ಬೆಂಡೆಕಾಯಿ ಬೀಜಗಳು

ಬೆಂಡೆಕಾಯಿಯು ನಾವು ದಿನನಿತ್ಯ ಬಳಸುವ ತರಕಾರಿಗಳಲ್ಲೊಂದು. ಬೆಂಡೆಕಾಯಿಯ ಆರೋಗ್ಯಸಹಕಾರಿ ಗುಣಗಳ ಬಗ್ಗೆ ಹಿಂದಿನ ಅಂಕಣವೊಂದರಲ್ಲಿ ತಿಳಿದುಕೊಂಡಿದ್ದೆವು. ಇಂದಿನ ಅಂಕಣದಲ್ಲಿ ಬೆಂಡೆಕಾಯಿಯ ಬೀಜಗಳ ಉಪಯುಕ್ತತೆಗಳ ಬಗ್ಗೆ ತಿಳಿದುಕೊಳ್ಳೋಣ.

ನಾರಿನಂಶವನ್ನು ಹೆಚ್ಚು ಹೊಂದಿರುವ ಬೆಂಡೆಕಾಯಿಯ ಬೀಜಗಳು ಇಡೀ ಬೆಂಡೆಕಾಯಿಯ ಉಪಯುಕ್ತತೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಕೆಲವರು ಇದರ ಬೀಜಗಳನ್ನು ತೆಗೆದು ಉಳಿದ ಭಾಗವನ್ನು ಮಾತ್ರ ಬಳಸುವಂತಹ ರೂಢಿ ಮಾಡಿಕೊಂಡಿರುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ನಮ್ಮ ದೇಹಕ್ಕೆ ಪೋಷಕಾಂಶಗಳ ನಷ್ಟ ಆಗುತ್ತದೆ. ಬೆಂಡೆಕಾಯಿಯ ಬೀಜಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಬಹಳ ಸಹಕಾರಿ. ಇದರಲ್ಲಿನ ನೀರಿನಲ್ಲಿ ಕರಗುವ ನಾರಿನಂಶವು ಮಲಬದ್ಧತೆಯ ನಿವಾರಣೆಗೆ ಅನುಕೂಲಕಾರಿ. ಪ್ರತಿನಿತ್ಯ ನಿಯತವಾಗಿ ಸೇವಿಸುತ್ತ ಬಂದಲ್ಲಿ ಮಲವಿಸರ್ಜನೆ ಸರಿಯಾಗಿ ಆಗುತ್ತದೆ.

ಬೀಜಗಳನ್ನು ನೆರಳಿನಲ್ಲಿ ಒಣಗಿಸಿಟ್ಟುಕೊಂಡು ನಂತರ ಉಪಯೋಗಿಸಬಹುದು. ಇಲ್ಲವಾದಲ್ಲಿ ಹಸಿ ಬೆಂಡೆಯ ಬೀಜಗಳನ್ನೇ ಉಪಯೋಗಿಸಬಹುದು. ನೀರಿನಲ್ಲಿ ನೆನೆಸಿ ಉಪಯೋಗಿಸುವುದರಿಂದ ಇನ್ನಷ್ಟು ಪ್ರಯೋಜನಗಳು ಲಭ್ಯವಾಗುತ್ತದೆ. ದೇಹವನ್ನು ತಂಪಾಗಿಡಲು ಬೆಂಡೆಕಾಯಿಯ ಬೀಜಗಳು ಸಹಕಾರಿ.

ಬೀಜಗಳ ಸಹಿತ ಬೆಂಡೆಕಾಯಿಯನ್ನು ಉದ್ದುದ್ದ ಕತ್ತರಿಸಿ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿನ ಈ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್​ನ್ನು ಕಡಿಮೆ ಮಾಡಲು ಇದರ ಸೇವನೆ ಸಹಕಾರಿ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ಇದು ಶಕ್ಯವಾದುದು. ಬೀಜಗಳನ್ನು ಸಂಗ್ರಹಿಸಿ, ಒಣಗಿಸಿ ಪುಡಿ ಮಾಡಿಟ್ಟುಕೊಂಡು ಆ ಪುಡಿಯನ್ನು ಜ್ಯೂಸ್ ಅಥವಾ ಮಜ್ಜಿಗೆಗೆ ಹಾಕಿ ಸಹ ತೆಗೆದುಕೊಳ್ಳಬಹುದು.