಡೆಯುವ ಅದಮ್ಯ ಉತ್ಸಾಹವಿತ್ತು. ಈ ಸಂಗತಿಗಳ ಬಗ್ಗೆ ಚಿಂತನೆ ನಡೆಸುತ್ತಲೇ ದೆಹಲಿ ತಲುಪಿ ಪತಿಗೆಲ್ಲ ವೃತ್ತಾಂತ ವಿವರಿಸಿದರು. ‘ಆ ಮಕ್ಕಳಿಗೆ, ಆ ಶಾಲೆಗಳಿಗೆ ಏನಾದರೂ ಮಾಡ್ಬೇಕು. ಅವರೇನು ತಪು್ಪ ಮಾಡಿದ್ದಾರೆ ಅಂತ ಕಲಿಕೆಯಿಂದ ದೂರವುಳಿಯಬೇಕು ಅಥವಾ ಹಿಂದುಳಿಯಬೇಕು?’ ಎಂದು ಪ್ರಶ್ನಿಸಿದರು. ಸುಜಾತಾ ಚಿಂತನೆಗಳಿಗೆ ಬೆಂಬಲ ನೀಡಿದ ಸಂದೀಪ್ ‘ಮತ್ತೊಮ್ಮೆ ಲಡಾಖ್​ಗೆ

ಭೇಟಿನೀಡಿ ಅಲ್ಲೇನು ಮಾಡಬಹುದು ಎಂಬುದರ ಬಗ್ಗೆ ಕಾರ್ಯಯೋಜನೆ ರೂಪಿಸೋಣ’ ಎಂದರು.

ಅಂತೆಯೇ, ಮತ್ತೊಮ್ಮೆ ಅವರ ಸವಾರಿ ಲಡಾಖ್​ನತ್ತ ಹೊರಟಿತ್ತು. ಈ ಬಾರಿ ಖಾಲಿ ಕೈಯಿಂದ ಅಲ್ಲ, 2500 ನೋಟ್​ಪುಸ್ತಕ ಮತ್ತು ಪಠ್ಯಪುಸ್ತಕ ತೆಗೆದುಕೊಂಡು ಹೊರಟಿದ್ದರು. ಲಡಾಖ್​ನ ಲಿಂಗ್​ಶೆಡ್ ಎಂಬ ಗ್ರಾಮ, ಅಲ್ಲಿನ ಶಾಲೆಯನ್ನು ತಲುಪಬೇಕಿತ್ತು. ಆದರೆ ದಾರಿ ದುರ್ಗಮವಾಗಿತ್ತು. ಮೂರು ಬೆಟ್ಟಗಳು, -20 ಡಿಗ್ರಿ ತಾಪಮಾನ, ಕೊರೆಯುವ ಕ್ರೂರಚಳಿ ಇವರ ಸಂಕಲ್ಪವನ್ನು ಅಣಕಿಸುತ್ತಿದ್ದವು. ಕಡೆಗೂ, ಮೂರು ದಿನಗಳ ಪ್ರಯಾಣದ ನಂತರ ಮೂರೂ ಬೆಟ್ಟ ಹತ್ತಿ ಗ್ರಾಮವನ್ನು ತಲುಪಿದಾಗ ಅಲ್ಲಿನ ಮಕ್ಕಳು ಪುಸ್ತಕಗಳಿಗಾಗಿ ಕಾಯುತ್ತಿದ್ದರು! ಇವರನ್ನು ನೋಡಿದೊಡನೆಯೇ ಖುಷಿಯಿಂದ ಕೇಕೆಹಾಕಿದರು! 20 ಕುದುರೆಗಳು ಆ ಸಾಮಾನುಗಳನ್ನೆಲ್ಲ ಹೊತ್ತುತಂದಿದ್ದವು. ಮಕ್ಕಳ ಮುಖದಲ್ಲಿ ಅರಳಿದ ನಗೆ ಕಂಡು ಸುಜಾತಾ ಮೊದಲ ಬಾರಿ ಖುಷಿಯಿಂದ ಕಣ್ಣೀರಿಟ್ಟರಂತೆ!! ಅವರು ತಲುಪಿದ ಎತ್ತರ 17 ಸಾವಿರ ಅಡಿಗಳಾಗಿತ್ತು. ಆಗಲೇ ಮಿಂಚಂತೆ ಹೊಸಚಿಂತನೆ ಹೊಳೆಯಿತು. ಪ್ರಾಥಮಿಕ ಶಿಕ್ಷಣಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮತ್ತು ಕಲಿಕೆಯ ಗುಣಮಟ್ಟ ಹೆಚ್ಚಿಸಲು ನಿರಂತರವಾಗಿ ಶ್ರಮಿಸಬೇಕು, ಅದಕ್ಕಾಗಿ ಸಂಸ್ಥೆಯೊಂದನ್ನು ಹುಟ್ಟುಹಾಕಬೇಕು ಎಂದು. ಅದಕ್ಕೇನು ಹೆಸರಿಡುವುದು ಅಂತ ಯೋಚಿಸುತ್ತಿರುವಾಗಲೇ ಹೊಳೆದದ್ದು 17000 ಫೀಟ್ ಫೌಂಡೇಷನ್ ಅಂತ (ಜಠಿಠಿಟಠ://17000ಠಿ.ಟ್ಟಜ)!

2012ರಲ್ಲಿ ಹುಟ್ಟಿಕೊಂಡ ಈ ಫೌಂಡೇಷನ್ ಲಡಾಖ್​ನ 300 ಶಾಲೆಗಳನ್ನು ದತ್ತು ತೆಗೆದುಕೊಂಡು, ಅವುಗಳ ಸಮಗ್ರ ವಿಕಾಸಕ್ಕೆ ಶ್ರಮಿಸುತ್ತಿದೆ. ಪ್ರತಿ ಶಾಲೆಗೂ ಗ್ರಂಥಾಲಯ, ಪೀಠೋಪಕರಣ, ಕಲಿಕಾ ಸಾಮಗ್ರಿ, ಕ್ರೀಡಾ ಪರಿಕರ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಭರದಿಂದ ಸಾಗಿದ್ದು, ಈಗಾಗಲೇ ನೂರಾರು ಶಾಲೆಗಳಿಗೆ ಈ ಸೌಲಭ್ಯ ಪ್ರಾಪ್ತಿಯಾಗಿದೆ. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಕುಗ್ರಾಮಗಳನ್ನು, ಅಲ್ಲಿನ ಶಾಲೆಗಳನ್ನು ಜೋಡಿಸಲಾಗಿದೆ. ಈ ಹಿನ್ನೆಲೆಯಲ್ಲಿ MಚಟMಢಖ್ಚಜಟಟ್ಝಃ17000ಠಿ ಎಂಬ ಟೆಕ್ ಕಾರ್ಯಕ್ರಮದ ಮೂಲಕ ಲಡಾಖ್​ನ ಎಲ್ಲ 900 ಶಾಲೆಗಳ ಮಾಹಿತಿ ಕ್ರೋಡೀಕರಿಸಲಾಗಿದೆ. ಈ ಮೂಲಕ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವ ಪಡೆದುಕೊಳ್ಳಲಾಗುತ್ತಿದೆ. ಗ್ರಾಮ ಮತ್ತು ಶಾಲೆಗಳನ್ನೇ ಪ್ರವಾಸೋದ್ಯಮದ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲಾಗಿದ್ದು, ಈ ಪ್ರದೇಶಕ್ಕೆ ಬರುವ ಚಾರಣಿಗರು ಮತ್ತು ಪ್ರವಾಸಿಗರು ಭೇಟಿ ನೀಡುವಂತೆ ಯೋಜನೆ ರೂಪಿಸಲಾಗಿದೆ.

ಮೂಲಸೌಕರ್ಯಗಳ ಅಭಿವೃದ್ಧಿಗೆ ಹಲವು ಕಾಪೋರೇಟ್ ಕಂಪನಿಗಳು ಕೈಜೋಡಿಸಿವೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅಧ್ಯಾಪಕರಿಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಫೌಂಡೇಷನ್ ವತಿಯಿಂದ ನಡೆಸಲಾಗುತ್ತಿದ್ದು, ಇದರ ಪರಿಣಾಮ ಬೋಧನೆ ಮತ್ತು ಕಲಿಕೆಯ ವಿಧಗಳು, ತಂತ್ರಜ್ಞಾನ ಅಭಿವೃದ್ಧಿಗೊಂಡಿವೆ. ಕುಗ್ರಾಮಗಳಲ್ಲಿ ಶಿಕ್ಷಕರು ದೊರೆಯುವುದಿಲ್ಲ. ಆ ಕಾರಣಕ್ಕಾಗಿ ಫೌಂಡೇಷನ್ ಸ್ವಯಂಸೇವಕರನ್ನೂ ತಯಾರುಮಾಡುತ್ತಿದೆ. ಉನ್ನತ ಶಿಕ್ಷಣ ಪಡೆದ ಹಲವು ಯುವಕ-ಯುವತಿಯರು ಸುಜಾತಾ ಕನಸುಗಳಿಗೆ ರೆಕ್ಕೆ ಹಚ್ಚುತ್ತಿದ್ದಾರೆ. 200 ಗ್ರಾಮಗಳಲ್ಲಿ 250ಕ್ಕೂ ಹೆಚ್ಚು ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪ್ರಯತ್ನಗಳಿಂದ ಮಕ್ಕಳ ಪಾಲಕರು ಖುಷಿಯಾಗಿದ್ದು, ಶೈಕ್ಷಣಿಕ ಪ್ರಗತಿ ಕಂಡು ಮೂಕವಿಸ್ಮಿತರಾಗಿದ್ದಾರೆ. ಎಲ್ಲ 900 ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಸುಜಾತಾ ಈಗ ಕಾರ್ಗಿಲ್​ನತ್ತ ಮುಖಮಾಡಿದ್ದು, ಅಲ್ಲಿನ ಹಿಮಾವೃತ ಪ್ರದೇಶಗಳಲ್ಲೂ ಶಿಕ್ಷಣದ ಜ್ಯೋತಿ ಬೆಳಗಲು ಸನ್ನದ್ಧರಾಗಿದ್ದಾರೆ. ಬದಲಾವಣೆ ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತರೆ ಏನೂ ಮಾಡಲಾಗದು. ಅದೇ ಸಮುದಾಯಕ್ಕಾಗಿ ಒಳಿತನ್ನು ಮಾಡುವ ಇಚ್ಛಾಶಕ್ತಿ ಇದ್ದಲ್ಲಿ 17000 ಅಡಿ ಎತ್ತರದಲ್ಲೂ ಸಾಧನೆಯ ವಿಜಯ ಪತಾಕೆ ಹಾರಿಸಬಹುದು. ಜೀವನದಲ್ಲಿ ಎಲ್ಲಕ್ಕಿಂತ ಅಮೂಲ್ಯ ಅಕ್ಷರದ ಹಸಿವು. ಈ ಹಸಿವಿಗೆ ಆಹಾರ ನೀಡಿದರೆ ವ್ಯಷ್ಟಿ, ಸಮಷ್ಟಿ ಎರಡೂ ಸಮೃದ್ಧವಾಗುತ್ತವೆ.

ನಮ್ಮಿಂದ ದೊಡ್ಡ ಮಟ್ಟದ ಬದಲಾವಣೆ ತರಲು ಸಾಧ್ಯವಾಗದಿದ್ದರೂ ಅಕ್ಷರಕಲಿಕೆಯ ಹಂಬಲದಲ್ಲಿರುವ ಒಂದಿಷ್ಟು ಮಕ್ಕಳಿಗೆ ನೆರವಾಗಬಹುದಲ್ಲವೇ? ಲಡಾಖ್​ನಂಥ ದುರ್ಗಮ ಪ್ರದೇಶದಲ್ಲಿ ಬದಲಾವಣೆ ಸಾಕಾರಗೊಳಿಸಬಹುದಾದರೆ ನಮ್ಮ-ನಿಮ್ಮ ಓಣಿ, ಊರುಗಳಲ್ಲೂ ಸಾಧ್ಯವಾಗಿಸಬಹುದಲ್ಲವೇ? ಏನಂತೀರಿ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top