ಬೆಂಡೆಕಾಯಿಯ ಜ್ಯೂಸ್

ಬೆಂಡೆಕಾಯಿಯನ್ನು ಜ್ಯೂಸ್ ಮಾಡಿ ಕುಡಿಯುವುದು ಆರೋಗ್ಯದ ಹಿತದೃಷ್ಟಿಯಿಂದ ಬಹಳ ಒಳ್ಳೆಯದು. ಇದರಿಂದಾಗುವ ಪ್ರಯೋಜನಗಳೇನು ಎಂಬುದರ ಕುರಿತು ಇಂದಿನ ಅಂಕಣದಲ್ಲಿ ತಿಳಿದುಕೊಳ್ಳೋಣ.

ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೆಂಡೆಕಾಯಿ ಜ್ಯೂಸ್ ಅತ್ಯಂತ ಸಹಕಾರಿ ಅಂಶವಾಗಿ ಕೆಲಸ ಮಾಡುತ್ತದೆ. ಇದು ದೇಹದ ಕೋಶಗಳು ಹೆಚ್ಚಿನ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಅನುಕೂಲ ಮಾಡಿಕೊಡುತ್ತದೆ. ಇದರಲ್ಲಿನ ವಿಟಮಿನ್ ಎ, ವಿಟಮಿನ್ ಸಿ, ಮೆಗ್ನೀಷಿಯಂ ಹಾಗೂ ಇನ್ನಿತರ ಖನಿಜ ಲವಣಗಳು ಸಹ ರಕ್ತಕಣಗಳ ಪ್ರಚೋದನೆಗೆ ಕಾರಣವಾಗುತ್ತವೆ. ಬೆಂಡೆಕಾಯಿಯ ಜ್ಯೂಸ್​ನಲ್ಲಿನ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿಸೆಪ್ಟಿಕ್ ಗುಣಗಳು ಗಂಟಲುನೋವು ಮತ್ತು ಕಫ ನಿವಾರಣೆಗೆ ಸಹಕಾರಿ.

ಮಧುಮೇಹ ನಿರ್ವಹಣೆಗೆ ಅತ್ಯುತ್ತಮ ಪರಿಣಾಮಕಾರಿ ಮಾರ್ಗ ಬೆಂಡೆಕಾಯಿ. ಇದು ಇನ್ಸುಲಿನ್ ಗುಣಗಳನ್ನು ಹೊಂದಿದ್ದು, ರಕ್ತದಲ್ಲಿ ಸಕ್ಕರೆಯ ಅಂಶವನ್ನು ಕಡಿಮೆ ಮಾಡುವ ಕೆಲಸವನ್ನು ಮಾಡಬಲ್ಲದು. ಆದ್ದರಿಂದ ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿಯ ಜ್ಯೂಸ್ ಕುಡಿಯುವ ಹವ್ಯಾಸವನ್ನು ರೂಢಿಸಿಕೊಳ್ಳಬಹುದು. ಕನಿಷ್ಠಪಕ್ಷ ರಾತ್ರಿ ಮಲಗುವ ಮುಂಚೆ ಬೆಂಡೆಕಾಯಿಯನ್ನು ಉದ್ದುದ್ದ ಸೀಳಿ ಅದನ್ನು ನೀರಿನಲ್ಲಿ ನೆನೆಸಿಟ್ಟುಕೊಂಡು ಮಾರನೆಯ ದಿನ ಬೆಳಗ್ಗೆ ಆ ನೀರನ್ನು ಕುಡಿಯುವ ತಂತ್ರವನ್ನಾದರೂ ಅನುಸರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಭೇದಿಯನ್ನು ಕಡಿಮೆ ಮಾಡಲು ಬೆಂಡೆಕಾಯಿ ಜ್ಯೂಸ್ ಸಹಕಾರಿಯಾಗುತ್ತದೆ. ರಕ್ತದಲ್ಲಿನ ಕೊಲೆಸ್ಟರಾಲ್ ಅಂಶವನ್ನು ಕಡಿಮೆ ಮಾಡಲು ಇದರಲ್ಲಿನ ನಾರಿನಂಶವು ಸಹಾಯಕಾರಿ. ತನ್ಮೂಲಕ ಹೃದಯದ ಆರೋಗ್ಯವನ್ನು ಕೂಡ ಪೋಷಿಸುತ್ತದೆ.