ಬಿ.ಕೆ. ಪವಿತ್ರಾ ಪ್ರಕರಣ vs ಮೀಸಲಾತಿ

|ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು

ರಾಜ್ಯ ಸರ್ಕಾರವು 1978ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ರಾಜ್ಯ ಸೇವೆಯಲ್ಲಿ ಪ್ರಾತಿನಿಧ್ಯದ ಕೊರತೆ ಹಿನ್ನೆಲೆಯಲ್ಲಿ ದಿನಾಂಕ 27.4.1978ರಲ್ಲಿ ಕಾರ್ಯಕಾರಿ ಆದೇಶ (ಡಿಪಿಎಆರ್ 29, ಎಸ್​ಬಿಸಿ 77)ದಲ್ಲಿ ಶೇ.15 ಪರಿಶಿಷ್ಟ ಜಾತಿಯವರಿಗೆ ಮತ್ತು ಶೇ.30ರಷ್ಟು ಪರಿಶಿಷ್ಟ ಪಂಗಡದವರಿಗೆ ಪದೋನ್ನತಿಗೆ ಅವಕಾಶ ಕಲ್ಪಿಸಿತು. ಈ ಹಿನ್ನೆಲೆಯಲ್ಲಿ ಅಂದಿನಿಂದ ಈ ಮೀಸಲಾತಿ ಪ್ರಮಾಣಕ್ಕೂ ಮೀರಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರು ಪದೋನ್ನತಿಯನ್ನು ಪಡೆದು ಅನೇಕರು ನಿವೃತ್ತರಾದರು. ಮತ್ತೆ ಕೆಲವರು ಸೇವೆಯಲ್ಲಿ ಮುಂದುವರಿದರು. ಇದರಿಂದಾಗಿ ಇತರೆ ಸಾಮಾನ್ಯ ವರ್ಗದ ನೌಕರರು ಸೇವಾ ಅವಧಿಯಲ್ಲಿ ಒಂದೂ ಪದೋನ್ನತಿಯಿಲ್ಲದೆ ಹಾಗೆಯೇ ನಿವೃತ್ತರಾದರು. ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು 2,3 ಪದೋನ್ನತಿಯ ಅವಕಾಶಗಳನ್ನು ಪಡೆದು ನಿವೃತ್ತರಾಗಿರುತ್ತಾರೆ. ಹಾಗೂ ಮತ್ತೆ ಸೇವೆಯಲ್ಲಿ ಮುಂದುವರಿದಿರುತ್ತಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಸೇವೆಗೆ ಸೇರಿದವನು ಅಧೀಕ್ಷಕ ಇಂಜಿನಿಯರ್​ವರೆಗೂ ಈ ಮೀಸಲಾತಿ ಪಂಗಡದವರು ಪದೋನ್ನತಿ ಪಡೆದಿದ್ದಾರೆ. ಅದೇ ರೀತಿಯಾಗಿ ಸಚಿವಾಲಯದಲ್ಲಿ ‘ಡಿ’ ಗುಂಪಿನ ನೌಕರನಾಗಿ ಸೇವೆಗೆ ಸೇರಿದ ಮೀಸಲಾತಿ ವರ್ಗದವರು ಉಪಕಾರ್ಯಯಾಗಿ ನಿವೃತ್ತರಾಗಿರುತ್ತಾರೆ. ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿವರೆಗೂ ಈ ಪದೋನ್ನತಿ ಅವಕಾಶ ಇದೆ. ಅಲ್ಲದೆ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಪೇದೆಯಾಗಿ ಸೇವೆಗೆ ಸೇರಿದವನು ಡಿವೈಎಸ್​ಪಿ ಹುದ್ದೆಯಲ್ಲಿ ಮೀಸಲಾತಿ ವರ್ಗದವನು ನಿವೃತ್ತನಾಗಿರುತ್ತಾನೆ. ಇದನ್ನು ಪ್ರಶ್ನಿಸಿ ಸರ್ವೇಚ್ಛ ನ್ಯಾಯಾಲಯದಲ್ಲಿ ಎಂ.ಜಿ. ಬಾಡಪ್ಪನವರ್ ಮತ್ತು ಮತ್ತೊಬ್ಬರ ವಿರುದ್ಧ ಕರ್ನಾಟಕ ರಾಜ್ಯ ಸಿವಿಲ್ ಅಪೀಲು ಸಂಖ್ಯೆ 6970-6971/2000ದಲ್ಲಿ ಮೀಸಲಾತಿವರ್ಗದವರ ತತ್ಪರಿಣಾಮದ ಜ್ಯೇಷ್ಠತೆ ರದ್ದುಗೊಳಿಸಲು ಸೂಚಿಸಲಾಯಿತು. ಅಂತೆಯೇ ಇದನ್ನು ಮನಗಂಡು 2002ರಲ್ಲಿ ರಾಜ್ಯ ಸರ್ಕಾರವು ಮೀಸಲಾತಿ ಹೊಂದಿದ ಸರ್ಕಾರಿ ನೌಕರರ ಜ್ಯೇಷ್ಠತೆ ನಿರ್ಧಾರಣೆ ಅಧಿನಿಯಮ 2002ರನ್ನು ಅನುಷ್ಠಾನಗೊಳಿಸಿತು. ಇದನ್ನು ಪ್ರಶ್ನಿಸಿ ಬಿ.ಕೆ. ಪವಿತ್ರಾ ಮತ್ತು ಇತರರು ಡಠ ಯೂನಿಯನ್ ಆಫ್ ಇಂಡಿಯಾ ಮೇರೆಗೆ 2011ರ ಅಪೀಲು ಸಂಖ್ಯೆ 2368ರಲ್ಲಿ ಸುಮಾರು 6 ವರ್ಷಗಳ ಕಾಲ ಸರ್ವೇಚ್ಛ ನ್ಯಾಯಾಲಯ ವಿಚಾರಣೆ ನಡೆಸಿ 2002ರ ಅಧಿನಿಯಮದ ಪ್ರಕರಣ ಸಂಖ್ಯೆ 3 ಮತ್ತು 4ನ್ನು ಅಸಿಂಧುಗೊಳಿಸಿತು. ಈ ಪರಿಣಾಮವಾಗಿ ಸರ್ಕಾರವು ತಾನು ಈ ಮೀಸಲಾತಿ ವರ್ಗದವರ ತತ್ಪರಿಣಾಮದ ಜ್ಯೇಷ್ಠತೆ ಸಂರಕ್ಷಿಸಲು 2017ರ ‘ಕರ್ನಾಟಕ ರಾಜ್ಯದ (ಸಿವಿಲ್ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆ ವಿಸ್ತರಿಸುವ ಅಧಿನಿಯಮ 2017ನ್ನು ರಚಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತು. ಸನ್ಮಾನ್ಯ ರಾಜ್ಯಪಾಲರು ಅದನ್ನು ತಿರಸ್ಕರಿಸಿದ ಕಾರಣ ರಾಷ್ಟ್ರಪತಿಗೆ ಕಳುಹಿಸಲಾಗಿದೆ. ದಿನಾಂಕ 14.6.2018ರಂದು ಅದು ಅನುಮತಿ ಪಡೆಯಿತು. ಈ ಅನುಮತಿ ಪಡೆದ ನಂತರ ಕರ್ನಾಟಕ ಸರ್ಕಾರವು ಅಧಿಸೂಚನೆ ಸಂಖ್ಯೆ ಸಂವ್ಯಶಾಇ. 44, ಶಾಸನ 2017 ದಿನಾಂಕ 23.6.2018ರಂದು ಅಧಿನಿಯಮ ಜಾರಿಗೊಳಿಸಲು ಕ್ರಮಕೈಗೊಂಡಿತು. (ಅಧಿನಿಯಮ ಸಂಖ್ಯೆ 2018ರ ಕರ್ನಾಟಕ ಅಧಿನಿಯಮ ಸಂಖ್ಯೆ 21)

ದಿನಾಂಕ 9.2.2017ರಲ್ಲಿ ಸರ್ವೇಚ್ಛ ನ್ಯಾಯಾಲಯವು ಬಿ.ಕೆ. ಪವಿತ್ರ ಪ್ರಕರಣದಲ್ಲಿ ತತ್ಪರಿಣಾಮದ ಜ್ಯೇಷ್ಠತೆಯನ್ನು ಇತರ ಸಾಮಾನ್ಯ ವರ್ಗದವರಿಗೆ ಪದೋನ್ನತಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲು ಆದೇಶ ನೀಡಿದ್ದರೂ ಸರ್ವೇಚ್ಛ ನ್ಯಾಯಾಲಯ ನೀಡಿದ ಆದೇಶ ಜಾರಿಯಲ್ಲಿರುವಾಗ ಮತ್ತೊಂದು ಅಧಿನಿಯಮವನ್ನು ಅನುಷ್ಠಾನಗೊಳಿಸುವುದು ತಪ್ಪೆಂದು ತಿಳಿಸಿದ್ದಾಗ್ಯೂ ಸಹ (ಸಿವಿಲ್ ಅಪೀಲು ಸಂಖ್ಯೆ 2874-2878/2018ರಲ್ಲಿ) ಲೇವಾದೇವಿದಾರರ ಅಧಿನಿಯಮದ ವಿಷಯದಲ್ಲಿ ಸೂಚನೆ ನೀಡಿದ್ದರೂ ಮತ್ತೆ ಹೊಸ ಅಧಿನಿಯಮ ಜಾರಿಗೊಳಿಸಲು ಹೊರಟಿರುವುದು ಸ್ವಾಭಾವಿಕ ನ್ಯಾಯವಲ್ಲ.

ಏತನ್ಮದ್ಯೆ ದಿನಾಂಕ 27.7.2018ರಂದು ಸರ್ವೇಚ್ಛ ನ್ಯಾಯಾಲಯವು 2017ರ ಅಧಿನಿಯಮವನ್ನು ಜಾರಿಗೆ ತಾರದೆ ಯಥಾಸ್ಥಿತಿ ಕಾಪಾಡಲು ಸೂಚಿಸಿ, ದಿನಾಂಕ 14.8.2018ಕ್ಕೆ ನ್ಯಾಯಾಲಯ ನಿಂದನಾ ಪ್ರಕರಣವನ್ನು ಮುಂದೂಡಿದೆ. ಹೀಗಾಗಿದ್ದರೂ ಪೊಲೀಸ್ ಇಲಾಖೆಯಲ್ಲಿ ಹಿಂಬಡ್ತಿ ಹೊಂದಿದ ಮೀಸಲಾತಿ ವರ್ಗದವರನ್ನು ಮುಂಬಡ್ತಿಗೊಳಿಸಿ ಆದೇಶಿಸಿರುವುದು ಮತ್ತೊಂದು ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಸರ್ವೇಚ್ಛ ನ್ಯಾಯಾಲಯದ ಬಿ.ಕೆ. ಪವಿತ್ರ ಪ್ರಕರಣದ ಅಡಿಯಲ್ಲಿ ತತ್ಪರಿಣಾಮದ ಜ್ಯೇಷ್ಠತೆ ಸಿದ್ಧಪಡಿಸಿ ಪದೋನ್ನತಿ ನೀಡಲು ಯಾವುದೇ ತಡೆಯಾಜ್ಞೆ ಇರುವುದಿಲ್ಲ. 27.7.2018ರಂದು ಬಿ.ಕೆ. ಪವಿತ್ರ ಪ್ರಕರಣದ ಪರವಾಗಿ ಸುಮಾರು 58 ಜನ ಹಿರಿಯ ವಕೀಲರು ವಾದ ಮಾಡಿದ್ದರ ಹಿನ್ನೆಲೆಯಲ್ಲಿ 2017ರ ಅಧಿನಿಯಮಕ್ಕೆ ತಾತ್ಕಾಲಿಕ ತಡೆಯಾಜ್ಞೆ ದೊರಕಿದಂತಾಗಿದೆ. ಉದ್ದೇಶಪೂರ್ವಕವಾಗಿಯೇ ಸರ್ಕಾರದ ಮುಖ್ಯಕಾರ್ಯದರ್ಶಿಯವರು ಜುಲೈ ಆರಂಭದಲ್ಲಿ ಸರ್ವೇಚ್ಛ ನ್ಯಾಯಾಲಯಕ್ಕೆ ಶಾಸನಸಭೆಯಿಂದ ಅನುಮೋದನೆಗೊಂಡು ರಾಷ್ಟ್ರಪತಿಯಿಂದ ಸಹಿ ಆಗಿರುವ ತತ್ಪರಿಣಾಮದ ಜ್ಯೇಷ್ಠತೆಯನ್ನು ರಕ್ಷಿಸುವ ಹೊಸ ಕಾನೂನು ಅನುಷ್ಠಾನಕ್ಕೆ ತರಬೇಕೇ ಅಥವಾ 2017ರ ಪೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ಬಿ.ಕೆ. ಪವಿತ್ರ ಪ್ರಕರಣದ ತೀರ್ಪು ಅನುಷ್ಠಾನ ಮಾಡಬೇಕೆ ಎಂಬ ಬಗ್ಗೆ ಮಾರ್ಗದರ್ಶನ ಕೋರಿದ್ದರು. ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯವಿದ್ದು ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವುದು ಬಹಿರಂಗವಾಗಿದೆ. 2017ರ ಬಿ.ಕೆ. ಪವಿತ್ರಾ ಪ್ರಕರಣದ ತೀರ್ಪಿಗೆ ಜೆಡಿಎಸ್ ಒಲವಿದ್ದರೆ, ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕಿನ ಉದ್ದೇಶಕ್ಕಾಗಿ 2017ರ ಜ್ಯೇಷ್ಠತಾ ನಿಯಮದ ಜಾರಿಗೆ ಒಲವನ್ನು ವ್ಯಕ್ತಪಡಿಸಿದ್ದು ಸರ್ಕಾರಿ ಯಂತ್ರವು ಕಲುಷಿತಗೊಳ್ಳಲು ಕಾರಣವಾಗುತ್ತಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಯಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ಬಡ್ತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಂದರೆ ಕೆಲವು ನ್ಯಾಯಾಲಯಗಳು 2017ರ ಅಧಿನಿಯಮದಲ್ಲಿ ಆದೇಶ ಹೊರಡಿಸಿದ್ದರೆ, ತೋಟಗಾರಿಕೆ, ಅರಣ್ಯ ಇಲಾಖೆಗಳಲ್ಲಿ ಸಹ ಈ ಬಗ್ಗೆ ಕ್ರಮ ಕೈಗೊಂಡಿವೆ. ಪ್ರಸ್ತುತ ಯಾವುದೇ ಹಿಂಬಡ್ತಿ-ಮುಂಬಡ್ತಿ ಇಲ್ಲದೆ ಅನೇಕ ಸರ್ಕಾರಿ ನೌಕರರು ಹಾಗೆಯೇ ನಿವೃತ್ತರಾಗುತ್ತಿದ್ದಾರೆ. ಹಾಗೂ ಅನೇಕ ಮೀಸಲಾತಿ ವರ್ಗದ ನೌಕರರು ಗೊಂದಲಕ್ಕೀಡಾಗಿದ್ದಾರೆ. ಒಟ್ಟಿನಲ್ಲಿ ಪ್ರಕರಣ ಸರ್ವೇಚ್ಛ ನ್ಯಾಯಾಲಯದ ಮುಂದೆ ಇದ್ದು 2017ರ ಅಧಿನಿಯಮ 2002ರ ಅಧಿನಿಯಮದ ಯಥಾವತ್ತಾದ ಪ್ರಾರೋಪಣೆಯಾಗಿದ್ದು ಸರ್ವೇಚ್ಛ ನ್ಯಾಯಾಲಯ ರದ್ದುಗೊಳಿಸುವುದರಲ್ಲಿ ಸಂಶಯವಿಲ್ಲ.

(ಮುಂದುವರಿಯುವುದು)

Leave a Reply

Your email address will not be published. Required fields are marked *