ಬಿವೈಆರ್ ಗೆಲುವಿಗೆ ಕಾರ್ಯಕರ್ತರ ಸಂಭ್ರಮ

ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಬಿ.ವೈ.ರಾಘವೇಂದ್ರ ಅವರು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.

ನಗರದ ಶಿವಪ್ಪ ನಾಯಕ ವೃತ್ತ, ಹೊಳೆ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣದ ಅಶೋಕ ವೃತ್ತ ಸೇರಿ ಹಲವೆಡೆ ಪಟಾಕಿ ಸಿಡಿಸಿ, ತಮಟೆ ಬಾರಿಸಿ ಸಂಭ್ರಮಿಸಿದರು. ಮತ ಎಣಿಕೆ ಕೇಂದ್ರವಾದ ಸಹ್ಯಾದ್ರಿ ಕಾಲೇಜು ಎದುರಿನ ಬಿ.ಎಚ್.ರಸ್ತೆಯಲ್ಲಿ ಬೆಳಗ್ಗೆಯಿಂದಲೇ ನೂರಾರು ಕಾರ್ಯಕರ್ತರು ಬಿಸಿಲನ್ನೂ ಲೆಕ್ಕಿಸದೇ ಫಲಿತಾಂಶಕ್ಕೆ ಕಾದು ಕುಳಿತಿದ್ದರು.

ಪ್ರತಿ ಸುತ್ತಿನ ಮತ ಎಣಿಕೆ ಮುಕ್ತಾಯಗೊಳ್ಳುತ್ತಿದ್ದಂತೆ ಆಗೊಮ್ಮೆ ಈಗೊಮ್ಮೆ ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಜಯಘೋಷ ಮೊಳಗಿಸುತ್ತಿದ್ದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಸೇರಿ ಮೈತ್ರಿ ಸರ್ಕಾರದ ಹಲವು ಸಚಿವರ ವಿರುದ್ಧ ಹರಿಹಾಯ್ದರು.

ಬಿಕೋ ಎನ್ನುತ್ತಿದ್ದ ಬಿ.ಎಚ್.ರಸ್ತೆ:ಫಲಿತಾಂಶ ಹಿನ್ನೆಲೆಯಲ್ಲಿ ಸಹ್ಯಾದ್ರಿ ಕಾಲೇಜು ಎದುರಿನ ಬಿ.ಎಚ್.ರಸ್ತೆ ಜನ, ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಭದ್ರತೆ ಕಲ್ಪಿಸಿದ್ದರಿಂದ ಯಾವುದೇ ಗಲಾಟೆಗಳಿಗೆ ಪೊಲೀಸರು ಆಸ್ಪದ ನೀಡಲಿಲ್ಲ. ಗುಂಪು ಸೇರುತ್ತಿದ್ದ ಕಾರ್ಯಕರ್ತರನ್ನು ಚದುರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಧ್ಯಾಹ್ನದವರೆಗೆ ಬೆರಳೆಣಿಕೆಯಷ್ಟು ಕಾರ್ಯಕರ್ತರು, ಅಭಿಮಾನಿಗಳು ಮಾತ್ರ ಸ್ಥಳದಲ್ಲಿದ್ದರು. ರಾಘವೇಂದ್ರ ಗೆಲುವು ಖಚಿತವಾಗುತ್ತಿದ್ದಂತೆಯೇ ನಿಧಾನವಾಗಿ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಹೊರ ಭಾಗದಲ್ಲಿ ಜಮಾಯಿಸ ತೊಡಗಿದರು. ಬಿ.ವೈ.ರಾಘವೇಂದ್ರ ಆಗಮನದ ಬಳಿಕ ಕಾರ್ಯಕರ್ತರ ಸಂತಸ ಮುಗಿಲುಮುಟ್ಟಿತ್ತು.

ಶಿವಮೊಗ್ಗದಲ್ಲೂ ಮಂಡ್ಯ ಬಗ್ಗೆ ಬಿಸಿ ಬಿಸಿ ಚರ್ಚೆ:ಸಾಮಾನ್ಯವಾಗಿ ಕ್ಷೇತ್ರ ಅಥವಾ ಕೇಂದ್ರದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆಂದು ಚರ್ಚೆ ನಡೆಸುವುದು ಸಾಮಾನ್ಯ. ಆದರೆ ಈ ಬಾರಿ ಇಡೀ ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಶಿವಮೊಗ್ಗದಲ್ಲೂ ಗುರುವಾರ ಚರ್ಚೆಗಳು ನಡೆದವು. ಮಂಡ್ಯದಲ್ಲಿ ಯಾರು ಮುನ್ನಡೆ ಕಾಯ್ದುಕೊಂಡಿದ್ದಾರೆ ?, ಎಷ್ಟು ಲೀಡ್ ಪಡೆದಿದ್ದಾರೆ ? ಸುಮಲತಾ ಅವರ ಫಲಿತಾಂಶ ಏನಾಯ್ತು ? ಎಂದು ಪೊಲೀಸರಾಧಿಯಾಗಿ ಪರಸ್ಪರ ಪಶ್ನಿಸಿಕೊಳ್ಳುತ್ತಿದ್ದರು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಮುನ್ನಡೆ ಸಾಧಿಸುತ್ತಿದ್ದ ದೃಶ್ಯಗಳನ್ನು ಟಿವಿ, ಮೊಬೈಲ್​ಗಳ ಮೂಲಕ ತಿಳಿದು ಸಂತಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮೈತ್ರಿ ನಾಯಕರ ಕಾಲೆಳೆದ ಕಾರ್ಯಕರ್ತರು:ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಗೆಲುವು ಖಚಿತವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಿಎಂ ಕುಮಾರಸ್ವಾಮಿ, ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ, ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಕಾಲೆಳೆದರು. ನಿಖಿಲ್ ಎಲ್ಲಿದ್ದಿಯಪ್ಪಾ?, ರೇವಣ್ಣಗೆ ನಿಂಬೆ ಹಣ್ಣು ತರಲು ಹೇಳ್ರೋ ?, ಯಾವ ಟ್ರಬಲ್ ಶೂಟರ್ ಬಂದ್ರೂ ಏನೂ ಮಾಡಲು ಆಗುವುದಿಲ್ಲವೆಂದು ಸಚಿವ ಡಿ.ಕೆ.ಶಿವಕುಮಾರ್ ಕಾಲೆಳೆದರು. ಇನ್ಮುಂದೆ ಸಿದ್ದರಾಮಯ್ಯ ನಿದ್ದೆ ಮಾಡುವುದೇ ಸೂಕ್ತ ಎಂದು ಕಿಚಾಯಿಸಿದರು.

ಫಲಿತಾಂಶಕ್ಕೆ ಬಿಸಿಲಲ್ಲೂ ಲೆಕ್ಕಿಸದೇ ಕಾದರು: ಶಿವಮೊಗ್ಗದಲ್ಲಿ ಬಿಸಿಲ ತಾಪಮಾನಕ್ಕಿಂತ ಲೋಕಸಭೆ ಚುನಾವಣೆ ಫಲಿತಾಂಶ ಕಾವು ಹೆಚ್ಚಾಗಿತ್ತು. ಆದರೂ ತಾಳ್ಮೆಯಿಂದಲೇ ಮಧ್ಯಾಹ್ನದವರೆಗೆ ಬಿರುಬಿಸಿಲಲ್ಲೇ ಕಾರ್ಯಕರ್ತರು ಕಾದು ಕುಳಿತರು. ಗೆಲುವಿನ ನಗೆ ಬೀರಿದ ಬಿ.ವೈ.ರಾಘವೇಂದ್ರ ಸೇರಿ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ ಮುಖಂಡರ ಪರ ಘೋಷಣೆ ಕೂಗಿದರು. ಇದೇವೇಳೆ ಅಭಿಮಾನಿಗಳು ರಾಘವೇಂದ್ರ ಅವರನ್ನು ಹೆಗಲ ಮೇಲೆ ಹೊತ್ತ ಸಂಭ್ರಮಿಸಿದರು.

Leave a Reply

Your email address will not be published. Required fields are marked *