ಬಿ-ಫಾರಂಗಾಗಿ ಆಕಾಂಕ್ಷಿಗಳ ಲಾಬಿ

ಎ.ಶಶಿಕುಮಾರ್ ಶಿಡ್ಲಘಟ್ಟ

ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಮಾತ್ರ ಬಾಕಿಯಿದ್ದು, ವಿವಿಧ ಪಕ್ಷಗಳಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಬಿ-ಫಾರಂಗಾಗಿ ಮುಖಂಡರ ಬಳಿ ಜನರನ್ನು ಕರೆದೊಯ್ದು ಲಾಬಿ ನಡೆಸುವಲ್ಲಿ ನಿರತರಾಗಿದ್ದಾರೆ.

ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಶತಾಯ ಗತಾಯ ನಗರಸಭೆ ಸದಸ್ಯರಾಗಿ ಆಯ್ಕೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಯುವಕರು ಸೇರಿ ಹಳೆಯ ಸದಸ್ಯರ ನಡುವೆ ಪೈಪೋಟಿ ಎದುರಾಗಿದೆ.

ಹಿಂದೆ 27 ವಾರ್ಡ್​ಗಳಿದ್ದ ಶಿಡ್ಲಘಟ್ಟ ಪುರಸಭೆ ಇದೀಗ 31 ವಾರ್ಡ್​ಗಳಾಗಿ ನಗರಸಭೆಯಾಗಿದೆ. 27 ಸದಸ್ಯರ ಪೈಕಿ 14 ಕಾಂಗ್ರೆಸ್, 11 ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರರು ತಲಾ ಒಂದು ಸ್ಥಾನದಲ್ಲಿ ಜಯಗಳಿಸಿದ್ದರಾದರೂ ಮೊದಲನೇ ಅವಧಿಯಲ್ಲಿ ಹೆಚ್ಚು ಬಹುಮತವಿರುವ ಕಾಂಗ್ರೆಸ್ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ಆದರೆ, ಎರಡನೇ ಅವಧಿಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್​ನ ಕೆಲ ಸದಸ್ಯರು ಜೆಡಿಎಸ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ ಕಾರಣ ಪುರಸಭೆ ಅಧಿಕಾರ ಜೆಡಿಎಸ್ ಪಾಲಾಗಿತ್ತು. ಇಷ್ಟಾದರೂ ಕುಡಿಯುವ ನೀರು, ಸ್ವಚ್ಛತೆ ಸೇರಿ ನಗರದಲ್ಲಿ ನಡೆಯಬೇಕಿದ್ದ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಕುರಿತು ಸದಸ್ಯರು, ಅಧಿಕಾರಿಗಳು ಆಸಕ್ತಿ ತೋರದ ಕಾರಣ ನಗರದ ಜನತೆಗೆ ನಗರಸಭೆ ಇದ್ದೂ ಇಲ್ಲದಂತಾಗಿತ್ತು. ಇದೇ ಕಾರಣಕ್ಕೆ ಈ ಬಾರಿ ಹಳೆಯ ಮುಖಗಳಿಗಿಂತಲೂ ಹೊಸ ಮುಖಗಳು ನಗರಸಭೆ ಪ್ರವೇಶಿಸಲು ಕಾತರರಾಗಿದ್ದಾರೆ.

ಕಾದು ನೋಡುವ ತಂತ್ರ: ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಮಾತ್ರ ಬಾಕಿಯಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಗಳು ಆಯ್ಕೆಯಾಗಿಲ್ಲ. ನಗರದ ಯಾವ ಯಾವ ವಾರ್ಡ್​ಗೆ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂದು ಮುಖಂಡರು ತಲೆ ಕೆಡಿಸಿಕೊಂಡಿದ್ದರೆ, ಶತಾಯ ಗತಾಯ ನನಗೆ ಬಿ ಫಾರಂ ಸಿಗುತ್ತದೆ. ಇಲ್ಲವಾದಲ್ಲಿ ಪಕ್ಷೇತರವಾಗಿಯಾದರೂ ಕಣಕ್ಕೆ ಇಳಿಯುವ ಹುಮ್ಮಸ್ಸಿನಲ್ಲಿ ಕೆಲವರಿದ್ದಾರೆ. ಇದನ್ನೆಲ್ಲ ಗಮನಿಸುತ್ತಿರುವ ಪಕ್ಷದ ಮುಖಂಡರು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಇದರಿಂದ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಎಲ್ಲರನ್ನೂ ಸಮಾಧಾನ ಮಾಡುವ ಯತ್ನ ನಡೆಸುತ್ತಿದ್ದಾರೆ. ನಾಮಪತ್ರ ಸಲ್ಲಿಸಲು ಗುರುವಾರ ಅಂತಿಮ ದಿನವಾಗಿದ್ದು, ಬುಧವಾರ ಸಂಜೆಯೊಳಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿಯಬಹುದು.

ಪ್ರತಿಷ್ಠೆಯನ್ನಾಗಿಸಿಕೊಂಡಿರುವ ಮುಖಂಡರು: ವಿವಿಧ ಪಕ್ಷಗಳ ಮುಖಂಡರು ನಗರಸಭೆ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರು ಹಾವು ಮುಂಗುಸಿಯಂತೆ ಸೆಣಸಾಡಲು ಸಿದ್ಧರಾಗಿದ್ದಾರೆ. ಏನಾದರೂ ಮಾಡಿ ಈ ಬಾರಿ ನಗರಸಭೆ ಆಡಳಿತವನ್ನು ನಾವೇ ಹಿಡಿಯಬೇಕು ಎನ್ನುವ ನಿಟ್ಟಿನಲ್ಲಿ ಎರಡೂ ಪಕ್ಷಗಳ ಮುಖಂಡರು ಲೆಕ್ಕಾಚಾರ ಹಾಕುತ್ತಿದ್ದು, ಅದರಂತೆ ಅಭ್ಯರ್ಥಿಗಳ ಆಯ್ಕೆಯಲ್ಲೂ ಕಟ್ಟೆಚ್ಚರ ವಹಿಸಿದ್ದಾರೆ.

ಅಂತಿಮವಾಗದ ಅಭ್ಯರ್ಥಿಗಳ ಪಟ್ಟಿ: ನಗರಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿ ಆಕಾಂಕ್ಷಿಗಳ ಪಟ್ಟಿ ಮಾಡಿದೆ. ಜೆಡಿಎಸ್ ಬುಧವಾರ ಸಭೆ ಸೇರುವ ಸಾಧ್ಯತೆಯಿದ್ದು, ನಗರದ ವಿವಿಧ ವಾರ್ಡ್​ಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಇನ್ನು ಈಗಾಗಲೇ ತಾವೇ ಅಭ್ಯರ್ಥಿ ಎಂದು ಖಚಿತವಾಗಿರುವ ಕೆಲವರು ವಾರ್ಡ್​ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಅಧಿಕೃತ ಅಭ್ಯರ್ಥಿಗಳು ಯಾರು ಎನ್ನುವುದನ್ನು ತಿಳಿದುಕೊಳ್ಳಲು ಮೇ 16ರ ಸಂಜೆಯವರೆಗೂ ಕಾಯಬೇಕಾಗಿದೆ.