ಬೆಂಗಳೂರು ಬ್ಲಾಸ್ಟರ್ಸ್​ಗೆ ತೆಂಡುಲ್ಕರ್ ಮಾಲೀಕ

ಬೆಂಗಳೂರು: ಐಎಸ್ಎಲ್ನಲ್ಲಿ ಕೇರಳ ಬ್ಲಾಸ್ಟರ್ಸ್ ತಂಡದ ಮಾಲೀಕತ್ವ ಪಡೆದುಕೊಂಡಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಈಗ ಬ್ಯಾಡ್ಮಿಂಟನ್ ಕ್ರೀಡೆಯತ್ತ ಒಲವು ತೋರಿದ್ದಾರೆ. ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನ (ಪಿಬಿಎಲ್) 2ನೇ ಆವೃತ್ತಿಯಲ್ಲಿ ಸ್ಪರ್ಧಿಸಲಿರುವ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಸಹ-ಮಾಲೀಕರಾಗಿದ್ದಾರೆ.

ಕಳೆದ ವರ್ಷ ಬೆಂಗಳೂರು ಟಾಪ್ಗನ್ಸ್ ಎನ್ನುವ ಹೆಸರಲ್ಲಿ ಬೆಂಗಳೂರು ಫ್ರಾಂಚೈಸಿ ಪಿಬಿಎಲ್ನಲ್ಲಿ ಆಡಿತ್ತು. ಬ್ರಾಂಡ್ಪ್ರಿಕ್ಸ್ ಕನ್ಸಲ್ಟಿಂಗ್ ಸೇರಿದಂತೆ ಹಲವು ಷೇರುದಾರರ ಮಾಲೀಕತ್ವ ಟಾಪ್ಗನ್ಸ್ ತಂಡಕ್ಕಿತ್ತು. ಇವರಿಂದ ಬೆಂಗಳೂರು ತಂಡವನ್ನು ಖರೀದಿಸಲಾಗಿದೆ. ಕೇರಳ ಬ್ಲಾಸ್ಟರ್ಸ್ ತಂಡದ ಒಡೆತನ ಹೊಂದಿರುವವರೇ ಬೆಂಗಳೂರು ಬ್ಲಾಸ್ಟರ್ಸ್ಗೆ ಮಾಲೀಕರಾಗಿದ್ದು, ಉದ್ಯಮಿ ಚಾಮುಂಡೇಶ್ವರ್ ನಾಥ್ ಹಾಗೂ ಮಾಜಿ ಷಟ್ಲರ್ ಹಾಗೂ ಟೀಮ್ ಕೋಚ್ ಅರವಿಂದ್ ಭಟ್ ಕೂಡ ಪಾಲು ಹೊಂದಿದ್ದಾರೆ.

ಗುರುವಾರ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಫ್ರಾಂಚೈಸಿಯ ಹೊಸ ಮಾಲೀಕರು, ತಂಡದ ಲಾಂಛನವನ್ನು ಪ್ರಕಟಿಸಲಾಯಿತು. ಈ ವೇಳೆ ಮಾತನಾಡಿದ ಸಚಿನ್, ‘ರ್ಯಾಕೆಟ್ ಸ್ಪೋರ್ಟ್ಸ್ ನನ್ನ ಇಷ್ಟದ ಆಟಗಳಲ್ಲಿ ಒಂದು. ಪ್ರಶಸ್ತಿ ಗೆಲ್ಲುವಂಥ ಗಟ್ಟಿ ತಂಡ ಈ ಬಾರಿ ನಮ್ಮಲ್ಲಿದೆ. ಬೆಂಗಳೂರಿನಿಂದ ಬ್ಯಾಡ್ಮಿಂಟನ್ಗೆ ಶ್ರೇಷ್ಠ ಆಟಗಾರರು ಸಿಕ್ಕಿದ್ದಾರೆ. ಭಾರತದ ಬ್ಯಾಡ್ಮಿಂಟನ್ ಯಶಸ್ಸಿನ ಪಥದಲ್ಲಿ ಸಾಗುತ್ತಿದೆ. ಬ್ಯಾಡ್ಮಿಂಟನ್ನ ಗುಣಮಟ್ಟವನ್ನು ಇನ್ನಷ್ಟು ಉತ್ತಮ ಮಟ್ಟಕ್ಕೇರಿಸುವ ಗುರಿ ನಮ್ಮದಾಗಿದೆ’ ಎಂದು ಹೇಳಿದರು.

ಅತ್ಯಂತ ಗರಿಷ್ಠ ಬಹುಮಾನ ಹೊಂದಿರುವ ಬ್ಯಾಡ್ಮಿಂಟನ್ ಟೂರ್ನಿ ಎನಿಸಿಕೊಂಡಿರುವ ಪಿಬಿಎಲ್ನ 2ನೇ ಆವೃತ್ತಿ ಜನವರಿ 1ರಿಂದ 14ರವರೆಗೆ ನಡೆಯಲಿದ್ದು, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಪಂದ್ಯಗಳು ಕೋರಮಂಗಲದ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯಲಿವೆ. ಅರವಿಂದ್ ಭಟ್ ತಂಡದ 10 ಆಟಗಾರರನ್ನು ಪ್ರಕಟಿಸಿದರು. ಪಿಬಿಎಲ್ ಆಡಳಿತ ಮಂಡಳಿ ಸದಸ್ಯ ಹಾಗೂ ರಾಷ್ಟ್ರೀಯ ಕೋಚ್ ಗೋಪಿಚಂದ್, ನಟ ಅಲ್ಲು ಅರ್ಜುನ್, ಉದ್ಯಮಿ ಚಾಮುಂಡೇಶ್ವರ್ ನಾಥ್, ಎನ್. ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಸಹ-ಮಾಲೀಕರಾದ ನಟ ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ ಆಗಮಿಸಿರಲಿಲ್ಲ.

ಬೆಂಗಳೂರು ಬ್ಲಾಸ್ಟರ್ಸ್ ತಂಡ: ಅಶ್ವಿನಿ ಪೊನ್ನಪ್ಪ, ರುತ್ವಿಕಾ ಶಿವಾನಿ ಗದ್ದೆ, ಸೌರಭ್ ವರ್ವ, ಪ್ರಣವ್ ಜೆರ್ರಿ ಚೋಪ್ರಾ, ಸಿಕ್ಕಿ ರೆಡ್ಡಿ, ವಿದೇಶಿಯರು: ವಿಕ್ಟರ್ ಅಕ್ಸೆಲ್ಸನ್, ಪೊರ್ನ್ಟಿಪ್ ಬುರನಪ್ರಸೆರ್ಟ್ಸುಕ್, ಬೂನ್ಸಕ್ ಪೊನ್ಸಾನಾ , ಯೂ ಯೆವೊನ್ ಸೆವೊಂಗ್, ಕೋ ಸಂಗ್ ಹ್ಯೂನ್.

ಕನ್ನಡದಲ್ಲಿ ಮಾತು ಆರಂಭಿಸಿದ ಸಚಿನ್!

ಎಲ್ಲರಿಗೂ ನಮಸ್ಕಾರ..’ ಎನ್ನುವ ಮೂಲಕ ಕನ್ನಡದಲ್ಲಿ ಮಾತು ಆರಂಭಿಸಿದ ಸಚಿನ್, ಕರ್ನಾಟಕದ ನಂಟಿನ ಬಗ್ಗೆ ಮಾತನಾಡಿದರು. ‘1990ರಿಂದಲೂ ಕರ್ನಾಟಕಕ್ಕೆ ಬರುತ್ತಿದ್ದೇನೆ. ಅಷ್ಟಿಷ್ಟು ಕನ್ನಡ ನನಗೂ ಅರ್ಥ ವಾಗುತ್ತದೆ. ಬ್ಯಾಡ್ಮಿಂಟನ್ ತಂಡದ ಮೂಲಕ ಕರ್ನಾಟಕದ ಜನರ ಜತೆ ನಂಟು ಬೆಳೆಸು ತ್ತಿರುವುದಕ್ಕೆ ಸಂತಸವಾಗಿದೆ’ ಎಂದರು. ‘ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಹೇಳಿದ ಮಾತನ್ನೇ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಹೇಳಲು ಇಚ್ಛಿಸುತ್ತೇನೆ. ಪಂದ್ಯ ಗೆಲ್ಲುವುದು, ಟ್ರೋಫಿ ಜಯಿಸುವುದಕ್ಕಿಂತ ಜನರ ಹೃದಯ ಗೆಲ್ಲಬೇಕು. ಅದನ್ನು ಸಾಧಿಸುವ ವಿಶ್ವಾಸವಿದೆ’ ಎಂದರು.

 

Leave a Reply

Your email address will not be published. Required fields are marked *