ಬಿಸಿಲಿಗೆ ಬೆಂದುಹೋಗುತ್ತಿದ್ದಾರೆ ಜನ

ಗದಗ: ಬರಗಾಲ, ಒಣಹವೆಯೊಂದಿಗೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲಾದ್ಯಂತ ಬಿಸಿಲು ಧಗಧಗ ಎನ್ನುತ್ತಿದೆ. ಭೂಮಿಯು ಕೆಂಡದಂತಾಗಿ ಮುಖಕ್ಕೆ ಬಿಸಿ ಗಾಳಿ ರಾಚುತ್ತಿದ್ದು, ಎದೆಯುಸಿರು ಬಿಗಿಹಿಡಿಯುವಂತಾಗಿದೆ. ಜಿಲ್ಲೆಯಲ್ಲಿ ಗುರುವಾರ (ಏ. 25) 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಳೆದ ಎಂಟು ದಶಕಗಳ ಹಿಂದೆ ದಾಖಲಾಗಿದ್ದ ಗರಿಷ್ಠ 41.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವೇ ಹೆಚ್ಚು. ಈ ಬಾರಿ ಅದನ್ನು ಮೀರುವ ಹಂತ ತಲುಪಿದೆ.

1941ರ ಏ. 23ರಂದು ದಾಖಲಾದ 41.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸಾರ್ವಕಾಲಿಕ ದಾಖಲೆಯಾಗಿತ್ತು. ನಂತರ 2009ರ ಏ. 19ರಂದು 40, 2010ಎ ಏ. 13ರಂದು 40.2 ಹಾಗೂ 2016ರ ಏ. 27ರಂದು 40.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿ 40ರ ಗಡಿ ದಾಟಿತ್ತು. ಕಳೆದೊಂದು ವಾರದಿಂದ 38, 38.9, 39 ಮತ್ತು 39.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆದರೆ, ಗುರುವಾರ (ಏ. 25ರಂದು) 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಒಂದು ವಾರದಿಂದ ವಾತಾವರಣದಲ್ಲಿ ನಿತ್ಯ ಬದಲಾವಣೆಯಾಗುತ್ತಿದ್ದು, ಬಿಸಿಲಿನ ಝುಳ ವಿಪರೀತವಾಗುತ್ತಿದೆ. ಸೂರ್ಯನ ಪ್ರತಾಪಕ್ಕೆ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ 8ರಿಂದಲೇ ಸೂರ್ಯನ ಕಿರಣಗಳು ಭೂಮಿಯ ಮೇಲೆ ಪ್ರಖರವಾಗಿ ಬೀಳುತ್ತಿವೆ. ಸೂರ್ಯ ಯಾವಾಗ ಮುಳುಗುತ್ತಾನೆ ಎಂದು ಕಾದು ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ವಣವಾಗಿದೆ. ಬಿಸಿಲಿನ ಝುಳಕ್ಕೆ ಮುಖ ಉರಿತ ಕಂಡುಬರುತ್ತಿದೆ. ಸೆಕೆಗೆ ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ರೋಗಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಕಲ್ಲಂಗಡಿ, ಎಳೆನೀರು ದುಬಾರಿ: ಬಿಸಿಲಿನ ಝುಳಕ್ಕೆ ಕಂಗಾಲಾದ ಜನರು ಕಲ್ಲಂಗಡಿ, ಎಳನೀರು ಹಾಗೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ, ಕಲ್ಲಂಗಡಿ ಹಾಗೂ ಎಳನೀರಿನ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಜಿಲ್ಲೆ ಸೇರಿ ರಾಜ್ಯದಲ್ಲಿ ಬರಗಾಲ ಆವರಿಸಿದ್ದರಿಂದ ಪಕ್ಕದ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಕಲ್ಲಂಗಡಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಟನ್​ಗೆ 8 ಸಾವಿರ ರೂ. ಇದ್ದ ಕಲ್ಲಂಗಡಿ ಬೆಲೆ 15ರಿಂದ 16 ಸಾವಿರ ರೂ.ವರೆಗೆ ಇದೆ. ಗಾತ್ರದ ಆಧಾರದಲ್ಲಿ 100 ರೂ. ನಿಂದ 250 ರೂ.ವರೆಗೂ ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡಲಾಗುತ್ತಿದೆ. ಇನ್ನು, 20ರಿಂದ 25 ರೂ. ಗೆ ದೊರೆಯುತ್ತಿದ್ದ ಎಳನೀರು ಈಗ 30 ರೂ. ಗಡಿ ದಾಟಿದೆ.

ಹಳ್ಳಿಗಳಲ್ಲಿ ನೀರಿನ ಅಭಾವ:ಗದಗ-ಬೆಟಗೇರಿ ಅವಳಿ ನಗರದಲ್ಲಿ ಹಮ್ಮಿಗಿ ಬ್ಯಾರೇಜ್​ನಲ್ಲಿನ ಹಿನ್ನೀರನ್ನು ಪೂರೈಸಲಾಗುತ್ತಿದೆ. ಮೇ ಅಂತ್ಯದವರೆಗೆ ನೀರಿನ ಅಭಾವವಾಗುವುದಿಲ್ಲ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ. ಆದರೆ, ಗದಗ ತಾಲೂಕಿನ ಬಳಗಾನೂರ, ಹೊಂಬಳ, ಹಿರೇಕೊಪ್ಪ, ಗಜೇಂದ್ರಗಡ ತಾಲೂಕಿನ ಗಜೇಂದ್ರಗಡ, ನರೇಗಲ್, ಲಕ್ಕಲಕಟ್ಟಿ, ರಾಜೂರು, ಮುಶಿಗೇರಿ, ಶಾಂತಗೇರಿ, ಬೇವಿನಕಟ್ಟಿ, ಮುಂಡರಗಿ ತಾಲೂಕಿನ ಬದರೂರು, ಹೈತಾಪುರ, ಹಳ್ಳಿಗುಡಿ, ಲಕ್ಷ್ಮೇಶ್ವರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಬಹುತೇಕ ಗ್ರಾಮಗಳಲ್ಲಿನ ಕೊಳವೆಬಾವಿಗಳು ಬತ್ತಿವೆ. ಪೈಪ್​ಲೈನ್ ಮೂಲಕ 15-20ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ನೀರಿಗಾಗಿ ಸಾರ್ವಜನಿಕರು ಬಿಂದಿಗೆಗಳನ್ನು ಹಿಡಿದು ಸಾಲುಗಟ್ಟಿ ನಿಲ್ಲುವ ಅನಿವಾರ್ಯತೆ ಸೃಷ್ಟಿಯಾಗಿದೆ. ಬೆಳಗ್ಗೆಯಾದರೆ ಸಾಕು ನಲ್ಲಿ ಮುಂದೆ ಬಿಂದಿಗೆಗಳ ಸರದಿ ಸಾಲು ಕಾಣುವುದು ಸಾಮಾನ್ಯವಾಗಿದೆ.

ಬಿಸಿಲಿನ ಪ್ರತಾಪ ಹೆಚ್ಚಿದ್ದರಿಂದ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿಯೂ ಬಿಸಿ ಒಣಹವೆಯಿದ್ದು ಮನಸ್ಸು ಮತ್ತು ದೇಹಕ್ಕೆ ಗೆ ಕಿರಿಕಿರಿಯಾಗುತ್ತಿದೆ. ಮನೆಯಿಂದ ಹೊರನಡೆದರೆ ಸಾಕು ಮುಖ ಬೆಂಕಿಗೆ ಬೆಂದು ಹೋದಂತಾಗುತ್ತದೆ.
| ಸುರೇಶ ಭಾವಿಕಟ್ಟಿ, ನರಸಾಪೂರ ನಿವಾಸಿ

ಸೂರ್ಯನ ಪ್ರಖವಾರದ ಬಿಸಿಲಿಗೆ ಭೂಮಿಯು ಕೆಂಡದಂತಾಗಿದೆ. ಬಿಸಿ ಹವೆಯು ಬೀಸುತ್ತಿರುವುದರಿಂದ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಆದಷ್ಟು ಬೇಗ ಧರೆಗೆ ಮಳೆ ಸುರಿದು ತಂಪಿನ ವಾತಾವರಣ ಸೃಷ್ಟಿಯಾಗಬೇಕಿದೆ.
| ವಿನಯ ಸೊರಟೂರ, ಗದಗ ನಿವಾಸಿ

ವಾತಾವರಣದಲ್ಲಿ ತೇವಾಂಶ, ಜಲಮೂಲ ಕಡಿಮೆಯಾಗುವುದರಿಂದ ಅಧಿಕ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. ಮೇ ಎರಡನೇ ವಾರದಲ್ಲಿ ಉಷ್ಣಾಂಶ ಕಡಿಮೆಯಾಗುವ ಸಾಧ್ಯತೆಯಿದ್ದು, ಜೂನ್ 5ರ ನಂತರ ಮುಂಗಾರು ಪ್ರವೇಶ ಮಾಡಬಹುದು.
| ಡಾ. ರಾಜು ರೋಖಡೆ, ಉತ್ತರ ಕರ್ನಾಟಕ ಹವಾಮಾನ ಮತ್ತು ಸಂಶೋಧನಾ ಕೇಂದ್ರದ ಪ್ರಭಾರಿ ಅಧಿಕಾರಿ

Leave a Reply

Your email address will not be published. Required fields are marked *