ಬಿಸಿಯೂಟ ತಯಾರಕರ ಸಮಸ್ಯೆ ಪರಿಹರಿಸಿ

ರಾಮನಗರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೆಷನ್ ಜಿಲ್ಲಾ ಸಮಿತಿ ಪದಾಧಿಕಾರಿಗಳು ಶನಿವಾರ ಕಂದಾಯ ಭನವದ ಬಳಿ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಪ್ರಶಾಂತ್​ಗೆ ಮನವಿ ಸಲ್ಲಿಸಿದರು.

ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮುಖ್ಯ ಅಡುಗೆ ಹಾಗೂ ಸಹಾಯಕರಾಗಿ 16 ವರ್ಷಗಳಿಂದ 1.18 ಲಕ್ಷ ಮಹಿಳೆಯರು ದುಡಿಯುತ್ತಿದ್ದಾರೆ. ಆದರೆ ಅವರಿಗೆ ಸೇವಾ ಭದ್ರತೆ, ನಿವೃತ್ತಿ ವೇತನ ಮತ್ತು ಜೀವನ ಭದ್ರತೆ ಇಲ್ಲ. ಹೀಗಾಗಿ ಕೆಲಸ ಖಾಯಂಗೊಳಿಸಬೇಕು ಎಂದು ಬೇಡಿಕೆ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷೆ ಎಚ್.ನಿರ್ಮಲಾ ಮಾತನಾಡಿ, ಸೇವೆ ಖಾಯಂಗೊಳಿಸದೆ ಗೌರವ ಸಂಭಾವನೆಯ ಹೆಸರಿನಲ್ಲಿ ಸರ್ಕಾರ ಮಹಿಳೆಯರನ್ನು ಶೋಷಿಸುತ್ತಿದೆ. ಮುಖ್ಯ ಅಡುಗೆಯವರಿಗೆ 2,700 ರೂ. ಹಾಗೂ ಸಹಾಯಕಿಯರಿಗೆ 2600 ರೂ. ನೀಡಲಾಗುತ್ತಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿವುದನ್ನೇ ನೆಪ ಮಾಡಿ ಬಿಸಿಯೂಟ ತಯಾರಕಿಯರನ್ನು ಕೆಲಸದಿಂದ ತೆಗೆದು ಹಾಕಬಾರದು. ಗುಣಮಟ್ಟದ ಆಹಾರ ಪೂರೈಸಬೇಕು. 60 ವರ್ಷ ದಾಟಿದ ಸಹಾಯಕಿಯರನ್ನು ಸೇವೆಯಿಂದ ಬಿಡುಗಡೆಗೊಳಿಸಿದಾಗ 2 ಲಕ್ಷ ರೂಪಾಯಿ ನೀಡಬೇಕು. ಬಿಸಿಯೂಟ ತಯಾರಕಿಯರಿಗೆ ದಸರಾ ಹಾಗೂ ಬೇಸಿಗೆ ರಜೆ ಸಂಬಳ ನೀಡಬೇಕು. ಅಸಂಘಟಿತ ಕಾರ್ವಿುಕರ ಸಾಮಾಜಿಕ ಭದ್ರತೆ ಮಂಡಳಿಯಿಂದ ಸಹಾಯಕಿಯರಿಗೆ 5 ಲಕ್ಷ ರೂಪಾಯಿ ವಿಮೆ ಯೋಜನೆಯನ್ನು ಶಿಕ್ಷಣ ಇಲಾಖೆ ಅನುಷ್ಠಾನಗೊಳಿಸಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶೀಘ್ರ ಬಿಸಿಯೂಟ ತಯಾರಕರ ಸಮಸ್ಯೆ ಬಗೆಹರಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಆಯೋಜಿಸಬೇಕು ಎಂದು ಆಗ್ರಹಿಸಿದರು.

ಫೆಡರೇಷನ್ ಕಾರ್ಯದರ್ಶಿ ಎಂ.ಲತಾ, ಜಿಲ್ಲಾ ಸಂಚಾಲಕಿ ರೋಸ್ ಮೇರಿ, ಎಸ್​ಡಿಎಂಸಿ ಅಧ್ಯಕ್ಷ ಶಂಭುಗೌಡ, ಕಾರ್ಯದರ್ಶಿ ಪಟೇಲ್ ರಾಜು ದ್ದರು.

ವಿವಿಧ ಬೇಡಿಕೆಗಳು

1. ಕನಿಷ್ಠ ವೇತನ 10,500 ರೂಪಾಯಿ ನೀಡಬೇಕು.

2. ಬಿಸಿಯೂಟ ತಯಾರಕರಿಗೆ ತಮಿಳುನಾಡು ಮಾದರಿ ಸವಲತ್ತು ಒದಗಿಸಬೇಕು.

3. ಬಿಸಿಯೂಟ ತಯಾರಕರಿಗೆ ಪಿಎಫ್ ಮತ್ತು ಇಎಸ್​ಐ ಸೌಲಭ್ಯ ನೀಡಬೇಕು.

4. ಮಾಸಿಕ ನಿವೃತ್ತಿ ಪಿಂಚಣಿ 3000 ರೂಪಾಯಿ ಒದಗಿಸಬೇಕು.