More

  ಬೆಂಬಲ ಬೆಲೆಯಿಂದ ಯಾರಿಗೆ ಲಾಭ?

  ಹುಬ್ಬಳ್ಳಿ: ಮುಂಗಾರು ಹಂಗಾಮು ಮುಗಿದು ಬಹುತೇಕ ಬೆಳೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ ನಂತರ ರಾಜ್ಯ ಸರ್ಕಾರ ರೈತರ ಬಗ್ಗೆ ಕಾಳಜಿ ತೋರುತ್ತಿದೆ. ಈಗ ಬೆಂಬಲ ಬೆಲೆ ಘೋಷಣೆ ಮಾಡಿ ಮೂಗಿಗೆ ತುಪ್ಪ ಸವರಿದೆ.

  ಮುಂಗಾರು ಹಂಗಾಮಿನ ಶೇಂಗಾ ಉತ್ಪನ್ನ ಎಪಿಎಂಸಿಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಿದೆ. ಈಗ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್​ಗೆ 5090 ರೂ.ನಂತೆ ಖರೀದಿಸಲು ಮುಂದಾಗಿದೆ.

  ಶೇಂಗಾ ಉತ್ಪನ್ನ ಶೇ. 80ರಷ್ಟು ಈಗಾಗಲೇ ಮಾರಾಟವಾಗಿದ್ದು, ವ್ಯಾಪಾರಸ್ಥರ ಬಳಿ ಹೋಗಿ ಕುಳಿತಿದೆ. ಈಗ ರಾಜ್ಯ ಸರ್ಕಾರ ಶೇಂಗಾ ಯಾರಿಂದ ಖರೀದಿ ಮಾಡುತ್ತದೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸಾಲದ್ದಕ್ಕೆ, ಪ್ರೋತ್ಸಾಹ ಧನ ಕೂಡ ನೀಡಲು ಹೊರಟಿದೆ. ಈ ಪ್ರೋತ್ಸಾಹ ಹೆಚ್ಚಿನ ರೈತರಿಗೆ ಸಿಗುವುದಿಲ್ಲ. ಬಹುತೇಕ ಬೆಳೆಗಳ ಕಥೆ ಇದೇ ಆಗಿದೆ.

  ಈಗ ಹಿಂಗಾರು ಬೆಳೆಗಳು ರೈತರ ಕೈಸೇರುತ್ತಿವೆ. ಕಡಲೆ, ಗೋಧಿ, ಜೋಳ, ಸೂರ್ಯಕಾಂತಿ, ಗೋವಿನ ಜೋಳ, ಕುಸುಬಿ ಮುಂತಾದ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಬೇಕು. ಅದಕ್ಕಾಗಿ ಖರೀದಿ ಕೇಂದ್ರ ಶೀಘ್ರ ಆರಂಭಿಸಬೇಕು. ಅದನ್ನು ಬಿಟ್ಟು ರೈತರ ಬಳಿ ಬೆಳೆ ಇಲ್ಲದ ಸಂದರ್ಭದಲ್ಲಿ ಅವುಗಳಿಗೆ ಬೆಂಬಲ ಬೆಲೆ ಕೊಡಲು ಹೊರಟರೆ ಹೇಗೆ? ಎಂದು ರೈತರು ಆಕ್ರೋಶಗೊಂಡಿದ್ದಾರೆ.

  ಕೃಷಿ ಸಚಿವ ಲಕ್ಷ್ಮಣ ಸವದಿ ಅವರು ಭತ್ತ, ತೊಗರಿ, ಬಿಳಿಜೋಳ, ಮಾಲ್ದಂಡೆ ಜೋಳ, ಶೇಂಗಾ, ರಾಗಿಗೆ ಬೆಂಬಲ ಬೆಲೆ ಹಾಗೂ ಪ್ರೋತ್ಸಾಹ ಧನ ಘೋಷಣೆ ಮಾಡಿದ್ದಾರೆ. ಆದರೆ, ಈ ಕೂಡಲೆ ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಪ್ರೋತ್ಸಾಹಿಸಬೇಕು ಎಂಬುದು ಕೃಷಿಕರ ಒತ್ತಾಸೆ.

  ಕಡಲೆ ಬೆಲೆ ಕುಸಿತ: ವಿಪರ್ಯಾಸವೆಂದರೆ ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಕಡಲೆ ಮಾರುಕಟ್ಟೆಗೆ ಬರುತ್ತಿದ್ದಂತೆ ಬೆಲೆ ಬಿದ್ದು ಹೋಗಿದೆ. ಇದು ದುರುದ್ದೇಶಪೂರಿತ ಎಂದೂ ಹೇಳಲಾಗುತ್ತಿದೆ. ಸದ್ಯ ಪ್ರತಿ ಕ್ವಿಂಟಾಲ್​ಗೆ 3 ಸಾವಿರ ರೂ. ಆಸುಪಾಸಿನಲ್ಲಿದೆ.

  ಧಾರವಾಡ ಜಿಲ್ಲೆಯಲ್ಲಿ ಕಡಲೆಕಾಳು 92 ಸಾವಿರ ಹೆಕ್ಟೇರ್ ಬಿತ್ತನೆಯಾಗಿದ್ದು, ಸುಮಾರು 6.28 ಲಕ್ಷ ಕ್ವಿಂಟಾಲ್ ಬೆಳೆ ನಿರೀಕ್ಷಿಸಲಾಗಿದೆ. ಜೋಳ 46 ಸಾವಿರ ಹೆಕ್ಟೇರ್ ಬಿತ್ತನೆಯಾಗಿದ್ದು, ಸುಮಾರು 4 ಲಕ್ಷ ಕ್ವಿಂಟಾಲ್ ನಿರೀಕ್ಷಿಸಲಾಗಿದೆ. ಇದೀಗ ಬೆಳೆ ರೈತರ ಕೈ ಸೇರಲಾರಂಭಿಸಿದ್ದು, ಮಾರುಕಟ್ಟೆಯಲ್ಲಿ ಬೆಲೆ ಮಾತ್ರ ಇಳಿಮುಖವಾಗಿದೆ.

  ಕೇಂದ್ರ ಸರ್ಕಾರ ಕಡಲೆಗೆ 4620 ರೂ., ಜೋಳಕ್ಕೆ 3570 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಇದರ ಜೊತೆ ರಾಜ್ಯ ಸರ್ಕಾರ ಇನ್ನಷ್ಟು ಪ್ರೋತ್ಸಾಹ ಧನ ಸೇರಿಸಿ ಕೂಡಲೆ ಖರೀದಿ ಕೇಂದ್ರ ಆರಂಭಿಸಬೇಕಾಗಿದೆ.

  ರಾಜ್ಯ ಸರ್ಕಾರ ಮುಖ್ಯವಾಗಿ ಹಿಂಗಾರು ಬೆಳೆಗಳಾದ ಕಡಲೆ, ಜೋಳ, ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸಬೇಕು. ಅದು ಬಿಟ್ಟು ರೈತರ ಬಳಿ ಇರಲಾರದ ಬೆಳೆಗೆ ಬೆಲೆ ಘೋಷಿಸಿದೆ. ಇದು ವ್ಯಾಪಾರಸ್ಥರಿಗೆ ಲಾಭ ಮಾಡಿಕೊಡುವ ದುರುದ್ದೇಶದ ನಿರ್ಧಾರ. ಹಿಂಗಾರು ಬೆಳೆಗೆ ಬೆಂಬಲ ಬೆಲೆಗಾಗಿ ಈಗಾಗಲೇ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭವಾಗಿದ್ದು, ಘೋಷಣೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ.
  – ಗುರು ರಾಯನಗೌಡ್ರ, ರೈತ ಮುಖಂಡ, ಹುಬ್ಬಳ್ಳಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts