ಬಿಸಿಲಲ್ಲಿ ಬೆಂದವರಿಗೆ, ಮಳೆಯಲ್ಲೂ ಸಂಕಷ್ಟ

ಅಂಕೋಲಾ: ಪಟ್ಟಣದ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದ್ದು, ಅಷ್ಟರೊಳಗೆ ಪೂರ್ಣಗೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.
ಹಳೇ ಬಸ್ ನಿಲ್ದಾಣ ತೆರವುಗೊಳಿಸಿದ್ದರಿಂದಾಗಿ ಪ್ರಯಾಣಿಕರು ಬಿಸಿಲಿನಲ್ಲಿಯೇ ನಿಲ್ಲುವಂತಾಗಿದ್ದು, ಜೊತೆಗೆ ಧೂಳಿನಿಂದ ಆವೃತವಾಗುವಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಅಧಿಕಾರಿ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
1 ಎಕರೆ, 29 ಗುಂಟೆ ವಿಸ್ತೀರ್ಣ ಹೊಂದಿರುವ ಅಂಕೋಲಾ ಬಸ್ ನಿಲ್ದಾಣ ಆವರಣದಲ್ಲಿ ಹೊಸ ಕಟ್ಟಡ ನಿರ್ವಣಕ್ಕಾಗಿ 4 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಇದನ್ನು ಕಾರವಾರದ ಸ್ವೀಟ್​ಹೋಮ್ ಕನ್ಸ್ಟ್ರಕ್ಷನ್ ಕಂಪನಿ ಗುತ್ತಿಗೆ ಪಡೆದು ಆರಂಭಿಕ ಶೂರತನ ಪ್ರದರ್ಶಿಸಿದ್ದರು. ಹೊಸ ಕಟ್ಟಡಕ್ಕೆ ಮೇಲ್ಛಾವಣಿ ಹಾಕುತ್ತಿದ್ದಂತೆಯೇ ಹಳೆಯ ಕಟ್ಟಡ ತೆರವುಗೊಳಿಸಿದ್ದರು. ಇದರಿಂದಾಗಿ ಯಾವ ಬಸ್ ಯಾವ ಭಾಗದಲ್ಲಿ ನಿಲ್ಲುತ್ತದೆ ಎಂಬುದು ತಿಳಿಯದೇ ಪ್ರಯಾಣಿಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಕಳೆದ 2 ತಿಂಗಳಿಂದ ಸುಡು ಬಿಸಿಲಿನಲ್ಲಿ ಬೆಂದಿದ್ದ ಪ್ರಯಾಣಿಕರು ಈಗ ಬಸ್​ಗಾಗಿ ಮಳೆಯಲ್ಲಿ ನೆನೆಯಬೇಕಾದ ಸ್ಥಿತಿ ಬಂದಿದೆ. ಪ್ರಯಾಣಿಕರ ಹಿತ ಕಾಪಾಡಲು ಸಾರಿಗೆ ಸಂಸ್ಥೆಯವರು ಇನ್ನಾದರೂ ಎಚ್ಚೆತ್ತುಕೊಳ್ಳುವ ಮೂಲಕ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಜವಾಬ್ದಾರಿ ತೋರಬೇಕಿದೆ.
“ಅಂಕೋಲಾದ ಹಳೇ ಬಸ್ ನಿಲ್ದಾಣ ಸುಸ್ಥಿತಿಯಲ್ಲಿತ್ತು. ಆದರೂ ಹೊಸ ಕಟ್ಟಡ ನಿರ್ವಣಕ್ಕೆ ಮುಂದಾದಾಗ ಯಾರೂ ತೊಡಕುಂಟುಮಾಡಿಲ್ಲ. ಹೀಗಿದ್ದರೂ ಗುತ್ತಿಗೆದಾರರು ಮತ್ತು ಸಾರಿಗೆ ಸಂಸ್ಥೆಯ ಅಧಿಕಾರಿಗಳು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಕಂಡುಬರುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ತಕ್ಷಣ ಕಾಮಗಾರಿ ಆರಂಭವಾಗದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ.”
| ಉಮೇಶ ಎನ್. ನಾಯ್ಕ ವಕೀಲರು
“ಅಂಕೋಲಾ ಬಸ್ ನಿಲ್ದಾಣವನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸುವುದಕ್ಕಾಗಿ ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದರು. ಅದರಂತೆ ಕಾಮಗಾರಿ ಆರಂಭಗೊಂಡಿತ್ತು. ಕಾರಣಾಂತರಗಳಿಂದ ಕೆಲಸ ನಿಲ್ಲುವಂತಾಗಿದ್ದು, ಗುತ್ತಿಗೆ ಅವಧಿ ಒಳಗೆ ಕಾಮಗಾರಿ ಮುಗಿಸಿ ಕೊಡಲಿದ್ದಾರೆ ಎಂಬ ನಂಬಿಕೆಯಿದೆ. ಪ್ರಯಾಣಿಕರಿಗೂ ಅನುಕೂಲ ಮಾಡಿಕೊಡಲಾಗುವುದು.”
| ಎ.ಎಸ್. ಆಡಳ್ಳಿಮಠ, ಘಟಕ ವ್ಯವಸ್ಥಾಪಕರು, ಅಂಕೋಲಾ

Leave a Reply

Your email address will not be published. Required fields are marked *