ಬೆಂಕಿ ಆರಿಸುವಾಗ ಹುತಾತ್ಮರಾದ ಲೆ. ಕಮಾಂಡರ್ ಧಮೇಂದ್ರ ಚೌಹಾಣ ಸಾಹಸಕ್ಕೆ ಶ್ಲಾಘನೆ

ಕಾರವಾರ: ಪ್ರಾಣ ಒತ್ತೆಯಿಟ್ಟು ವಿಕ್ರಮಾದಿತ್ಯ ನೌಕೆಯನ್ನು ರಕ್ಷಣೆ ಮಾಡಿದ ಲೆಫ್ಟಿನೆಂಟ್ ಕಮಾಂಡರ್ ಧಮೇಂದ್ರ ಎಸ್. ಚೌಹಾಣ ಅವರ ಸಾಹಸದ ಬಗ್ಗೆ ಜನರಿಂದ ಹೆಮ್ಮೆ ವ್ಯಕ್ತವಾಗುತ್ತಿದೆ. ಟ್ವಿಟ್ಟರ್, ಫೇಸ್​ಬುಕ್​ಗಳಲ್ಲಿ ಸಾವಿರಾರು ಜನರು ಅವರಿಗೆ ಗೌರವಾರ್ಪಣೆ ಸಲ್ಲಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 9 ರಿಂದ 11 ಗಂಟೆಯ ನಡುವೆ ವಿಕ್ರಮಾದಿತ್ಯ ನೌಕೆಯ 9 ನೇ ಮಹಡಿಯಲ್ಲಿರುವ ಎಎಫ್​ಡಿ ಇಂಜಿನ್ ಬಾಯ್ಲರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗ ಕರ್ತವ್ಯದಲ್ಲಿದ್ದ ಅಧಿಕಾರಿ ಚೌಹಾಣ ಜಾಗೃತರಾಗಿ ಸ್ವತಃ ಮುಂದೆ ನಿಂತು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಪರಿಣಾಮ ಬೇರೆ ವಿಭಾಗಗಳಿಗೆ ಬೆಂಕಿ ಹರಡಿ ನೌಕೆಗೆ ಹೆಚ್ಚಿನ ಹಾನಿಯಾಗದಂತೆ ತಡೆಯಲು ಸಾಧ್ಯವಾಯಿತು ಎಂದು ನೌಕಾ ಅಧಿಕಾರಿಗಳು ಚೌಹಾಣ ಅವರ ಸಾಹಸವನ್ನು ಕೊಂಡಾಡಿದ್ದಾರೆ.

ಚೌಹಾಣ ಅವರು ತಾಯಿ ಹಾಗೂ ಪತ್ನಿಯನ್ನು ಅಗಲಿದ್ದಾರೆ. ‘ಅವರ ಕುಟುಂಬದ ಜೊತೆಗೆ ಎಂದೆಂದಿಗೂ ಭಾರತೀಯ ನೌಕಾಸೇನೆ ಇರಲಿದೆ ಎಂದು ಮುಖ್ಯಸ್ಥ ಸುನೀಲ್ ಲಾಂಬಾ ಟ್ಟೀಟ್ ಮಾಡಿದ್ದಾರೆ.

ಇಂದು ತವರಿಗೆ: ಡಿ.ಎಸ್. ಚೌಹಾಣ ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಕಾರವಾರದ ಸರ್ಕಾರಿ ಮೆಡಿಕಲ್ ಕಾಲೇಜ್​ನಲ್ಲಿ ಶುಕ್ರವಾರ ನಡೆದಿತ್ತು. ಶನಿವಾರ ಕದಂಬ ನೌಕಾನೆಲೆಯಲ್ಲಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಯಿತು. ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರೇರ್ ಅಡ್ಮಿರಲ್ ಮಹೇಶ ಸಿಂಗ್ ಹಾಗೂ ಇತರ ಅಧಿಕಾರಿಗಳು ಚೌವ್ಹಾಣ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಮೃತದೇಹವನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ಗೋವಾ ಹಂಸ ನೌಕಾನೆಲೆಗೆ ಕೊಂಡೊಯ್ಯಲಾಯಿತು. ಅಲ್ಲಿಂದ ಡ್ರೋನಿಯರ್ ವಿಮಾನದ ಮೂಲಕ ಚೌಹಾಣ ಅವರ ಊರು ಇಂದೋರ್​ಗೆ ಕೊಂಡೊಯ್ಯಲಾಗುವುದು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಅಜಯ ಕಪೂರ್ ತಿಳಿಸಿದ್ದಾರೆ.

ಪ್ರಕರಣ ದಾಖಲು: ಕದಂಬ ನೌಕಾನೆಲೆಯ ಎಕ್ಸಿಕ್ಯೂಟಿವ್ ಆಫೀಸರ್ ವಿಕಾಸ ಸೂದ್ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಗಾಯಗೊಂಡವರ ಚೇತರಿಕೆ: ಉತ್ತರ ಪ್ರದೇಶ ಮೂಲದ ಅಭಿಷೇಕ ಸಿಂಗ್(25), ಗಂಭೀರವಾಗಿ ಗಾಯಗೊಂಡಿದ್ದಾರೆ. ಎರೈ ತಿರುನಗಿರಿ(23), ಹರಿಯಾಣಾದ ಮನೀಶ ಕುಮಾರ್ (22), ರಾಜಸ್ತಾನದ ಅಮಿತಕುಮಾರ್ ವಿದ್ಯಾಧರ ಸಿಂಗ್(22), ಜಾರ್ಖಂಡ್​ನ ಮಹಮದ್ ಶೋಯಲ್ (23), ಉತ್ತರಖಂಡ್​ನ ಸಂಜಯ ಕುಮಾರ್ ಪ್ರೇಮ ಜೋಯ್ (26) ಗಾಯಗೊಂಡಿದ್ದು ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನೌಕೆಯ ರಿಪೇರಿ ಕಾರ್ಯ: ಬೆಂಕಿ ಅವಘಡದಿಂದ ಐಎನ್​ಎಸ್ ವಿಕ್ರಮಾದಿತ್ಯ ನೌಕೆಗೆ ಉಂಟಾದ ಅಲ್ಪಸ್ವಲ್ಪ ತೊಂದರೆಯನ್ನು ರಿಪೇರಿ ಮಾಡುವ ಕಾರ್ಯದಲ್ಲಿ ಕದಂಬ ನೌಕಾನೆಲೆಯ ಅಧಿಕಾರಿಗಳು ತೊಡಗಿಕೊಂಡಿದ್ದಾರೆ. ನೌಕೆ ಎನ್​ಎಸ್​ಆರ್​ವೈನಲ್ಲಿ ನೆಲೆ ನಿಂತಿದೆ. ಮೇ 1 ರಿಂದ 6 ರವರೆಗೆ ನಡೆಯುವ ಇಂಡೋ -ಫ್ರೆಂಚ್ ಸಮಾರಾಭ್ಯಾಸ ‘ವರುಣಾ’ಕ್ಕೆ ವಿಕ್ರಮಾದಿತ್ಯ ನೌಕೆಯನ್ನು ಸಜ್ಜುಗೊಳಿಸುವ ಯತ್ನ ನಡೆದಿದೆ.