ಬಿವೈಆರ್ ಮೂರನೇ ಬಾರಿ ಕಣಕ್ಕೆ

ಶಿವಮೊಗ್ಗ: ನಿರೀಕ್ಷೆಯಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿ.ವೈ. ರಾಘವೇಂದ್ರ ಅವರ ಹೆಸರು ಘೊಷಣೆ ಮಾಡಲಾಗಿದ್ದು, ಒಂದು ಸಾರ್ವತ್ರಿಕ ಮತ್ತೊಂದು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎರಡೂ ಚುನಾವಣೆಗಳಲ್ಲಿ ಜಯಗಳಿಸಿರುವ ಅವರು ಮೂರನೇ ಚುನಾವಣೆಗೆ ಸಜ್ಜಾಗಿದ್ದಾರೆ.

ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿಯಲಿದ್ದು, ಮಾಜಿ ಸಿಎಂ ಪುತ್ರರ ನಡುವೆ ಮತ್ತೊಂದು ಕದನಕ್ಕೆ ವೇದಿಕೆ ಸಜ್ಜಾಗಿದೆ.

ಕೆಲ ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ರಾಘವೇಂದ್ರ ಅವರೊಂದಿಗೆ ಇನ್ನೂ ಹಲವರು ಟಿಕೆಟ್​ಗೆ ಬೇಡಿಕೆ ಇಟ್ಟಿದ್ದರು. ಆದರೆ ಈ ಬಾರಿ ರಾಘವೇಂದ್ರ ಅವರೊಂದಿಗೆ ಯಾರೂ ಆಕಾಂಕ್ಷಿಗಳಿರಲಿಲ್ಲ

2009ರಲ್ಲಿ ಮಾಜಿ ಸಿಎಂ, ಕಾಂಗ್ರೆಸ್ ಅಭ್ಯರ್ಥಿ ಎಸ್.ಬಂಗಾರಪ್ಪ ವಿರುದ್ಧ ಸ್ಪರ್ಧೆ ಮಾಡಿದ್ದ ರಾಘವೇಂದ್ರ ಅವರು 52,893 ಮತಗಳಿಂದ ಜಯಗಳಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ನಂತರ ನಡೆದ ರಾಜಕೀಯ ಸ್ಥಿತ್ಯಂತರದಲ್ಲಿ ಲೋಕಸಭಾ ಸದಸ್ಯ ಸ್ಥಾನವನ್ನು ತಂದೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಟ್ಟುಕೊಟ್ಟು ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಚುನಾಯಿತರಾಗಿದ್ದರು. ಕಾಂಗ್ರೆಸ್​ನ ಎಚ್.ಎಸ್.ಶಾಂತವೀರಪ್ಪಗೌಡ ವಿರುದ್ಧ ಕೇವಲ 6,430 ಮತಗಳಿಂದ ಗೆಲುವು ಸಾಧಿಸಿದ್ದರು. ವಿಶೇಷವೆಂದರೆ ವಿಧಾನಸಭೆಗೂ ಇದು ಮೊದಲ ಪ್ರವೇಶವಾಗಿತ್ತು.

ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ ಕ್ಷೇತ್ರಕ್ಕೆ 2018ರ ನವೆಂಬರ್​ನಲ್ಲಿ ನಡೆದ ಲೋಕಸಭೆ ಉಪಚುನಾವಣೆಗೆ ಸ್ಪರ್ಧೆ ಮಾಡಿದ್ದ ರಾಘವೇಂದ್ರ, ಎದುರಾಳಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು 52 ಸಾವಿರ ಮತಗಳಿಂದ ಸೋಲಿಸಿ ಎರಡನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಟಿಕೆಟ್ ಘೊಷಣೆ ಆಗಿದ್ದು ಮತ್ತೆ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧವೇ ಸ್ಪರ್ಧಿಸಲಿದ್ದಾರೆ.

ಟಿಕೆಟ್ ಆಕಾಂಕ್ಷಿಗಳೇ ಇಲ್ಲ:2018ರ ಲೋಕಸಭೆ ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳ ದಂಡು ದೊಡ್ಡದಾಗಿತ್ತು. ಬಿಜೆಪಿ ಮುಖಂಡರಾದ ಎಸ್.ದತ್ತಾತ್ರಿ, ಮಾಜಿ ಎಂಎಲ್​ಸಿ ಭಾನುಪ್ರಕಾಶ್ ಸೇರಿ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಕೊನೆಗೂ ಬಿಜೆಪಿ ಹೈಕಮಾಂಡ್ ರಾಘವೇಂದ್ರ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಸಾರ್ವತ್ರಿಕ ಚುನಾವಣೆಗೆ ಬಿಜೆಪಿಯಿಂದ ಯಾರೊಬ್ಬರೂ ಟಿಕೆಟ್ ಆಕಾಂಕ್ಷಿಗಳೇ ಇಲ್ಲದಂತಾಗಿ ರಾಘವೇಂದ್ರ ಅವರಿಗೆ ಸುಲಭವಾಗಿ ಟಿಕೆಟ್ ದಕ್ಕಿದೆ.

Leave a Reply

Your email address will not be published. Required fields are marked *