ವಿರಾಜಪೇಟೆ: ಸಮೀಪದ ಬೆಟೋಳಿ ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಬುಧವಾರ ಸನ್ಮಾನಿಸಲಾಯಿತು.
ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಬೆಟೋಳಿ ಗ್ರಾಮ ಪಂಚಾಯಿತಿ ಸದಸ್ಯ ರಜಾಕ್, ಸಮಾಜದಲ್ಲಿ ಗುರುತಿಸಲ್ಪಟ್ಟವರಿಗೆ ಸನ್ಮಾನ ಹಾಗೂ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಈ ಸಮಾರಂಭವನ್ನು ಹಮ್ಮಿಕೊಂಡಿದ್ದು, ಸನ್ಮಾನಿತರು ನಮ್ಮ ಬೆಟೋಳಿ ಪಂಚಾಯಿತಿಗೆ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯೆ ಯಶೋದಾ ಮಾತನಾಡಿ, ಸಾಧಕರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸುತ್ತಿರುವುದು ಸಂತಸದ ವಿಚಾರವಾಗಿದೆ. ಸಾಧಕರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಸಮಾರಂಭದಲ್ಲಿ ಹೆಗ್ಗಳ ಗ್ರಾಮದಲ್ಲಿ ಆರೋಗ್ಯ ಇಲಾಖಾ ಶುಶ್ರೂಷಕಿಯಾಗಿ 37 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ರಮಿತಾ, ಬೆಟೋಳಿ ಗುಂಡಿಕೆರೆ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಶ್ರೀಕೃಷ್ಣ ಒಡೆಯರ್ ಸದ್ಭಾವನಾ ಪ್ರಶಸ್ತಿ ವಿಜೇತರಾದ ಎಂ.ಎಂ.ಇಸ್ಮಾಯಿಲ್, ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ ವಿಜೇತೆ ಬೆಟೋಳಿ ಗುಂಡಿಕೆರೆ ಶಾಲೆಯ ಮುಖ್ಯಶಿಕ್ಷಕಿ ಸೀತಾ, ಬೆಟೋಳಿ ಪಂಚಾಯಿತಿಯಲ್ಲಿ ಶೇಕಡ ನೂರರಷ್ಟು ಕರ ಸಂಗ್ರಹಣೆ ಮಾಡಿದ ಪಂಚಾಯಿತಿ ಕರ ಸಂಗ್ರಹಕಾರ ಬಿ.ಎಸ್.ದಿನೇಶ್, ಕರ ಸಂಗ್ರಹಣೆ ಹಾಗೂ ಪಂಚಾಯಿತಿಯಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಹಾಗೂ ಕ್ಲರ್ಕ್ ಕೆ.ಬಿ.ರಮಾ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬೆಟೋಳಿ ಗ್ರಾಪಂ ಅಧ್ಯಕ್ಷ ಅಚ್ಚಪಂಡ ಎಂ.ಬೋಪಣ್ಣ ಮಾತನಾಡಿ, ಸನ್ಮಾನಿತರು ತನ್ನದೇಯಾದ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದು ಗ್ರಾಮದ ಹೆಮ್ಮೆಯಾಗಿದೆ. ಸನ್ಮಾನಿತರಿಂದ ಮತ್ತಷ್ಟು ಸೇವೆ ಗ್ರಾಮಕ್ಕೆ ಹಾಗೂ ಸಮಾಜಕ್ಕೆ ಲಭಿಸುವಂತಾಗಲಿ ಎಂದರು.
ಬೆಟೋಳಿ ಗ್ರಾಪಂ ಉಪಾಧ್ಯಕ್ಷೆ ಅಲೀಮಾ, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಬೆಟೋಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಣಿ, ಸದಸ್ಯರಾದ ಅಮ್ಮಣಕುಟ್ಟಂಡ ವಸಂತ ಕಟ್ಟಿ, ಪಂಚಾಯತ್ ಸಿಬ್ಬಂದಿ ಆಯೇಷಾ, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.
