ಹುಯ್ಯೋ ಹುಯ್ಯೋ ಮಳೆರಾಯ

ಭರಮಸಾಗರ: ಈ ವರ್ಷದ ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅನ್ನದಾತರು ಮಳೆಗಾಗಿ ವಿವಿಧ ರೀತಿ ಆಚರಣೆಗಳಲ್ಲಿ ತೊಡಗಿರುವುದು ಎಲ್ಲೆಲ್ಲೂ ಕಾಣಬರುತ್ತಿದೆ.

ಕತ್ತೆ, ಕಪ್ಪೆಗಳಿಗೆ ಮದುವೆ, ಗುಡ್ಡೆ ಕಲ್ಲಿಗೆ ನೂರೊಂದು ಕೊಡ ನೀರು ಅರ್ಪಣೆ, ದೇವರಿಗೆ ಹಾಲಿನ ಅಭಿಷೇಕ, ಹೋಮ, ಮರ-ಗಿಡಗಳಿಗೆ ವಿಶೇಷ ಪೂಜೆ ಸೇರಿ ಎಲ್ಲೆಲ್ಲೂ ಧಾರ್ಮಿಕ ಕಾರ್ಯಗಳು ನಿರಂತರ ಜರುಗುತ್ತಿವೆ.

ಭರಮಸಾಗರ ಸಮೀಪದ ಗೊಲ್ಲರಹಟ್ಟಿಯಲ್ಲಿ ಮಕ್ಕಳು ಮಳೆಗಾಗಿ ಪ್ರಾರ್ಥಿಸಿ ಮಳೆ ಮಲ್ಲಪ್ಪನ ಪೂಜೆಯನ್ನು ಭಾನುವಾರ ಮಾಡಿದರು.

ಹುಡುಗನೊಬ್ಬ ತೆಲೆಯ ಮೇಲೆ ಹೊತ್ತ ಮಣೆಯ ಮೇಲೆ ಸಗಣಿಯಿಂದ ಮಾಡಿದ ಸಣ್ಣ ಗುಡ್ಡೆಯನ್ನಿರಿಸಿ ಅದಕ್ಕೆ ಹುಲ್ಲುಗರಿಕೆ, ತಂಟಿಗೆ ಹೂಗಳಿಂದ ಸಿಂಗರಿಸಿ ಗ್ರಾಮದ ಪ್ರತಿ ಮನೆ ಬಾಗಿಲಿಗೆ ಸಾಗಿ ಹುಯ್ಯೋ ಹುಯ್ಯೋ ಮಳೆರಾಯ ರೈತನ ಹೊಲಕ್ಕೆ ನೀರಿಲ್ಲ ಎಂದು ಹಾಡು ಹಾಡಿ ವರುಣನ ಕೃಪೆ ಗಳಿಸಲು ಪ್ರಯತ್ನಿಸಿದರು.

ಮನೆಯ ಮುಂದೆ ಬಂದ ಈ ಮಳೆ ಮಲ್ಲಪ್ಪನಿಗೆ ಮನೆಯವರು ನೀರೆರೆದು ಕಾಣಿಕೆ, ವಿವಿಧ ಬಗೆ ಕಾಳು ನೀಡಿದರು. ಇವುಗಳನ್ನು ಸ್ವೀಕರಿಸಿದ ಮಕ್ಕಳು ಊರ ಮುಂದಿನ ಕುಕ್ಕುವಾಡೇಶ್ವರಿ, ಈರಗಟ್ಟೆಪ್ಪ, ಚಿತ್ರಲಿಂಗ, ಕರಿಗಲ್ಲು, ದುರ್ಗಮ್ಮ, ಉಡಸಲಮ್ಮ, ದೇವಸ್ಥಾನಗಳ ಬಳಿ ಹೋಗಿ ಮಳೆಗಾಗಿ ವಿಶೇಷವಾಗಿ ಪ್ರಾರ್ಥಿಸಿದರು. ಗ್ರಾಮಸ್ಥರು ನೀಡಿದ ದಾನ್ಯದಿಂದ ಪ್ರಸಾದ ತಯಾರಿಸಿ ದೇವರಿಗೆ ಸಮರ್ಪಿಸಿ ವಿತರಿಸಿದರು.

ಜನರಲ್ಲಿ ಧಾರ್ಮಿಕ ಭಾವನೆಗಳು ಬರಲಿ ಮಳೆ ಬೆಳೆ ಚೆನ್ನಾಗಿ ಬರಲಿ ಎಂಬ ಮಹಾದಾಸೆಯಿಂದ ಮಕ್ಕಳ ಈ ರೀತಿ ಆಚರಣೆ ಗ್ರಾಮಸ್ಥರಲ್ಲಿ ಭಕ್ತಿಯ ಕಡೆಗೆ ಕರೆದೊಯ್ದಿತ್ತು. ಪೂಜೆ ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *