ಬೆಂಬಿಡದ ಪಿಶಾಚಿ ತಾವರೆ

ಬಸವರಾಜ ಇದ್ಲಿ ಹುಬ್ಬಳ್ಳಿ :ಇನ್ನೇನು ಕೊಳಚೆ ನೀರು ಕೆರೆ ಸೇರುವುದಿಲ್ಲ, ಏನಿದ್ದರೂ ಮಳೆ ನೀರು ಮಾತ್ರ ತುಂಬಿಕೊಳ್ಳಲಿದೆ. ಹಾಗಾಗಿ ಕೆಲ ದಿನಗಳಲ್ಲೇ ಜಲಕಳೆ ನಿಮೂಲನೆಯಾಗಲಿದೆ… ಎಂದೆಲ್ಲ ಪುಂಖಾನುಪುಂಖ ಭರವಸೆಗಳನ್ನು ನಮ್ಮ ಆಡಳಿತ ವ್ಯವಸ್ಥೆ ನೀಡುತ್ತಲೇ ಬಂದಿದೆ.

ಇಂಥ ಆಶ್ವಾಸನೆ ಕೊಟ್ಟು ವರ್ಷಗಳೇ ಕಳೆಯುತ್ತ ಬಂದರೂ ಈಗಲೂ ನಗರದ ಉಣಕಲ್ಲ ಕೆರೆಗೆ ಒಳಚರಂಡಿಯ ಕೊಳಕು ಹರಿಯುತ್ತಲೇ ಇದೆ. ಇದೇ ಕಾರಣಕ್ಕೆ ಅಂತರಗಂಗೆ ಎಂಬ ಜಲಕಳೆ ಮತ್ತೆ ಮತ್ತೆ ಹುಟ್ಟಿ ಬಂದು ಪಿಶಾಚಿ ನಗು ಪ್ರದರ್ಶಿಸುತ್ತಲೇ ಇದೆ!

ವರ್ಷದ ಹಿಂದೆ ಕೆರೆ ಪೂರ್ತಿ ಸ್ವಚ್ಛಗೊಳಿಸಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀಡಲಾಗಿತ್ತು. ನಿರ್ವಹಣೆ ನಿರ್ಲಕ್ಷ್ಯವೋ ಏನೋ ಈಗ ಮತ್ತೆ ಅರ್ಧ ಕೆರೆಯಲ್ಲಿ ಜಲಕಳೆ ತುಂಬಿಕೊಂಡಿದೆ. ಇದೆಲ್ಲವನ್ನು ನೋಡಿದರೆ ಉಣಕಲ್ಲ ಕೆರೆ ಭವಿಷ್ಯದಲ್ಲಿ ಉಳಿಯುವುದೇ? ಎಂಬ ಆತಂಕ ಮೂಡುತ್ತಿದೆ.

ಒಳಚರಂಡಿ ನೀರು ಕೆರೆ ಸೇರುವುದನ್ನು ಬಂದ್ ಮಾಡದ ಹೊರತು ಕೆರೆ ಸಂರಕ್ಷಣೆ ಅಸಾಧ್ಯ ಎಂದು ಹೇಳುತ್ತಲೇ ಬರಲಾಗುತ್ತಿದೆ. ಆದರೆ, ಅದನ್ನು ವ್ಯವಸ್ಥಿತವಾಗಿ ತಡೆಯುವ ಗಂಭೀರ ಪ್ರಯತ್ನಗಳು ಮಾತ್ರ ನಡೆಯುತ್ತಲೇ ಇಲ್ಲ.

ಪಾಲಿಕೆ ಅಧಿಕಾರಿಗಳ ಪ್ರಕಾರ ಸದ್ಯ ಶೇ. 60ರಷ್ಟು ಕೊಳಚೆಯನ್ನು ಪರ್ಯಾಯ ಮಾರ್ಗದ ಮೂಲಕ ಗಬ್ಬೂರ ಎಸ್​ಟಿಪಿಗೆ ಕಳುಹಿಸಲಾಗುತ್ತಿದೆ. ಆದರೆ, ಉಳಿದ ಶೇ. 40ರ ಬಗ್ಗೆ ಯಾವೊಬ್ಬ ಅಧಿಕಾರಿಯೂ ನಿಖರವಾಗಿ ಮಾತನಾಡುತ್ತಿಲ್ಲ.

ಈಗಲೂ ಉಣಕಲ್ಲ ಕೆರೆಯಿಂದ ಹೊರಡುವ ನಾಲಾದಲ್ಲಿ ಒಳಚರಂಡಿ ಕೊಳಕು ಹರಿಯುತ್ತದೆ. ಕೋಟ್ಯಂತರ ರೂ. ಖರ್ಚು ಮಾಡಿ, ಯೋಜನೆ ಮೇಲೆ ಯೋಜನೆ ತಂದರೂ ಕೆರೆ ಕೊಳಚೆಮುಕ್ತ ಆಗುತ್ತಿಲ್ಲ.

ಲಕ್ಷಾಂತರ ಖರ್ಚು: ಹಿಂದೊಮ್ಮೆ ಹೈದ್ರಾಬಾದ್ ಮೂಲದ ಕಂಪನಿ ಕಳೆ ಕೀಳುವ ಯಂತ್ರ ತಂದು ತಿಂಗಳುಗಟ್ಟಲೇ ಗುದ್ದಾಡಿ, ತನ್ನಿಂದಾಗದು ಎಂದು ವಾಪಸ್ ಹೋಗಿದೆ. ಆದರೆ, ಲಕ್ಷಾಂತರ ರೂ.ಗಳ ಖರ್ಚು ಮಾತ್ರ ಆಗಿದೆ.

ಆ ನಂತರ ಮಾನವ ಶ್ರಮದಿಂದಲೇ ಸ್ವಚ್ಛತೆ ಕೈಗೊಳ್ಳಲಾಯಿತು. ಅದು ಸಾಧ್ಯವಾಗದಿದ್ದಾಗ ದೇಶಪಾಂಡೆ ಫೌಂಡೇಶನ್​ನವರು ಜೆಸಿಬಿ ಮೂಲಕ ಸಂಪೂರ್ಣ ಕೆರೆಯಲ್ಲಿನ ಜಲಕಳೆ ಕಿತ್ತು ಕೊಟ್ಟಿದ್ದರು. ಆದರೆ, ನಂತರದಲ್ಲಿ ಮಹಾನಗರ ಪಾಲಿಕೆ ಸರಿಯಾಗಿ ನಿರ್ವಹಣೆ ಮಾಡದಿರುವುದು ಈಗಿನ ಸ್ಥಿತಿಗೆ ಕಾರಣ. ಒಟ್ಟಾರೆ ಕೆರೆ ಹೆಸರಲ್ಲಿ ಹಣ ನೀರಿನಂತೆ ಪೋಲಾಗುತ್ತಲೇ ಇದೆ. ಆದರೆ, ಕೆರೆ ಮಾತ್ರ ಸುಂದರಗೊಳ್ಳುವ ಲಕ್ಷಣ ಕಾಣುತ್ತಿಲ್ಲ.

ಏನ್ ಕೇಳಿದರೂ ಸ್ಮಾರ್ಟ್ ಸಿಟಿ:ಹುಬ್ಬಳ್ಳಿ- ಧಾರವಾಡದಲ್ಲಿ ಈಗ ಏನ್ ಕೇಳಿದರೂ ಸ್ಮಾರ್ಟ್ ಸಿಟಿ ಎನ್ನುತ್ತಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಕೆರೆ ಸೌಂದಯೀಕರಣಕ್ಕೆ ಯೋಜನೆ ರೂಪಿಸಲಾಗುತ್ತಿದೆಯಂತೆ.

ಆದರೆ, ಕೆರೆ ಸೇರುವ ಕೊಳಚೆಗೆ ಪರ್ಯಾಯ ಮಾರ್ಗ ತೋರಿಸಬೇಕೋ ಅಥವಾ ಕೊಳಚೆ ನೀರು ಸಂಸ್ಕರಿಸಿ ಕೆರೆಗೆ ಬಿಡಬೇಕೋ ಎಂಬ ಬಗ್ಗೆ ಇನ್ನೂ ತೀರ್ವನವಾಗಿಲ್ಲ. ತಜ್ಞರೊಂದಿಗೆ ಕೂಡಿ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇದೆಲ್ಲ ಆಗುವ ಹೊತ್ತಿಗೆ ಕೆರೆ ಅಸ್ತಿತ್ವ ಉಳಿದಿದೆ ಎಂಬ ಪ್ರಶ್ನೆ ಮೂಡುತ್ತಿದೆ.

ಪ್ರಾಧಿಕಾರದ ಕೊಡುಗೆ:ಅವಳಿ ನಗರದ ಬಹುತೇಕ ಕೆರೆಗಳು ಈಗ ಮಲಿನಗೊಂಡಿವೆ. ಇನ್ನೂ ಕೆಲವು ಮಲಿನವಾಗುತ್ತಿವೆ. ಇದಕ್ಕೆಲ್ಲ ಕಾರಣ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಎಂದು ಕೆಲ ತಜ್ಞರು ದೂರುತ್ತಾರೆ. ಹುಡಾದ ಸಡಿಲ ನಿಯಮಾವಳಿಗಳು, ಅಕ್ರಮ ಲೇಔಟ್​ಗಳಿಂದಾಗಿ ಇಂದು ಒಳಚರಂಡಿ ಕೊಳಚೆ ಎಲ್ಲೆಂದರಲ್ಲಿ ಹರಿಯುತ್ತಿದೆ.

ನಗರಗಳಿಗೆ ಒಂದು ಸರಿಯಾದ ವ್ಯವಸ್ಥೆ ಎಂಬುದಿಲ್ಲ. ಏಕಾಏಕಿ ಉದ್ಭವಿಸುವ ಲೇಔಟ್​ಗಳು ಒಳಚರಂಡಿ ವ್ಯವಸ್ಥೆ ಮಾಡುವುದಿಲ್ಲ. ಇದರಿಂದ ನಗರ ಬೆಳವಣಿಗೆ ಅವ್ಯವಸ್ಥಿತವಾಗಿ ನಡೆದಿದೆ.

ಉಣಕಲ್ಲ ಕೆರೆ ದಶಕಗಳಿಂದ ಒಳಚರಂಡಿ ನೀರಿನಿಂದ ತುಂಬಿ ತುಳುಕುತ್ತಿದ್ದರೂ ಆಡಳಿತ ವ್ಯವಸ್ಥೆ ಏನೂ ಮಾಡದಂತಾಗಿವೆ. ಮೊದಲೆಲ್ಲ ಕುಡಿಯಲು ಬಳಸುತ್ತಿದ್ದ ಉಣಕಲ್ಲ ಕೆರೆ ನೀರು ಈಗ ಮೂಸಲೂ ಬಾರದಂತಾಗಿವೆ.

ನಾಲಾಗುಂಟ ಅವ್ಯವಸ್ಥೆ :ಉಣಕಲ್ಲನಿಂದ ಗಬ್ಬೂರ ವರೆಗೆ ಹರಿಯುವ ನಾಲಾಗುಂಟವೂ ಕಳೆ ಅಲ್ಲಲ್ಲಿ ಬೆಳೆದು ನಿಂತಿದೆ. ಕೊಳಚೆ ಸಂಗ್ರಹಗೊಂಡು ನಾಲಾ ಅಕ್ಕಪಕ್ಕ ಸೊಳ್ಳೆಗಳ ಸಾಮ್ರಾಜ್ಯ ನಿರ್ವಣವಾಗಿದೆ. ಅಸಹನೀಯ ವಾತಾವರಣ ಸೃಷ್ಟಿಯಾಗಿದೆ. ನಾಲಾ ದಂಡೆಯ ನಿವಾಸಿಗಳು ರೋಗಭೀತಿ ಎದುರಿಸುತ್ತಿದ್ದಾರೆ.