ಬೆಂಕಿಗೆ ಅಹುತಿಯಾದ ಕಬ್ಬಿನ ಪೈರು

ಮುಂಡರಗಿ: ಕಬ್ಬಿನ ಗದ್ದೆಗೆ ಬೆಂಕಿಬಿದ್ದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕಬ್ಬು ನಾಶವಾದ ಘಟನೆ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.

ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಅವರಿಗೆ ಸೇರಿದ ಸುಮಾರು ಹತ್ತು ಎಕರೆ ಜಮೀನಿನಲ್ಲಿ ಬೆಳೆಯಲಾದ ಕಬ್ಬು ನಾಶವಾಗಿದೆ. ಜಮೀನಿನ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಬಿದ್ದಿದೆ ಎನ್ನಲಾಗಿದೆ. ಕಟಾವಿಗೆ ಬಂದಿದ್ದ ಸುಮಾರು 12ತಿಂಗಳಿನ ಕಬ್ಬು ಸುಟ್ಟುಹೋಗಿದ್ದು ರೈತರನ್ನು ಆತಂಕಕ್ಕೆ ದೂಡಿದೆ. ಪ್ರತಿ ಎಕರೆಗೆ 50 ಟನ್​ನಂತೆ ಸುಮಾರು 500 ಟನ್ ಕಬ್ಬು ಬೆಂಕಿಗೆ ಆಹುತಿಯಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಷ್ಟರಲ್ಲಾಗಲೇ ಅಪಾರ ಪ್ರಮಾಣದ ಕಬ್ಬು ಸುಟ್ಟುಹೋಗಿತ್ತು. ಹೆಸ್ಕಾಂ ಅಧಿಕಾರಿ ಟಿ.ಪಾಂಡುರಂಗ ಇತರೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರೈತ ಈಶ್ವರಪ್ಪ ಹಂಚಿನಾಳ, ‘ಹದಿನೈದು ದಿನಗಳಲ್ಲಿ ಕಟಾವು ಮಾಡಬೇಕಿದ್ದ 12 ತಿಂಗಳಿನ ಕಬ್ಬಿನ ಬೆಳೆಗೆ ಬೆಂಕಿ ಬಿದ್ದು ನಾಶವಾಗಿರುವುದು ಬೇಸರ ತರಿಸಿದೆ. ಟನ್​ಗೆ ಕನಿಷ್ಠ 2 ಸಾವಿರ ರೂ.ನಂತೆ ಅಂದಾಜು 10 ಲಕ್ಷ ರೂ.ನಷ್ಟವಾಗಿದೆ’ ಎಂದರು.