ಬೃಹತ್ ಮಾನವ ಸರಪಳಿಯಲ್ಲಿ ಕರ್ನಾಟಕ ನಕ್ಷೆ

ಧಾರವಾಡ: ಏ. 23ರಂದು ಜರುಗುವ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣ ಹೆಚ್ಚಳಕ್ಕೆ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ (ಸ್ವೀಪ್) ಸಮಿತಿಯಿಂದ ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯ ಆವರಣದಲ್ಲಿ ಶುಕ್ರವಾರ, ಜಿಲ್ಲೆಯ ವಿದ್ಯಾರ್ಥಿಗಳಿಂದ ಬೃಹತ್ ಮಾನವ ಸರಪಳಿ, ಚುನಾವಣಾ ಜಾಗೃತಿ ಗೀತೆ, ನೃತ್ಯ ಕಾರ್ಯಕ್ರಮಗಳು ಜರುಗಿದವು.

ಆಂಗ್ಲ ವರ್ಣಮಾಲೆಯ /// ಈಗಈ ಖ್ಖಉಉಕ /// ಹಾಗೂ ಕರ್ನಾಟಕ ನಕಾಶೆಯ ಮಾದರಿಯಲ್ಲಿ ನಿಂತ ವಿದ್ಯಾರ್ಥಿಗಳು, ಚುನಾವಣಾ ಜಾಗೃತಿ ಗೀತೆಗಳಿಗೆ ಹೆಜ್ಜೆಗಳನ್ನು ಹಾಕಿದರು. ಗ್ರಾಮೀಣ ಶಾಲಾ ಶಿಕ್ಷಕಿಯರು ಲೋಕಸಭಾ ಚುನಾವಣೆ 2019 ಎಂದು ಬರೆದ ಬಿಂದಿಗೆಗಳೊಂದಿಗೆ ಹ್ಯಾಪಿ ವೋಟರ್ಸ್ ಡೇ ಹಾಡಿಗೆ ನೃತ್ಯ ಪ್ರದರ್ಶಿಸಿದರು. ಸಾವಿರಾರು ವಿದ್ಯಾರ್ಥಿಗಳು, ಯುವ ಜನರು ಹಾಗೂ ಸಾರ್ವಜನಿಕರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್, ಇದೇ ಮೊದಲ ಬಾರಿಗೆ ಮತದಾನಕ್ಕೆ ಅರ್ಹತೆ ಪಡೆದವರು ಮತ ಚಲಾಯಿಸಿ ಬೆರಳಿಗೆ ಹಾಕಿಸಿಕೊಂಡ ಶಾಹಿ ಹಾಗೂ ಮತಗಟ್ಟೆ ಕಾಣುವ ಹಾಗೆ ಸೆಲ್ಪಿ ತೆಗೆದುಕೊಂಡು ಜಿಲ್ಲಾ ಸ್ವೀಪ್ ಸಮಿತಿಗೆ ಕಳಿಸಿದರೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದರು.

ಎಫ್.ಬಿ. ಕಣವಿ, ರಾಮು ಮೂಲಗಿ, ಪ್ರಕಾಶ ಕಂಬಳಿ, ಬಾಬಾಜಾನ್ ಮುಲ್ಲಾ ಮತ್ತು ತಂಡ ಚುನಾವಣಾ ಜಾಗೃತಿ ಗೀತೆಗಳನ್ನು ಹಾಡಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಡಿಡಿಪಿಐ ಗಜಾನನ ಮನ್ನಿಕೇರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್. ಮುನಿರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಎ.ಎಂ. ಮಿರ್ಜಣ್ಣವರ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎ. ಖಾಜಿ, ವಿದ್ಯಾ ನಾಡಿಗೇರ, ಎಸ್.ಎಂ. ಹುಡೇದಮನಿ, ಸ್ವೀಪ್ ಸಮಿತಿಯ ಕೆ.ಎಂ. ಶೇಖ್, ಜಿ.ಎನ್.ನಂದನ, ಇತರರಿದ್ದರು.

ಗಮನ ಸೆಳೆದ ವಿದ್ಯಾರ್ಥಿಗಳ ವಾದ್ಯಮೇಳ:ಕರ್ನಾಟಕ ಕಾಲೇಜು ಆವರಣದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪ್ರೆಸೆಂಟೇಶನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರ ವಾದ್ಯವೃಂದ ( ಬ್ಯಾಂಡ್ ಟ್ರೂಪ್) ಕಾರ್ಯಕ್ರಮಕ್ಕೆ ಮೆರುಗು ನೀಡಿತು. ವಾದ್ಯಮೇಳದ ಮೂಲಕ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಪಥಸಂಚಲನದಲ್ಲಿ ಬರಮಾಡಿಕೊಂಡ ತಂಡ ನಂತರ ಸಾರೇ ಜಹಾಂಸೆ ಅಚ್ಚಾ ಹಾಗೂ ರಾಷ್ಟ್ರಗೀತೆಯನ್ನು ನುಡಿಸಿತು. ನಗರದ ವಿವಿಧ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳು, ಟ್ಯುಟೋರಿಯಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *