ಬಿಸಿಎಂ ಹಾಸ್ಟೆಲ್​ಗೆ ದಿಢೀರ್ ಭೇಟಿ

ಮಾಗಡಿ: ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ ಬುಧವಾರ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ನೋಡಿ ವಾರ್ಡ್​ನ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಮೆಟ್ರಿಕ್ ನಂತರ ಬಾಲಕರ ನಿಲಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ಯುಪಿಎಸ್ ವ್ಯವಸ್ಥೆ ಇಲ್ಲ. ಬಿಸಿ ನೀರು ಬರುತ್ತಿಲ್ಲ. ವಾರ್ಡನ್ ಯಾವಾಗಲಾದರೂ ಒಮ್ಮೆ ಹಾಸ್ಟೆಲ್​ಗೆ ಭೇಟಿ ನೀಡಿ ಹೋಗುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಅಡುಗೆ ಮಾಡುವವರದ್ದೇ ಎಲ್ಲ ಜವಾಬ್ದಾರಿಯಾಗಿದ್ದು, ಶೌಚಗೃಹ ಶುಚಿಯಾಗಿಲ್ಲ. ರಜ ೆದಿನಗಳಲ್ಲಿ ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿಗಳು ಇರಬಾರದು ಎಂದು ಹೇಳುತ್ತಿದ್ದಾರೆ. ಮಧ್ಯಾಹ್ನ ವಿದ್ಯಾರ್ಥಿಗಳು ಕಾಲೇಜಿನಿಂದ ಸ್ವಲ್ಪ ತಡವಾಗಿ ಬಂದರೆ ಊಟದ ವ್ಯವಸ್ಥೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಭಾನುವಾರ ಹಾಸ್ಟೆಲ್​ನಲ್ಲಿ ಇರಬಾರದು ಎನ್ನುತ್ತಿದ್ದಾರೆ. ಕಲಬುರಗಿ, ಮೈಸೂರು, ಬೆಂಗಳೂರು ಹುಲಿದುರ್ಗ ಸೇರಿ ಹಲವು ದೂರದ ಊರುಗಳಿಂದ ಬಂದಿದ್ದು, ರಜಾದಿನಗಳಲ್ಲಿ ಇರಬಾರದು ಎಂದರೆ ಎಲ್ಲಿಗೆ ಹೋಗಬೇಕು? ಈ ಬಗ್ಗೆ ಕೂಡಲೇ ಮೇಲಧಿಕಾರಿ ಗಮನಕ್ಕೆ ತಂದು ವಾರ್ಡನ್ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಧನಂಜಯ ನಾಯ್ಕ ಹೇಳಿದರು. ರಜಾ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಬೇಡಿ ಎಂದು ಅಡುಗೆ ಮಾಡುವರನ್ನು ತರಾಟೆಗೆ ತೆಗೆದುಕೊಂಡರು.

ತಾಪಂ ಸಭೆಯಲ್ಲಿ ಚರ್ಚೆ: ಆರು ತಿಂಗಳ ಹಿಂದೆ ಭೇಟಿ ಕೊಟ್ಟಾಗ ಹಾಸ್ಟೆಲ್ ಉತ್ತಮ ಸ್ಥಿತಿಯಲ್ಲಿ ಇತ್ತು. ಈಗ ಸಾಕಷ್ಟು ಸಮಸ್ಯೆಗಳಿದ್ದು, ಈ ಬಗ್ಗೆ ತಾಪಂ ಸಭೆಯಲ್ಲಿ ರ್ಚಚಿಸುತ್ತೇನೆ ಎಂದು ಧನಂಜಯ ನಾಯ್ಕ ತಿಳಿಸಿದರು.