ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ತಂಪೆರೆದ ಮಳೆ

ಅಕ್ಕಿಆಲೂರ: ಬಿರು ಬಿಸಿಲಿನಿಂದ ತತ್ತರಿಸಿದ್ದ ಪಟ್ಟಣದ ಜನತೆಗೆ ಮಂಗಳವಾರ ಸುರಿದ ಧಾರಾಕಾರ ಮಳೆ ತಂಪೆರೆಯಿತು.

ಬೆಳಗ್ಗೆ 10 ಗಂಟೆ ನಂತರ ಬಿಸಿಲಿನಿಂದ ಕೂಡಿದ್ದ ವಾತಾವರಣ ಸಂಜೆಯಾಗುತ್ತಿದ್ದಂತೆ ಮೋಡ ಕವಿದು ಏಕಾಏಕಿ ಮಳೆ ಸುರಿಯಲು ಆರಂಬಿಸಿತು. 30 ನಿಮಿಷ ಆಲಿಕಲ್ಲು ಸಹಿತ ಸುರಿದ ಮಳೆಗೆ ವಾರದ ಸಾಲುಸಂತೆಗೆ ಆಗಮಿಸಿದ ವ್ಯಾಪಾರಸ್ಥರು, ಗ್ರಾಹಕರು ಪರದಾಡಬೇಕಾಯಿತು.

ಹೊಸ್ ಬಸ್ ನಿಲ್ದಾಣದ ಹತ್ತಿರ ಶಿರಸಿ ಹಾವೇರಿ ರಸ್ತೆಯಲ್ಲಿ ನೀರು ಸಂಗ್ರಹವಾಗಿ ಸವಾರರು ಸಂಕಷ್ಟ ಪಡಬೇಕಾಯಿತು. ಬಸ್ ನಿಲ್ದಾಣದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚರಂಡಿ ನೀರು ಹರಿದು ಗಬ್ಬು ವಾಸನೆ ಹಬ್ಬಿತು.

ಕೃಷಿ ಚಟುವಟಿಕೆಗೆ ನಾಂದಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆಗೆ ಯುಗಾದಿಯಂದು ಭೂಮಿ ಪೂಜೆ ನೆರವೇರಿಸಿದ್ದ ರೈತರಿಗೆ ಮಂಗಳವಾರ ಮೊದಲ ಮಳೆ ಸುರಿದಿದ್ದರಿಂದ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.