ಬಿಸಿಲೇರುತ್ತಿದ್ದಂತೆ ನೀರಿನ ಬಿಸಿ!

ಅವಿನ್ ಶೆಟ್ಟಿ ಉಡುಪಿ

ಬೇಸಿಗೆ ಬಿಸಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನೀರಿನ ಬಿಸಿ ತಟ್ಟುತ್ತಿದೆ. ಕಡೆಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಹೊಳೆ ತೀರದ ಜನರು ಕುಡಿಯುವ ನೀರಿನ ಬವಣೆ ಎದುರಿಸುತಿದ್ದಾರೆ. ಪರಿಣಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 500 ಮನೆಗಳು ಎರಡು ದಿನಕ್ಕೊಮ್ಮೆ ನೀರು ಪಡೆಯುತ್ತಿವೆ. ಪ್ರತಿವರ್ಷ ಮಾರ್ಚ್ ತಿಂಗಳಾಂತ್ಯದ ಬೇಸಿಗೆಯಲ್ಲಿ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪುನರಾವರ್ತನೆಯಾಗುತ್ತದೆ.

ಎಲ್ಲೆಲ್ಲಿ ನೀರಿನ ಅಭಾವ: ಕಡೆಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುತ್ಪಾಡಿ ಗ್ರಾಮದ ಪಡುಕರೆ, ಬಬ್ಬರ್ಯಗುಡ್ಡೆ, ಸಸಿತೋಟ, ಅನಂತಕೃಷ್ಣ ನಗರ, ಕನ್ನರ್ಪಾಡಿ ಬಳಿಯ ಎಸ್ಸಿ ಕಾಲನಿ, ಗರೋಡಿ ರಸ್ತೆ ಮಜಲು, ಲಯನ್ಸ್ ಕಾಲನಿಯಲ್ಲಿ ನೀರಿನ ಅಭಾವ ಎದುರಾಗಿದೆ. ಕುತ್ಪಾಡಿ ಸಸಿ ತೋಟದಲ್ಲಿ ಫೆಬ್ರವರಿ ತಿಂಗಳಲ್ಲೇ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕಡೆಕಾರು ಮಜಲು ಭಾಗದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ. ಕಡೆಕಾರು, ಕುತ್ಪಾಡಿ ಭಾಗದಲ್ಲಿ 500 ಮನೆಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಬರುವುದು ಮಾಮೂಲಾಗಿದೆ. ಇದರಿಂದ ಹೆಚ್ಚು ಜನರಿರುವ ಮನೆಗಳಲ್ಲಿ ಸಮಸ್ಯೆ ಹೆಚ್ಚಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಜನ ಮನವಿ ಮಾಡಿದ್ದಾರೆ. ನಳ್ಳಿ ಸಂಪರ್ಕ ಹೊಂದಿದ ಕೆಲವು ಮನೆಯವರು ತಮ್ಮ ತೋಟಗಳಿಗೂ ಬಳಸಿಕೊಂಡು ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

20 ಮನೆಗಳಿಗೆ ಪಂಪ್ ಸಂಪರ್ಕ: ಕಡೆಕಾರು ಮಜಲು ವ್ಯಾಪ್ತಿಯಲ್ಲಿ 20 ಮನೆಗಳಿಗೆ ನಳ್ಳಿಗೆ ನೇರವಾಗಿ ಪಂಚಾಯಿತಿ ನೀರು ಪೂರೈಕೆ ಮಾಡುವ ಪಂಪ್ ಮೂಲಕ ವ್ಯವಸ್ಥೆ ಮಾಡಿರುವುದು ಅನುಕೂಲವಾಗಿದೆ. ಎರಡು ಸರ್ಕಾರಿ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಅನುದಾನ ಐದು ಲಕ್ಷ ರೂ., ವೆಚ್ಚದಲ್ಲಿ ನೀರು ಶುದ್ಧಿಕರಣ ಘಟಕ ಸ್ಥಾಪನೆ ಮಾಡಲಾಗಿದೆ. ಒಂದು ಬಾವಿಯ ನೀರು ಪಾಚಿ ವಾಸನೆ ಬರುತ್ತಿರುವುದರಿಂದ ಒಂದರ ನೀರು ಮಾತ್ರ ಬಳಕೆ ಮಾಡಲಾಗುತ್ತಿದೆ. ದೇವರಕೆರೆಯ ಬಳಿ ಕೊಳವೆ ಬಾವಿ ನಿರ್ಮಿಸಿದ್ದು, ಇದರಲ್ಲಿ ಉಪ್ಪು ನೀರು ಬಂದ ಹಿನ್ನೆಲೆಯಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಳು ಸರ್ಕಾರಿ ಬಾವಿಯಿದ್ದು, ನಾಲ್ಕು ಬೋರ್‌ವೆಲ್, ನಾಲ್ಕು ಓವರ್‌ಹೆಡ್ ಟ್ಯಾಂಕ್, ನಾಲ್ಕು ನಿರುಪಯುಕ್ತ ಬಾವಿ ಇದೆ.

ಒಂದೆಡೆ ಉಪ್ಪು ನೀರು, ಇನ್ನೊಂದೆಡೆ ಬೇಸಿಗೆಯಲ್ಲಿ ಅಂತರ್ಜಲ ಕುಸಿತ ಪ್ರಾಕೃತಿಕವಾಗಿಯೇ ನಮಗೆ ಸಾಕಷ್ಟು ಸವಾಲು ಎದುರಾಗಿದೆ. ಗ್ರಾಮದ ನೀರಿನ ಸಮಸ್ಯೆ ನಿವಾರಿಸಲು ಹಲವು ಯೋಜನೆ ರೂಪಿಸಲಾಗುತ್ತಿದೆ. ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಹೊಸ ಬಾವಿ ನಿರ್ಮಾಣ ಮಾಡಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಪಂ ವ್ಯಾಪ್ತಿಯ 500 ಮನೆಗಳಿಗೆ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಶೀಘ್ರ ಎರಡು ಟ್ಯಾಂಕರ್‌ಗಳ ಮೂಲಕ ನೀರಿನ ಸಮಸ್ಯೆ ಇರುವ ಭಾಗಕ್ಕೆ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು.
ರಘುನಾಥ್ ಕೋಟ್ಯಾನ್ ಕಡೆಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ