ಬುಧವಾರ ಮಧ್ಯರಾತ್ರಿ ಭದ್ರಾ ನಾಲೆಗೆ ನೀರು ಬಿಡುಗಡೆ

ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಬುಧವಾರ ಮಧ್ಯರಾತ್ರಿಯಿಂದಲೇ ಎಡ ಹಾಗೂ ಬಲ ನಾಲೆಗಳಿಗೆ ನೀರು ಬಿಡುಗಡೆ ಮಾಡಲಿದ್ದು ಸತತ 125 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಯತೀಶ್ ಚಂದ್ರ ತಿಳಿಸಿದ್ದಾರೆ.

ಭದ್ರಾ ಬಲ ಹಾಗೂ ಎಡದಂಡೆ ನಾಲೆ, ಆನವೇರಿ, ದಾವಣಗೆರೆ, ಮಲೆಬೆನ್ನೂರು ಹಾಗೂ ಹರಿಹರ ಶಾಖಾ ನಾಲೆಗಳಲ್ಲಿ ನೀರು ಹರಿಸಲಾಗುವುದು. ನೀರಿನ ಸಂಗ್ರಹ ಹಾಗೂ ನೀರಿನ ಒಳಹರಿವು ಆಧರಿಸಿ ನಾಲೆಗಳಲ್ಲಿ ನೀರು ಹರಿಸಲಾಗುತ್ತದ್ದು, ಅದಕ್ಕೆ ಅನುಗುಣವಾಗಿ ಬೆಳೆ ಬೆಳೆಯಬೇಕು. ಅದನ್ನು ಮೀರಿ ನೀರಿನ ಕೊರತೆಯಿಂದ ಬೆಳೆ ನಷ್ಟವಾದರೆ ಅದಕ್ಕೆ ಇಲಾಖೆ ಜವಾಬ್ದಾರಿಯಲ್ಲ ಎಂದು ಎಚ್ಚರಿಸಿದ್ದಾರೆ.

ನಿಗದಿತ ಪ್ರದೇಶಗಳಲ್ಲಿ ಸೂಚಿಸಿದ ಬೆಳೆ ಬೆಳೆದರೆ ಮಾತ್ರ ಪೂರ್ಣ ಪ್ರಮಾಣದಲ್ಲಿ 1.02 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಬಹುದು. ಅದನ್ನು ಮೀರಿ ಹೆಚ್ಚು ನೀರು ಬಯಸುವ ಬೆಳೆ ಬೆಳೆದರೆ ಅಗತ್ಯಕ್ಕೆ ತಕ್ಕಷ್ಟು ನೀರು ಒದಗಿಸಲು ಕಷ್ಟವಾಗಲಿದೆ. ಕಾಲುವೆಯಲ್ಲಿ ಹರಿ ಬಿಡುವ ನೀರಿನಲ್ಲಿ ಕುಡಿಯುವ ನೀರಿನ ಮೇಲೆ ಅವಲಂಬಿತವಾದ ನಗರ ಹಾಗೂ ಪಟ್ಟಣ ಪ್ರದೇಶಗಳ ನೀರಿನ ಬೇಡಿಕೆಯೂ ಸೇರಿದೆ ಎಂದು ಅವರು ತಿಳಿಸಿದ್ದಾರೆ.

ಸೂಚನೆ ಮೀರಿದರೆ ಕ್ರಮ: ಬೆಳೆ ಮಾದರಿ ಉಲ್ಲಂಘಿಸುವವರು, ನೀರಾವರಿ ಕಾಲುವೆ ಜಖಂಗೊಳಿಸುವವರು, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರ ವಿರುದ್ಧ ಕರ್ನಾಟಕ ನೀರಾವರಿ ಕಾಯ್ದೆ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧೀಕ್ಷಕ ಅಭಿಯಂತರ ಎಚ್ಚರಿಸಿದ್ದಾರೆ.