More

  ಬೀದಿ ಬದಿ ಉಪಾಹಾರಕ್ಕೆ ಇಲ್ಲ ಅಡ್ಡಿ!

  ಹುಬ್ಬಳ್ಳಿ: ಬೀದಿ ಬದಿ ಎಗ್ ರೈಸ್, ಪಾನಿ ಪುರಿ ತಿಂದರೆ ಕರೊನಾ ಆತಂಕ ಇರುವುದಿಲ್ಲ. ಅದೇ, ಹೋಟೆಲ್​ನಲ್ಲಿ ಕುಳಿತು ತಿಂದರೆ ಕರೊನಾ ಬರುತ್ತದೆ!

  ಅವಳಿ ನಗರದ ಸಾರ್ವಜನಿಕರು ಹೀಗೆ ವ್ಯಂಗ್ಯವಾಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಲಾಕ್​ಡೌನ್ ನಿಯಮಗಳಲ್ಲಿ ಸಡಿಲಿಕೆ ನೀಡಿದ ಬಳಿಕ ದೇಶಪಾಂಡೆ ನಗರ, ವಿದ್ಯಾನಗರ ಶಿರೂರ ಪಾರ್ಕ್, ಬೈಲಪ್ಪನವರ ನಗರ, ಇತ್ಯಾದಿ ಕಡೆ ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುವ ಚಟುವಟಿಕೆಗಳು ಒಂದೊಂದಾಗಿ ತಲೆ ಎತ್ತಿವೆ. ಅಲ್ಲಲ್ಲಿ ಮಾಂಸಾಹಾರಿ ಊಟದ ಡಬ್ಬಾ ಅಂಗಡಿಗಳು ತೆರೆದಿದ್ದು, ಕುಳಿತು ಊಟ ಮಾಡಲು ಕುರ್ಚಿ, ಟೇಬಲ್ ಹಾಕಲಾಗಿದೆ. ಎಗ್​ರೈಸ್, ಗೋಬಿ ಮಂಚೂರಿ, ಮಸಾಲ ಪುರಿ, ವಡಾ ಪಾವ್ ಮಾರಾಟ ಆರಂಭಗೊಂಡಿದೆ. ಒಂದೊಂದು ತಳ್ಳುಗಾಡಿ ಬಳಿ ಮೊದಲಿನಷ್ಟು ಜನದಟ್ಟಣೆ ಇಲ್ಲದಿದ್ದರೂ 5-6 ಜನ ಸೇರಿರುತ್ತಾರೆ.

  ಹೋಟೆಲ್​ನವರು ಊಟ, ಉಪಾಹಾರವನ್ನು ಪಾರ್ಸಲ್ ನೀಡಬೇಕು. ಗ್ರಾಹಕರು ಅಲ್ಲಿಯೇ ಕುಳಿತು ತಿನ್ನಲೂ ಅವಕಾಶ ನೀಡುವಂತಿಲ್ಲ. ಆದರೆ, ತಳ್ಳುಗಾಡಿ ಬಳಿ ಆರ್ಡರ್ ಮಾಡಿ ಅಲ್ಲಿಯೇ ತಿಂದು ಹೋಗಬಹುದು. ಇದೆಂಥ ನಿಯಮ. ಹೋಟೆಲ್​ನವರು ಲಾಕ್​ಡೌನ್ ನಡುವೆ ಪಾರ್ಸಲ್ ಸೇವೆಗೆ ಅವಕಾಶ ಪಡೆದ ಮೇಲೆ ಬೀದಿ ಬದಿ ವ್ಯಾಪಾರಿಗಳಿಗೆ ತಮಗೂ ಅವಕಾಶ ಕೊಡಿ ಎಂದು ಕೋರಿದ್ದರು. ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಸರ್ಕಾರ ಹೇಳಿತ್ತು. ಹಾಗಾಗಿ ಈಗ ರಸ್ತೆ ಬದಿ ಹಣ್ಣು, ಕಾಯಿಪಲ್ಲೆ, ಹೂವು, ಎಳೆನೀರು ಜತೆ ಎಗ್ ರೈಸ್, ಪಾನಿ ಪುರಿ, ಗೋಬಿ ಮಂಚೂರಿ ಆರಂಭಗೊಂಡಿದೆ. ‘ಕರೊನಾ ಲಾಕ್​ಡೌನ್​ನಿಂದ ಎಲ್ಲ ರೀತಿಯ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಅವಳಿ ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆಯೇ 10 ಸಾವಿರ ದಾಟಿದೆ. ಇಂಥ ಸಂಕಷ್ಟದ ಸಮಯದಲ್ಲಿ ಬಿಗಿ ಕ್ರಮ ಕೈಗೊಳ್ಳಲು ಆಗುವುದಿಲ್ಲ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

  ಬೀದಿ ಬದಿ ವ್ಯಾಪಾರಿಗಳಿಗೆ ಟ್ರೇಡ್ ಲೈಸನ್ಸ್ ಇರುವುದಿಲ್ಲ. ಅವರದ್ದು ಅನಧಿಕೃತ ವ್ಯವಹಾರ. ಈ ಬಗ್ಗೆ ಹಿಂದೆ ಬಹಳಷ್ಟು ಚರ್ಚೆ ಆಗಿವೆ. ಪಾಲಿಕೆಯವರು ಹಾಗೂ ಪೊಲೀಸರು ಈಗ ಸಾಕಷ್ಟು ಕೆಲಸದ ಒತ್ತಡದಲ್ಲಿ ಇದ್ದಾರೆ. ಒಟ್ಟಾರೆ ನಾವೇ (ಹೋಟೆಲ್​ನವರು) ಟಾರ್ಗೆಟ್ ಆಗಿದ್ದೇವೆ.

  | ರವೀಂದ್ರ ಗಾಯತೊಂಡೆ, ಕಾರ್ಯದರ್ಶಿ ಹುಬ್ಬಳ್ಳಿ ಹೋಟೆಲ್ ಸಂಘ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts