More

  ಬೀಜ, ಗೊಬ್ಬರ ಸಮರ್ಪಕ ಪೂರೈಕೆಗೆ ಕ್ರಮ

  ಬಾಗಲಕೋಟೆ: ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಯ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.

  ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಮುಂಗಾರು ಹಂಗಾಮಿನ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಅಭಾವವಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು. ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ವಿತರಣೆ ಹಾಗೂ ದಾಸ್ತಾನು ಪರಿಶೀಲಿಸಲು ಸೂಚಿಸಿದರು.

  ನಕಲಿ ಬೀಜ, ಗೊಬ್ಬರ ವಿತರಣೆ ಆಗದಂತೆ ಕಟ್ಟೇಚ್ಚರ ವಹಿಸಬೇಕು. ಗೊಬ್ಬರ ಮತ್ತು ಬೀಜದ ಕೃತಕ ಅಭಾವ ಸೃಷ್ಟಿಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಕೃಷಿ ಮಾರಾಟ ಕೇಂದ್ರಗಳಿಗೆ ವೀಚಕ್ಷಣಾ ಅಧಿಕಾರಿಗಳ ತಂಡ ನಿರಂತರವಾಗಿ ಭೇಟಿ ನೀಡುವಂತೆ ಜಂಟಿ ಕೃಷಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಅಲ್ಲದೇ ಜಿಲ್ಲೆಗೆ ಪೂರೈಕೆಯಾದ ಬೀಜ, ರಸಗೊಬ್ಬರ ಬೇರೆ ಜಿಲ್ಲೆಗೆ ಹೋಗದಂತೆ ನಿಗಾವಹಿಸಲು ತಿಳಿಸಿದ ಅವರು ಬಿತ್ತನೆ ಬೀಜಗಳ ಪ್ಯಾಕ್ ಮೇಲೆ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಸ್ಕ್ಯಾನ್ ಮಾಡಿ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ರೈತರು ತಾವು ಪಡೆದ ಬೀಜಕ್ಕೆ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಲು ತಿಳಿಸಿದರು.

  ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಮಾತನಾಡಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಅಭಾವ ಸೃಷ್ಠಿಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಕೃಷಿ ಮಾರಾಟ ಕೇಂದ್ರಗಳಿಗೆ ನಿರಂತರವಾಗಿ ಭೇಟಿ ನೀಡಿ ಕಳಪೆ ಬೀಜ, ಗರಿಷ್ಟ ಮಾರಾಟ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಕಂಡುಬಂದಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದರು. ಗುರಿಗಿಂತ ಹೆಚ್ಚಿನ ವೀಚಕ್ಷಣಾ ತಂಡ ಭೇಟಿ ನೀಡಲು ತಿಳಿಸಿದರು. ಮಾರಾಟ ಕೇಂದ್ರಗಳು ಇಲಾಖೆಯ ಮಾನದಂಡಗಳ ಪ್ರಕಾರ ನಡೆಯುವಂತೆ ಕ್ರಮವಹಿಸಲು ತಿಳಿಸಿದರು.

  ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ಮಾತನಾಡಿ ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ವಾಡಿಕೆ ಮಳೆಗಿಂತ ಹೆಚ್ಚಿಗೆ ಆಗಿದ್ದು, ಮುಂಗಾರು ಹಂಗಾಮಿಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. 2.82 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು, ತೊಗರಿ, ಉದ್ದು, ಹೆಸರು, ಸೋಯಾ ಅವರೆ, ಜೋಳ ಸೇರಿದಂತೆ ಒಟ್ಟು 24658 ಕ್ವಿಂಟಲ್ ಬೀಜಗಳ ಬೇಕಾಗಿದ್ದು, ಈ ಪೈಕಿ 18000 ಕ್ವಿಂಟಾಲ ದಾಸ್ತಾನು ಇದೆ. ಯೂರಿಯಾ 34795 ಮೆ.ಟನ್, ಡಿಎಪಿ 6302 ಮೆ.ಟನ್, ಕಾಂಪ್ಲೇಕ್ಸ್ 19388 ಮೆ.ಟನ್, ಎಂ.ಒ.ಪಿ 2546 ಹಾಗೂ ಎಸ್.ಎಸ್.ಪಿ 1641 ಟನ್ ಸೇರಿ ಒಟ್ಟು 71153 ಮೆ.ಟನ್ ಗೊಬ್ಬರದ ಲಭ್ಯವಿರುವುದಾಗಿ ಸಭೆಗೆ ತಿಳಿಸಿದರು.

  ಜಿಲ್ಲೆಯಲ್ಲಿ 18 ರೈತ ಸಂಪರ್ಕ ಕೇಂದ್ರಗಳು, ಬೀಜ ಕೃಷಿ ಪರಿಕರ ಮಳಿಗೆ 303, ಕೀಟನಾಶಕ ಕೃಷಿ ಪರಿಕರ ಮಳಿಗೆ 536, ರಸಗೊಬ್ಬರ ಮಳಿಗೆ (ರಿಟೇಲರ) 495, ಹೋಲಸೇಲ್ 76 ಮಳಿಗೆಗಳು ಇರುತ್ತವೆ. ಚಿಕ್ಕಲಕಿ ಕ್ರಾಸ್, ಗೋಠೆ, ಜಮಖಂಡಿ ಹಾಗೂ ಮುಧೋಳದಲ್ಲಿ ತಲಾ ಒಂದರಂತೆ ಹೆಚ್ಚುವರಿ 4 ಬಿತ್ತನೆ ಬೀಜ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಪಿ.ಸುಂಕದ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಕೃಷಿ ಉಪನಿರ್ದೇಶಕರಾದ ಎಂ.ಆರ್.ನಾಗೂರ, ಕೆ.ಎಸ್.ಅಗಸನಾಳ, ಜಿಲ್ಲಾ ಕೃಷಿ ಮಾರಾಟ ಸಂಘದ ವಿಜಯ ವಾಲಿ, ರೈಲ್ವೆ ಇಲಾಖೆಯ ಮುಖ್ಯ ಸರಕು ವ್ಯವಸ್ಥಾಪಕ ಹನಮಂತ ದಾಸರ, ಜಿಲ್ಲಾ ಅಗ್ರಣಿಯ ಬ್ಯಾಂಕ್ ವ್ಯವಸ್ಥಾಪಕ ರಾಜಕುಮಾರ ಹೂಗಾರ ಸೇರಿದಂತೆ ಸಹಕಾರಿ, ಖಾಸಗಿ ಬೀಜೋತ್ಪಾದನಾ ಸಂಸ್ಥೆ, ರಸಗೊಬ್ಬರ ಉತ್ಪಾದನಾ ಸಂಸ್ಥೆಯ ಜಿಲ್ಲಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts