ಬಿಸಿಲಿನ ತಾಪಕ್ಕೆ ಒಣಗುತ್ತಿದೆ ಅಡಕೆ

ಶಶಿಧರ ಕುಲಕರ್ಣಿ ಮುಂಡಗೋಡ
ತಾಲೂಕಿನಲ್ಲಿ ಸುಮಾರು 1400 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದ್ದು, ಹವಾಮಾನ ವೈಪರೀತ್ಯ ಮತ್ತು ತೇವಾಂಶದ ಕೊರತೆಯಿಂದಾಗಿ ಬೆಳೆ ಒಣಗುತ್ತಿದೆ. ಅಡಕೆ ಗರಿಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತಿವೆ ಮತ್ತು ಸಿಂಗಾರ ಉದುರುತ್ತಿದೆ.

ಕಳೆದ ವರ್ಷ ಮಳೆ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟ ಅನುಭವಿಸಿದ್ದರು. ಈ ವರ್ಷ ಅಂತರ್ಜಲ ಕುಸಿತದಿಂದಾಗಿ ಅಡಕೆ ಗಿಡಗಳು ಒಣಗುತ್ತಿವೆ. ಕೊಳವೆ ಬಾವಿಗಳಲ್ಲಿನ ನೀರು ಕಡಿಮೆಯಾಗಿದೆ. ಅಲ್ಪ ಸ್ವಲ್ಪ ನೀರುಣಿಸಿದರೂ ಇತ್ತೀಚಿನ ದಿನಗಳಲ್ಲಿ ಅತ್ಯಧಿಕವಾಗಿರುವ ಬಿಸಿಲಿನ ತಾಪಕ್ಕೆ ಗರಿಗಳು ಒಣಗುತ್ತಿವೆ. ಇದರಿಂದಾಗಿ ರೈತರಿಗೆ ದಿಕ್ಕೇ ತೋಚದಂತಾಗಿದೆ. ಮಾನ್ಸೂನ್ ಆರಂಭಕ್ಕೆ ಇನ್ನೂ ಒಂದೂವರೆ ತಿಂಗಳು ಇದೆ. ಹೀಗಾಗಿ, ಬಿಸಿಲಿನ ಝುಳ ಮುಂದಿನ ಫಸಲಿನ ಮೇಲೆ ತೀವ್ರ ತರಹದ ಪರಿಣಾಮ ಬೀರುವ ಸಾಧ್ಯತೆ ಇದೆ. ಹಸಿರಿನಿಂದ ಕಂಗೊಳಿಸಬೇಕಿದ್ದ ತೋಟಗಳು ಈಗ ಒಣಗಿ ಹಳದಿಯಾಗುತ್ತಿವೆ. ನೆಲ ಬಿರುಕು ಬಿಟ್ಟಿದೆ. ತಾಲೂಕಿನ ಗುಂಜಾವತಿ, ಕ್ಯಾಸನಕೇರಿ, ಚವಡಳ್ಳಿ, ಇಂದೂರ, ಕೊಪ್ಪ, ಮೈನಳ್ಳಿ ಸೇರಿ ಕೆಲವು ಭಾಗಗಳಲ್ಲಿ ತೊಟಗಾರಿಕೆ ಬೆಳೆಗಳು ಒಣಗಿವೆ. ತೋಟದಲ್ಲಿರುವ ಬೋರ್​ವೆಲ್ ನೀರು ಸಹ ಪಾತಾಳಕ್ಕಿಳಿದಿದೆ. ನೀರಿನ ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ ರೈತರನ್ನು ಚಿಂತೆಗೀಡು ಮಾಡಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪ ರೈತರನ್ನು ಅಸಹಾಯಕರನ್ನಾಗಿಸಿದೆ.

ಬಿಸಿಲಿನ ತಾಪಮಾನ ಹೆಚ್ಚಳ: ಈ ವರ್ಷ ಹೆಚ್ಚು ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಸಾಮಾನ್ಯವಾಗಿ 30-32 ಡಿಗ್ರಿ ಸೆಲ್ಸಿಯಸ್ ತಾಪಮಾನ ಅಡಕೆಗೆ ಸೂಕ್ತ ಹವಾಮಾನ. ಆದರೆ, ಈ ಬಾರಿ 42 ಡಿಗ್ರಿ ಸೆಲ್ಸಿಯಸ್​ವರೆಗೂ ಹೆಚ್ಚಾಗಿರುವುದು ಅಡಕೆ ಬೆಳೆಗೆ ಪ್ರತಿಕೂಲ ವಾತಾವರಣವಾಗಿದೆ. ಇದರಿಂದಾಗಿ ಪಶ್ಚಿಮ ದಿಕ್ಕಿನ ಗಿಡಗಳಿಗೆ ಹೆಚ್ಚು ತೊಂದರೆಯಾಗಲಿದೆ. ಗಿಡಗಳ ಕಾಂಡಗಳಿಗೆ ನೆರಳು ಮಾಡಿ ನೀರು ಒದಗಿಸಿದರೆ ಮರಗಳನ್ನು ರಕ್ಷಿಸುವುದರ ಜತೆಗೆ ಉತ್ತಮ ಫಸಲನ್ನು ಪಡೆಯಬಹುದೆಂದು ತೋಟಗಾರಿಕೆ ಅಧಿಕಾರಿಗಳು ಸಲಹೆ ನೀಡುತ್ತಾರೆ.

ಪರ್ಯಾಯ ಬೆಳೆಯತ್ತ ಚಿತ್ತ: ಮಳೆಗಾಲ ಇದೇ ರೀತಿ ಸಾಗಿದರೆ ಖರ್ಚಿನ ಬೆಳೆಯಾದ ಅಡಕೆ ಬೆಳೆಯನ್ನು ಬಿಟ್ಟು, ಬೇರೆ ಬೆಳೆಗಳಾದ ಶ್ರೀಗಂಧ, ಚಿಕ್ಕು, ಗೋಡಂಬಿ, ಮಾವು, ಸೀತಾಫಲ, ಬೆಟ್ಟದ ನೆಲ್ಲಿಕಾಯಿ, ಮೋಸಂಬಿ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂಬ ಮಾತು ತಾಲೂಕಿನ ಹಲವು ರೈತರಿಂದ ಕೇಳಿ ಬರುತ್ತಿದೆ.

ಕಳೆದ ವರ್ಷ ಅಡಕೆ ಬೆಳೆ ಚೆನ್ನಾಗಿತ್ತು. ನೀರಿಲ್ಲದೆ ಮತ್ತು ಬಿಸಿಲಿನ ತಾಪಕ್ಕೆ ಈಗಾಗಲೇ ಶೇ. 80ರಷ್ಟು ಬೆಳೆ ಒಣಗಿ ಅಡಕೆ ಸಿಂಗಾರ ಉದುರುತ್ತಿದೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ಉಳಿದ ಬೆಳೆಯೂ ಕೈಗೆ ಸಿಗುವುದಿಲ್ಲ. ನನ್ನ 32 ವರ್ಷಗಳ ಬೇಸಾಯದ ಅನುಭವದಲ್ಲಿ ಇದೇ ಮೊದಲ ಬಾರಿ ನೀರಿನ ಬರದಿಂದ ಮತ್ತು ವಿಪರೀತ ಬಿಸಿಲಿನ ತಾಪದಿಂದ ಬೆಳೆ ಹಾನಿಯಾಗಿದ್ದನ್ನು ನೋಡುತ್ತಿದ್ದೇನೆ.
| ನಿಂಗಪ್ಪ ಗಂಜಿಗಟ್ಟಿ ಕ್ಯಾಸನಕೇರಿಯ ಅಡಕೆ ಬೆಳೆಗಾರ

Leave a Reply

Your email address will not be published. Required fields are marked *